ADVERTISEMENT

ಹಾಸನ | ಖಾಸಗಿ ವಾಹಿನಿಗೆ ದುಡ್ಡು ಹಾಕಿದ್ದ ಉದ್ಯಮಿ: ವಾಪಸ್‌ ಕೇಳಿದ್ದಕ್ಕೆ ಕೊಲೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 13:10 IST
Last Updated 12 ಆಗಸ್ಟ್ 2023, 13:10 IST
ಸುರೇಶ್‌
ಸುರೇಶ್‌   

ಹಾಸನ: ನಗರದ ಹೊರವಲಯದ ನಾಗತಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ನಡೆದಿದ್ದ ಗ್ರಾನೈಟ್‌ ಉದ್ಯಮಿ ಕೃಷ್ಣೇಗೌಡರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆಗೆ ಸಹಕಾರ ನೀಡಿದ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಯೋಗಾನಂದ ಸೇರಿದಂತೆ ಇನ್ನೂ ಹಲವರಿಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಕೊಲೆ ಪ್ರಕರಣದ ಪ್ರಮುಖ ಆರೋಪಿ ಯೋಗಾನಂದ್ ಸ್ಥಳೀಯ ಚಾನಲ್ ನಡೆಸುತ್ತಿದ್ದು, ನಾಪತ್ತೆಯಾಗಿದ್ದಾನೆ. ಬಂಧಿತರಲ್ಲಿ ಯೋಗಾನಂದನ ಚಾನೆಲ್‌ನ ಪಾಲುದಾರ ಸುರೇಶ್, ಯೋಗಾನಂದನ ಪತ್ನಿ ಸುಧಾರಾಣಿ, ಗೆಳತಿ ಅಶ್ವಿನಿ, ಮಾವ ಕೃಷ್ಣಕುಮಾರ್, ಸಂಬಂಧಿ ವೆಂಕಟೇಶ್‌ ಉರುಫ್‌ ಸಂಜೀವ್‌ ಮತ್ತು ಸಂಜೀವ್‌ ಪತ್ನಿ ಚೈತ್ರಾ ಸೇರಿದ್ದಾರೆ.

ADVERTISEMENT

ಹತ್ಯೆಗೆ ಬಳಸಿದ್ದ ಆಟೊವನ್ನು ಹೇಮಾವತಿ ನಗರದಿಂದ ವಶಕ್ಕೆ ಪಡೆಯಲಾಗಿದ್ದು, ಹತ್ಯೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಲೆಗೆ ಕಾರಣ: ಕೃಷ್ಣೇಗೌಡರ ಹತ್ಯೆಗೆ ಪ್ರಮುಖವಾಗಿ ಹಣಕಾಸಿನ ವ್ಯವಹಾರವೇ ಕಾರಣ ಎನ್ನುವುದು ಪತ್ತೆಯಾಗಿದೆ.

2019ರಲ್ಲಿ ಹಾಸನದಲ್ಲಿ ಖಾಸಗಿ ಸುದ್ದಿ ವಾಹಿನಿ ಮಾಡಲು ಹೋಟೆಲ್ ಉದ್ಯಮಿ ಸುರೇಶ್ ಹಾಗೂ ಯೋಗಾನಂದ ಸೇರಿ, ಕೃಷ್ಣೇಗೌಡರಿಂದ ಹಣ ಹಾಕಿಸಿದ್ದರು. ಇದಲ್ಲದೇ ಸಿನಿಮಾ ಹೆಸರಿನಲ್ಲಿಯೂ ಯೋಗಾನಂದ, ಕೃಷ್ಣೇಗೌಡರಿಂದ ಬಂಡವಾಳ ಹಾಕಿಸಿದ್ದ. ವಾಮಾಚಾರ ಎಂಬಿತ್ಯಾದಿ ಹೆಸರಿನಲ್ಲಿಯೂ ಹಣ ಪಡೆದಿದ್ದರು ಎಂದು ಎಸ್ಪಿ ಹರಿರಾಂ ಶಂಕರ್‌ ತಿಳಿಸಿದರು.

ಆ ಬಳಿಕ ಯೋಗಾನಂದನಿಂದ ಮೋಸವಾಗುತ್ತಿದೆ ಎಂಬುದು ಗೊತ್ತಾಗಿದ್ದರಿಂದ, ಕೃಷ್ಣೇಗೌಡರು ತಾವು ಹಾಕಿದ್ದ ಹಣ ವಾಪಸ್‌ ಕೊಡುವಂತೆ ಕೇಳಿದ್ದರು. ಯೋಗಾನಂದನನ್ನು ತಮ್ಮ ಗ್ರಾನೈಟ್ ಫ್ಯಾಕ್ಟರಿಗೆ ಕರೆ ತಂದು ಹಲ್ಲೆ ನಡೆಸಿದ್ದರು. ಈ ವೇಳೆ ಯೋಗಾನಂದ ಪತ್ನಿ ಹೆಸರಿನಲ್ಲಿದ್ದ ಆಸ್ತಿಯನ್ನು ಕೃಷ್ಣೇಗೌಡರ ಹೆಸರಿಗೆ ಅಗ್ರಿಮೆಂಟ್ ಮಾಡಿಸಲಾಗಿತ್ತು. ಬಳಿಕ ಕೃಷ್ಣೇಗೌಡರ ಮೇಲೆ ಅಪಹರಣ, ಹಲ್ಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ತನಿಖೆ ಹಂತದಲ್ಲಿದೆ ಎಂದು ಹೇಳಿದರು.

6 ತಿಂಗಳ ಹಿಂದೆಯೇ ಸಂಚು
ಕೃಷ್ಣೇಗೌಡರಿಂದ ₹ 4 ಕೋಟಿಗೂ ಹೆಚ್ಚು ಹಣವನ್ನು ಯೋಗಾನಂದ ಪಡೆದಿದ್ದು ಈ ಹಣವನ್ನು ಹಿಂದಿರುಗಿಸುವ ಬದಲು ಕೃಷ್ಣೇಗೌಡರನ್ನೇ ಕೊಲೆ ಮಾಡುವ ಯೋಜನೆ ರೂಪಿಸಲಾಗಿತ್ತು. ಎರಡು ವರ್ಷದ ಹಿಂದೆ ಖಾಸಗಿ ವಾಹಿನಿ ಪಾಲುದಾರನಾಗಿದ್ದ ಸುರೇಶ್ ಹಾಗೂ ಯೋಗಾನಂದ ಸೇರಿ ಕೊಲೆಯ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಎಸ್ಪಿ ಹೇಳಿದರು. ಕೃಷ್ಣೇಗೌಡರಿಗೂ ಕೊಲೆ ಸಂಚಿನ ಬಗ್ಗೆ ತಿಳಿದಿತ್ತು. ಕೃಷ್ಣೇಗೌಡರ ಕೊಲೆಗೆ ಸಂಚು ರೂಪಿಸಿದ್ದ ಧ್ವನಿ ಮುದ್ರಿಕೆ (ಆಡಿಯೋ ರೆಕಾರ್ಡ್) ಕೃಷ್ಣೇಗೌಡರಿಗೆ ದೊರೆತಿತ್ತು.  ಆದರೂ ಕೃಷ್ಣೇಗೌಡರು ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿರಲಿಲ್ಲ. ಯಾವುದೇ ದೂರು ದಾಖಲಿಸಿರಲಿಲ್ಲ ಎಂದು ವಿವರಿಸಿದರು.

ಆರೋಪಿ ವೆಂಕಟೇಶ್‌ ಊರ್ಫ್‌ ಸಂಜೀವ್‌, ಕೃಷ್ಣೇಗೌಡರ ಕೊಲೆಗೆ ಸುಪಾರಿ ಹಂತಕರನ್ನು ಹುಡುಕುವಲ್ಲಿ ನೆರವಾಗಿದ್ದ. ಕೃಷ್ಣೇಗೌಡರ ಕೊಲೆ ಆರೋಪಿಗಳಿಗೆ ಸುರೇಶ್ ದುಡ್ಡು ನೀಡಿದ್ದ. ಸುಧಾರಾಣಿ ಹೆಸರಿನಲ್ಲಿದ್ದ ಆಸ್ತಿಯು ಕೃಷ್ಣೇಗೌಡರಿಗೆ ಹೋಗದಂತೆ ತಡೆಯಲು ಈ ಕೊಲೆ ನಡೆಸಲಾಗಿದೆ ಎಂಬ ಆರೋಪದ ಮೇಲೆ ಸುಧಾರಾಣಿಯನ್ನು ಬಂಧಿಸಲಾಗಿದೆ. ಅಶ್ವಿನಿ ಹೆಸರಿನಲ್ಲಿ ಯೋಗಾನಂದ ಸಾಕಷ್ಟು ಹಣ ಹೂಡಿಕೆ ಮಾಡಿರುವುದು ಹಾಗೂ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಬಂಧಿಸಲಾಗಿದೆ. ಚೈತ್ರಾ ಎಂಬುವವರನ್ನೂ ಇದೇ ವಿಚಾರದಲ್ಲಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.