ADVERTISEMENT

ಫ್ಲೆಕ್ಸ್‌: ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿ ಗೊಂದಲ

ಪೊಲೀಸರ ಮಧ್ಯ ಪ್ರವೇಶ: ವಾತಾವರಣ ಶಾಂತ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 14:25 IST
Last Updated 15 ಸೆಪ್ಟೆಂಬರ್ 2019, 14:25 IST
ಹಾಸನದ ಹೇಮಾವತಿ ಪ್ರತಿಮೆ ಸಮೀಪ ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿ ಭದ್ರತೆ ಕಲ್ಪಿಸಲಾಗಿತ್ತು
ಹಾಸನದ ಹೇಮಾವತಿ ಪ್ರತಿಮೆ ಸಮೀಪ ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿ ಭದ್ರತೆ ಕಲ್ಪಿಸಲಾಗಿತ್ತು   

ಹಾಸನ: ನಗರದ ಹೇಮಾವತಿ ಪ್ರತಿಮೆ ಪಕ್ಕದಲ್ಲಿ ಸ್ಥಳೀಯ ಶಾಸಕರ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ನಿರ್ಮಿಸುತ್ತಿರುವ ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿ ಜನಪ್ರತಿನಿಧಿಗಳ ನಾಮಫಲಕ ಅಳವಡಿಕೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಪ್ರತಿಷ್ಠೆಯಾಗಿದ್ದು ಶನಿವಾರ ರಾತ್ರಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಭದ್ರತೆಯಲ್ಲಿ ಸದ್ಯ ಸಹಜಸ್ಥಿತಿ ಇದೆ.

ಶಾಸಕರ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ನಿರ್ಮಿಸಿರುವ ಟ್ಯಾಕ್ಸಿ ನಿಲ್ದಾಣ ಇದಾಗಿದ್ದು ಶಾಸಕ ಪ್ರೀತಂ ಜೆ. ಗೌಡ ಭಾವಚಿತ್ರವಿರುವ 15 ಫ್ಲೆಕ್ಸ್‌ ಅಳವಡಿಸಲು ಬಿಜೆಪಿ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಈಗಾಗಲೇ 6 ನಾಮಫಲಕಗಳನ್ನು ಸ್ಟ್ಯಾಂಡ್‌ನ ಎರಡೂ ಬದಿಗೆ ಹಾಕಿದ್ದು, ಇನ್ನೂ ಒಂಬತ್ತು ಫಲಕಗಳ ಅಳವಡಿಸಲಿದ್ದಾರೆ.

ಟ್ಯಾಕ್ಸಿ ಸ್ಯಾಂಡ್ಗೆ ಜಾಗ ಮೀಸಲಿಟ್ಟಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಂಬುದು ಜೆಡಿಎಸ್ ಕಾರ್ಯಕರ್ತರ ವಾದ. ಈ ಕಾರಣಕ್ಕಾಗಿ ಸೆ. 14ರ ರಾತ್ರಿ ‘ಕಾರು ನಿಲ್ದಾಣದ ಸ್ಥಳ ಮೀಸಲಿರಿಸಿದ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು ಎಂಬ ಫಲಕ ಹಾಕಲಾಗಿದೆ.

ADVERTISEMENT

ಈ ವಿಚಾರ ಶಾಸಕ ಪ್ರೀತಂ ಜೆ. ಗೌಡ ಅವರ ಗಮನಕ್ಕೂ ಬಂದಿದ್ದು, ಎಚ್.ಡಿ. ದೇವೇಗೌಡರು ಹಿರಿಯ ರಾಜಕಾರಣಿ. ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿ ಅವರ ಭಾವಚಿತ್ರ ಹಾಕುವುದರಲ್ಲಿ ಯಾವುದೇ ತಪ್ಪಿಲ್ಲ. ಆ ಸ್ಥಳ ಬಿಟ್ಟು ಬೇರೆ ಕಡೆಗೆ ಫಲಕ ಅಳವಡಿಸಿ ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಸ್ಥಳದಲ್ಲಿ ಬಿಗಿ ಭದ್ರತೆ: ನಾಮಫಲಕ ಅಳವಡಿಕೆ ವಿಚಾರವಾಗಿ ಗೊಂದಲ ಸೃಷ್ಟಿಯಾಗಬಹುದು ಎಂಬ ಕಾರಣಕ್ಕೆ ಶನಿವಾರ ರಾತ್ರಿ ಹೇಮಾವತಿ ಪ್ರತಿಮೆ ಬಳಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಪೊಲೀಸರು ಬಿಜೆಪಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ ಬಳಿಕ ಎಚ್.ಡಿ.ದೇವೇಗೌಡರ ಭಾವಚಿತ್ರವಿರುವ ನಾಮಫಲಕ ತೆರವು ನಿರ್ಧಾರದಿಂದ ಹಿಂದೆ ಸರಿದರು. ತಡರಾತ್ರಿವರೆಗೆ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.