ADVERTISEMENT

ಫಿಟ್‌ ಇಂಡಿಯಾ ಓಟಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಆರ್‌.ಗಿರೀಶ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 12:39 IST
Last Updated 18 ಸೆಪ್ಟೆಂಬರ್ 2021, 12:39 IST
ಹಾಸನದ ಪ್ರಮುಖ ರಸ್ತೆಗಳಲ್ಲಿ ಫಿಟ್ ಇಂಡಿಯಾ 0.2 ಓಟ ಗಮನ ಸೆಳೆಯಿತು.
ಹಾಸನದ ಪ್ರಮುಖ ರಸ್ತೆಗಳಲ್ಲಿ ಫಿಟ್ ಇಂಡಿಯಾ 0.2 ಓಟ ಗಮನ ಸೆಳೆಯಿತು.   

ಹಾಸನ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ್ದು, ಇದರ ಹಿಂದೆ ಸಾವಿರಾರು ಮಹನೀಯರ
ತ್ಯಾಗ, ಬಲಿದಾನಗಳಿವೆ. ಈ ಸಂದರ್ಭದಲ್ಲಿ ಅವರೆಲ್ಲರನ್ನೂ ಸ್ಮರಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ
ಆರ್. ಗಿರೀಶ್ ತಿಳಿಸಿದರು.

ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನೆಹರು ಯುವ ಕೇಂದ್ರ,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ
ಮತ್ತು ಸಂಸ್ಕೃತಿ ಇಲಾಖೆ, ನಿರಂತರ ಸಾಂಸ್ಕೃತಿಕ ಮತ್ತು ಕ್ರೀಡಾ ಯುವಕ ಸಂಘ, ವಾಲ್ಮೀಕಿ ಮಹಿಳಾ
ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಿದ ಫಿಟ್ ಇಂಡಿಯಾ
ಓಟ 2.0 ಚಾಲನೆ ನೀಡಿ ಮಾತನಾಡಿದರು.

ಯಾವುದೇ ದೇಶ ಆರೋಗ್ಯಕರವಾಗಿರಬೇಕಾದರೇ ಜನರು ಸದೃಢವಾಗಿರಬೇಕು. ಇತ್ತೀಚಿನ ದಿನಗಳಲ್ಲಿ
ಜನರಲ್ಲಿ ಹೆಚ್ಚು ಆರೋಗ್ಯದ ಸಮಸ್ಯೆಗಳು ಕಂಡು ಬರುತ್ತಿರುವುದರಿಂದ ದುಡಿಯುವ ಸಾಮರ್ಥ್ಯ ಕಡಿಮೆ
ಆಗುತ್ತಿದೆ. ಹಾಗಾಗಿ ಆರೋಗ್ಯವಂತ ದೇಶ ನಿರ್ಮಾಣ ಮಾಡಬೇಕಾದರೆ ಜೀವನದಲ್ಲಿ ವ್ಯಾಯಾಮ,
ಯೋಗ, ಓಟ ಮತ್ತಿತರ ಭೌತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರೆ ದೇಹ ಸದೃಢರಾಗಿರಲು ಸಾಧ್ಯ
ಎಂದು ಅಭಿಪ್ರಾಯಪಟ್ಟರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎ. ಪರಮೇಶ್ ಮಾತನಾಡಿ, ಆ. 15 ರಿಂದ ಅ. 2 ರ ವರೆಗೆ ದೇಶದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಯುವಕರು ಮುಖ್ಯವಾಗಿದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದರ ಜೊತೆಗೆ ಕನಿಷ್ಠ 30 ನಿಮಿಷ ವ್ಯಾಯಾಮಕ್ಕಾಗಿ ಮೀಸಲಿಟ್ಟು,ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳುವುದರಿಂದ ಆರೋಗ್ಯ ವೃದ್ದಿಯಾಗುತ್ತದೆ ಎಂದು ಅವರು ಹೇಳಿದರು.

ಯುವ ಜನರು ದೇಶದ ಆಸ್ತಿ. ವಿವಿಧ ಕಾರ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವುದರಿಂದ ದೇಶದ ಅಭಿವೃದ್ಧಿ
ಸಾಧ್ಯ ಎಂದು ನುಡಿದರು.

ಇದೇ ವೇಳೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಆಜಾದಿ ಕಾ ಅಮೃತ್ ಮಹೋತ್ಸವ ಕುರಿತು ಪ್ರತಿಜ್ಞಾ
ವಿಧಿ ಬೋಧಿಸಿದರು. ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಪ್ರಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಪುಟ್ಟಸ್ವಾಮಿ, ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಅಭಿಷೇಕ್ ಚವರೆ, ಯುವ
ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ಕನ್ನಡ ಮತ್ತು ಸಂಸ್ಕೃತಿ
ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ
ಜಿ.ಒ.ಮಹಾಂತಪ್ಪ, ಕಲಾವಿದ ಬಿ.ಟಿ ಮಾನವ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ವಿದ್ಯಾರ್ಥಿಗಳು
ಹಾಜರಿದ್ದರು.

ಮುರುಳಿ, ಭಾನುಮೋಶ್ರೀ, ಪ್ರಸಾದ್, ನಾಗಶ್ರೀ ಮತ್ತು ತಂಡದಿಂದ ಪ್ರಾರ್ಥನೆ, ಗ್ಯಾರಂಟಿ ರಾಮಣ್ಣ
ತಂಡದಿಂದ ಜಾಗೃತಿ ಗೀತೆಗಳ ಗಾಯನ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಫಿಟ್ ಇಂಡಿಯಾ
0.2 ಓಟ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.