ADVERTISEMENT

ಜೋಳ ಕಟಾವಿಗೆ ಯಂತ್ರಗಳ ಮೊರೆ

ಮೋಡ ಕವಿದ ವಾತಾವರಣದಿಂದ ಕಂಗಾಲಾದ ರೈತರು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 2:55 IST
Last Updated 14 ನವೆಂಬರ್ 2022, 2:55 IST
ಆಲೂರು ತಾಲ್ಲೂಕಿನ ಮರಸು ಹೊಸಳ್ಳಿ ಗ್ರಾಮದಲ್ಲಿ ಬಾಲಕೃಷ್ಣ ಅವರ ಹೊಲದಲ್ಲಿ ಯಂತ್ರದಿಂದ ಜೋಳ ಕಟಾವು ಮಾಡಿ ವಿಂಗಡಣೆ ಮಾಡುತ್ತಿರುವುದು
ಆಲೂರು ತಾಲ್ಲೂಕಿನ ಮರಸು ಹೊಸಳ್ಳಿ ಗ್ರಾಮದಲ್ಲಿ ಬಾಲಕೃಷ್ಣ ಅವರ ಹೊಲದಲ್ಲಿ ಯಂತ್ರದಿಂದ ಜೋಳ ಕಟಾವು ಮಾಡಿ ವಿಂಗಡಣೆ ಮಾಡುತ್ತಿರುವುದು   

ಆಲೂರು: ಮಳೆಯ ಆಟಕ್ಕೆ ನಲುಗಿರುವ ರೈತಾಪಿ ಜನರು, ಬಿಡುವು ನೀಡಿದಾಗಲೇ ಜೋಳದ ಕಟಾವು ಮಾಡಲು ಮುಂದಾಗಿದ್ದಾರೆ. ಕೆಲ ದಿನಗಳಿಂದ ಬಿಡುವು ಪಡೆದಿದ್ದು, ಮಳೆ ಮತ್ತೆ ಸುರಿಯುವ ಲಕ್ಷಣಗಳು ಕಾಣುತ್ತಿದ್ದು, ಜೋಳದ ಶೀಘ್ರ ಕಟಾವು ಮಾಡಲು ಯಂತ್ರಗಳಿಗೆ ಮೊರೆ ಹೋಗಿದ್ದಾರೆ.

ಜೋಳ ಮುರಿಯುವುದು, ಶುಂಠಿ ಕೀಳುವುದು ಎರಡೂ ಒಂದೇ ಕಾಲದಲ್ಲಿ ಬಂದಿರುವುದರಿಂದ ಕೃಷಿ ಕಾರ್ಮಿಕರ ಅಭಾವ ತೀವ್ರವಾಗಿದೆ. ಅಲ್ಲದೇ ಮಳೆ ಯಾವಾಗ ಸುರಿಯುತ್ತದೆಯೋ ಎನ್ನುವ ಆತಂಕವೂ ಕಾಡುತ್ತಿದೆ.

ಜೋಳ ಮುರಿದು ಒಂದು ತಿಂಗಳು ಕಳೆಯಬೇಕಾಗಿತ್ತು. ಪದೇ ಪದೇ ಮಳೆ ಸುರಿದಿದ್ದರಿಂದ ಕಟಾವು ಮಾಡಲು ಹಿನ್ನಡೆ ಉಂಟಾಗಿದೆ. 3–4 ದಿನ ಸ್ವಲ್ಪ ಮಳೆ ಬಿಡುವುದು ನೀಡಿತ್ತು. ಇದೀಗ ಮತ್ತೆ ಮೋಡ ಆವರಿಸಿದ್ದು, ಇರುವ ಬೆಳೆಯೂ ಹಾಳಾಗುವ ಆತಂಕ ರೈತರನ್ನು ಕಾಡುತ್ತಿದೆ. ತರಾತುರಿಯಲ್ಲಿ ಯಂತ್ರಗಳ ಮೂಲಕ ಕಟಾವು ಮಾಡುವುದು ಅನಿವಾರ್ಯ ಎನ್ನುತ್ತಿದ್ದಾರೆ ರೈತರು.

ADVERTISEMENT

ಕಾರ್ಮಿಕರ ಕೊರತೆ: ಶುಂಠಿ ಕೀಳಲು ಹೆಚ್ಚು ಕಾರ್ಮಿಕರ ಅವಶ್ಯಕತೆ ಇರುವುದರಿಂದ ಬಹುತೇಕ ಕಾರ್ಮಿಕರು ಶುಂಠಿ ಕೆಲಸದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಜೋಳದ ಕಟಾವಿಗೆ ಕಾರ್ಮಿಕರ ಕೊರತೆ ಎದುರಾಗಿದೆ. ಇದೆಲ್ಲವನ್ನು ನೀಗಿಸುವುದಕ್ಕೆ ಯಂತ್ರಗಳನ್ನು ಬಳಸಬೇಕಾಗಿದೆ.

ಜೊತೆಗೆ ಕೃಷಿ ಕೂಲಿ ಕಾರ್ಮಿಕರ ದಿನಗೂಲಿಯೂ ಹೆಚ್ಚಿದ್ದು, ಯಂತ್ರಗಳ ಮೂಲಕ ಕಟಾವು ಮಾಡಿಸಿದಲ್ಲಿ, ಬಹುತೇಕ ಕೆಲಸ ಉಳಿಯಲಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಕಟಾವು ಮಾಡಬಹುದು ಎನ್ನುವುದು ರೈತರ ಮಾತು.

ಒಂದು ಎಕರೆ ಹೊಲದಲ್ಲಿ ಜೋಳ ಮುರಿದು, ಒಂದು ಜಾಗದಲ್ಲಿ ಗುಡ್ಡೆ ಮಾಡಲು ಕನಿಷ್ಠ 6 ರಿಂದ 8 ಜನ ಬೇಕು. ಜೋಳವನ್ನು ಬಿಡಿಸಲು ₹ 2ರಿಂದ ₹3 ಸಾವಿರ ಖರ್ಚಾಗುತ್ತದೆ. ಒಟ್ಟು ₹ 7 ರಿಂದ ₹ 7.5 ಸಾವಿರ ಕಾರ್ಮಿಕರಿಗೆ ಖರ್ಚಾಗುತ್ತದೆ. ಸಮಯವೂ ಅಧಿಕವಾಗಿ ಬೇಕು.

‘ಯಂತ್ರವು ಜೋಳ ಕಟಾವು ಮಾಡಿ, ತೆನೆಯಿಂದ ಕಾಳನ್ನು ವಿಂಗಡಣೆ ಮಾಡಲು ಒಂದು ಎಕರೆಗೆ ಒಂದರಿಂದ ಒಂದು ಕಾಲು ಗಂಟೆ ಸಮಯ ಬೇಕಾಗುತ್ತದೆ. ಗಿಡವನ್ನು ಮುರಿದು ತೆನೆಯಿಂದ ಜೋಳವನ್ನು ಬಿಡಿಸಿ ಒಮ್ಮೆಗೆ ಸುಮಾರು 8ರಿಂದ 10 ಕ್ವಿಂಟಲ್‍ನಷ್ಟು ಒಂದೆಡೆಗೆ ಸುರಿಯುತ್ತದೆ. ಜೋಳದ ಗಿಡ ಪುಡಿಯಾಗುವುದರಿಂದ ಹೊಲಕ್ಕೆ ಗೊಬ್ಬರವಾಗುತ್ತದೆ. ಇಷ್ಟು ಕೆಲಸಕ್ಕೆ ₹ 2,800 ಖರ್ಚಾಗುತ್ತದೆ. ಸಮಯ ಉಳಿಯುತ್ತದೆ’ ಎನ್ನುವ ಮಾತು ರೈತರಿಂದ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.