ADVERTISEMENT

ಹಳೇಬೀಡು: ರಾಶಿಗುಡ್ಡ ಅರಣ್ಯದಲ್ಲಿ ಬೆಂಕಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 2:27 IST
Last Updated 11 ಫೆಬ್ರುವರಿ 2021, 2:27 IST
ಹಳೇಬೀಡು ಸಮೀಪದ ರಾಶಿಗುಡ್ಡ ಅರಣ್ಯ ಮಂಗಳವಾರ ರಾತ್ರಿ ಬೆಂಕಿಯಲ್ಲಿ ಹೊತ್ತಿ ಉರಿಯಿತು
ಹಳೇಬೀಡು ಸಮೀಪದ ರಾಶಿಗುಡ್ಡ ಅರಣ್ಯ ಮಂಗಳವಾರ ರಾತ್ರಿ ಬೆಂಕಿಯಲ್ಲಿ ಹೊತ್ತಿ ಉರಿಯಿತು   

ಹಳೇಬೀಡು: ರಾಶಿಗುಡ್ಡ ಅರಣ್ಯದಲ್ಲಿ ಮಂಗಳವಾರ ರಾತ್ರಿ ಬೆಂಕಿ ಹೊತ್ತಿಕೊಂಡು ನೂರಾರು ಎಕರೆ ಅರಣ್ಯದಲ್ಲಿದ್ದ ಮರಗಳು ಬೂದಿಯಾಗಿವೆ.

ಕಾಡಿಗೆ ಬಿದ್ದ ಬೆಂಕಿ ಆಕಸ್ಮಿಕವೋ ಅಥವಾ ಕಾಳ್ಗಿಚ್ಚೋ ಎಂಬ ಮಾಹಿತಿ ಲಭ್ಯವಾಗಿಲ್ಲ. ಮಾಗಿಯ ಚಳಿಯಲ್ಲಿ ಮರದ ಎಲೆಗಳು ಉದುರಿ ತರಗೆಲೆಯಂತಾಗಿರುತ್ತದೆ. ಬೀಡಿ, ಸಿಗರೇಟ್ ಹೊತ್ತಿಸಿಕೊಂಡು ಬೆಂಕಿಕಡ್ಡಿಯನ್ನು ನೆಲಕ್ಕೆ ಹಾಕಿದಾಗ ತರಗು ಹೊತ್ತಿಕೊಂಡು ಗಾಳಿಗೆ ಕಾಡಿಗೆ ವ್ಯಾಪಿಸುವ ಸಾಧ್ಯತೆ ಇರುತ್ತದೆ. ರಾಶಿಗುಡ್ಡದಲ್ಲಿ ಕಾಳ್ಗಿಚ್ಚು ಸಂಭವಿಸುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಸ್ಥಳೀಯರು.

‘ರಾಶಿಗುಡ್ಡ ಹೊಸದಾಗಿ ಅರಣ್ಯ ಬೆಳೆಸುತ್ತಿರುವ ಪ್ರದೇಶ. ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಾಗ ಸಿಬ್ಬಂದಿ ಜಾಗೃತರಾದರು. ಹಾಗಾಗಿ ಕಾಡು ಪ್ರಾಣಿಗಳ ಸಾವು ನೋವು ಸಂಭವಿಸಿಲ್ಲ. ಗಿಡಗಳಿಗೆ ಬೆಂಕಿ ತಗುಲಿದ್ದರೂ ಎಲೆಗಳು ಮಾತ್ರ ಸುಟ್ಟು ಹೋಗಿದೆ. ಹೀಗಾಗಿ ಮರಗಳು ಪುನಃ ಜಿಗುರೊಡೆಯುತ್ತವೆ. ಅರಣ್ಯದಲ್ಲಿ ಬೆಂಕಿ ಆವರಿಸಿದ ಪ್ರದೇಶದ ವಿಸ್ತೀರ್ಣ ಲೆಕ್ಕ ಹಾಕಬೇಕಾಗಿದೆ. ಒಟ್ಟಾರೆ ಅರಣ್ಯ ಸುರಕ್ಷಿತವಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಶ್ವೇತಾ ಹೇಳಿದರು.

ADVERTISEMENT

‘ಅರಣ್ಯದ ಸುತ್ತ ತೊಟ್ಟಿಗಳಲ್ಲಿ ನೀರು ಸಂಗ್ರಹಿಸುವ ವ್ಯವಸ್ಥೆ ಇರಬೇಕು. ಕಾಡಿಗೆ ಬೆಂಕಿ ಕಾಣಿಸಿದಾಗ ಪಂಪ್ ಮಾಡಿ ಬೆಂಕಿ ನಂದಿಸುವ ವ್ಯವಸ್ಥೆ ಮಾಡಬೇಕು. ಕಟ್ಟೆಯಲ್ಲಿ ನೀರಿದ್ದರೆ ವನ್ಯ ಜೀವಿಗಳು ನೀರಿಗಾಗಿ ಊರಿನತ್ತ ಪ್ರಯಾಣ ಸಹ ಬೆಳೆಸುವುದಿಲ್ಲ’ ಎಂದು ರೈತ ತಟ್ಟೆಹಳ್ಳಿ ರವಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.