ADVERTISEMENT

ನಂಬಿಹಳ್ಳಿ ಘರ್ಷಣೆ: ತನಿಖೆಗೆ ಆಗ್ರಹ

ಶಾಂತಿಯುತ ಪ್ರತಿಭಟನೆಗೆ ನಿರ್ಧಾರ, ಸಾವಿರಾರು ಕಾರ್ಯಕರ್ತರು ಭಾಗಿ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 14:41 IST
Last Updated 5 ಡಿಸೆಂಬರ್ 2019, 14:41 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ನಂಬಿಹಳ್ಳಿಯಲ್ಲಿ ನಡೆದ ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರ ಘರ್ಷಣೆ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಶಾಸಕ ಎಚ್.ಡಿ.ರೇವಣ್ಣ ಸರ್ಕಾರವನ್ನು ಆಗ್ರಹಿಸಿದ್ದಾರೆ.

‘ನಂಬಿಹಳ್ಳಿಯಲ್ಲಿ ಘರ್ಷಣೆ ನಡೆದ ವೇಳೆ ತಮ್ಮ ಪುತ್ರ ಜೆಡಿಎಸ್‌ ಯುವ ಮುಖಂಡ ಡಾ.ಸೂರಜ್‌ ರೇವಣ್ಣ ಸ್ಥಳದಲ್ಲಿ ಇಲ್ಲದಿದ್ದರೂ ಎಫ್‌ಐಆರ್‌ ದಾಖಲಿಸಲಾಗಿದೆ. ಸೂರಜ್‌ ತಪ್ಪು ಮಾಡಿದ್ದರೆ ಬಂಧಿಸಲಿ. ಘಟನೆ ಕುರಿತು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ ಕಾರಣ ಆಯೋಗ ವಿಚಾರಣೆಗೆ ಆದೇಶಿಸಿದೆ. ಈ ವಿಷಯವನ್ನು ಪೊಲೀಸ್‌ ಮಹಾನಿರ್ದೇಶಕರ ಗಮನಕ್ಕೂ ತರಲಾಗಿದೆ. ದಕ್ಷಿಣ ವಲಯ ಐಜಿಪಿ ವಿಫುಲ್‌ ಕುಮಾರ್‌ಗೆ ಕಾರಣ ಕೇಳಿ ಆಯೋಗ ನೋಟಿಸ್‌ ಜಾರಿ ಮಾಡಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಘಟನೆಯ ಹಿನ್ನಲೆಯಲ್ಲಿ ಚನ್ನರಾಯಪಟ್ಟಣಕ್ಕೆ ಭೇಟಿ ನೀಡಿದ್ದ ಚುನಾವಣಾ ವೀಕ್ಷಕ ಮೌನೇಶ್‌ ಮುದ್ಗಿಲ್‌ ಅವರನ್ನು ಭೇಟಿ ಮಾಡಿ, ಘಟನೆ ಕುರಿತು ದೂರು ನೀಡಲಾಗಿದೆ. ಸಮಗ್ರವಾಗಿ ತನಿಖೆ ನಡೆಸಿ ತಪ್ಪತಿಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ವಿಫುಲ್‌ ಕುಮಾರ್‌ ಅವರನ್ನು ಪ್ರಭಾರಿ ಐಜಿಪಿ ಹುದ್ದೆಯಿಂದ ತೆಗೆದು ಹಾಕುವಂತೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

‘ಶುಕ್ರವಾರ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಪಕ್ಷದ ಆರು ಶಾಸಕರು, ಸಂಸದ ಪ್ರಜ್ವಲ್‌ ಸೇರಿದಂತೆ ಸಾವಿರಾರು ಕಾರ್ಯಕರ್ತರೊಂದಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ‍ಪ್ರತಿಭಟನೆಗೆ ಅಡ್ಡಿ ಪಡಿಸಬಾರದು. ಹಾಗೇನಾದರೂ ಆಗಿ ಗಲಾಟೆಯಾದರೆ ನಾವು ಹೊಣೆಗಾರರಲ್ಲ. ಸ್ಥಳಕ್ಕೆ ಹಾಸನ ಜಿಲ್ಲಾಧಿಕಾರಿ, ದಕ್ಷಿಣ ವಲಯ ಐಜಿಪಿ, ಪ್ರಾದೇಶಿಕ ಆಯುಕ್ತರು ಬರಬೇಕು. ದೂರು ದಾಖಲಿಸಿರುವ ಬಗ್ಗೆ ಸ್ಥಳೀಯ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಅವರಿಂದ ಸೂಕ್ತ ಮಾಹಿತಿ ಪಡೆದು ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.

ಐಜಿಪಿಗೆ ನೈತಿಕತೆ ಇದ್ದರೆ ಹಣ ಹಂಚಿಕೆ ಮಾಡಿದ ಡಿಸಿಎಂ ಹಾಗೂ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಪ್ರಕರಣ ದಾಖಲಿಸುವಂತೆ ಸವಾಲು ಹಾಕಿದ ರೇವಣ್ಣ, ಕೆ.ಆರ್.ಪೇಟೆ, ಹುಣಸೂರಿನಲ್ಲಿ ಅಕ್ರಮವಾಗಿ ಮತದಾರರಿಗೆ ಸೀರೆ ಹಂಚಲಾಗಿದೆ. ಹುಣಸೂರಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಜೀಪಿನಲ್ಲಿ ಗೋಣಿ ಚೀಲದಲ್ಲಿ ಹಣ ಸಾಗಿಸಿದ್ದಾರೆ. ಈ ಬಗ್ಗೆ ಏಜೆಂಟರು ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಉಪಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ ಅವರು ದಡದಹಳ್ಳಿಯಲ್ಲಿ ವಾಸ್ತವ್ಯ ಹೂಡಿ, ಅಧಿಕಾರಿಗಳನ್ನು ಬಳಸಿಕೊಂಡು ಹಣ ಹಂಚಿಕೆ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಹಣ ಹಂಚಿ ಚುನಾವಣೆ ಮಾಡುವ ಬದಲು ಅವರಿಗೆ ಬೇಕಾದವರನ್ನು ಆಯ್ಕೆ ಮಾಡಲಿ. ಈ ರೀತಿ ಚುನಾವಣೆ ನಡೆಸುವುದಾದರೆ ಚುನಾವಣಾ ಆಯೋಗ ಏಕೆ ಬೇಕು? ಬಾಂಬೆ ದುಡ್ಡು, ಜೆಡಿಎಸ್‍ಗೆ ವೋಟ್ ಎಂಬಂತೆ ಚುನಾವಣೆ ನಡೆದಿದೆ’ ಎಂದರು.

ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.