ADVERTISEMENT

ಕಾಲು–ಬಾಯಿ ಲಸಿಕಾ ಆಂದೋಲನ: ಶೇ 95ರಷ್ಟು ಗುರಿ ಸಾಧನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 4:05 IST
Last Updated 18 ಡಿಸೆಂಬರ್ 2025, 4:05 IST
ಸಂತೇಮರಹಳ್ಳಿಯಲ್ಲಿ ಪಶು ಇಲಾಖೆ ವತಿಯಿಂದ ಜಾನುವಾರುಗಳಿಗೆ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕಲಾಯಿತು.
ಸಂತೇಮರಹಳ್ಳಿಯಲ್ಲಿ ಪಶು ಇಲಾಖೆ ವತಿಯಿಂದ ಜಾನುವಾರುಗಳಿಗೆ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕಲಾಯಿತು.   

ಅರಕಲಗೂಡು: ತಾಲ್ಲೂಕಿನಲ್ಲಿ ಡಿ.2 ರವರೆಗೆ ನಡೆದ ಜಾನುವಾರುಗಳಿಗೆ ಕಾಲು–ಬಾಯಿ ಲಸಿಕಾ ಆಂದೋಲನದಲ್ಲಿ ಶೇ 95ರಷ್ಟು ಗುರಿ ಸಾಧನೆಯಾಗಿದೆ ಎಂದು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ. ದಿಲೀಪ್ ತಿಳಿಸಿದರು.

ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ‘ತಾಲ್ಲೂಕಿನಲ್ಲಿ 81,182 ಜಾನುವಾರುಗಳಿದ್ದು 75,020 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಈ ತಿಂಗಳ ಅಂತ್ಯದೊಳಗೆ ಶೇ 100 ಗುರಿಸಾಧನೆ ಪೂರ್ಣಗೊಳಿಸಲಾಗುವುದು. 30 ಸಾವಿರ ಕುರಿಗಳಿಗೆ ಪಿಪಿಸಿ ಲಸಿಕೆ ನೀಡಲಾಗಿದೆ’ ಎಂದರು.

‘ತಾಲ್ಲೂಕಿನಲ್ಲಿ 24 ಪಶು ಆಶ್ಪತ್ರೆಗಳು ಇದ್ದು ಎಲ್ಲವೂ ಸ್ವಂತ ಕಟ್ಟಡ ಹೊಂದಿದೆ. ವೈದ್ಯರು ಮಾತ್ರ 5 ಮಂದಿ ಇದ್ದು ಸರದಿಯ ಮೇಲೆ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಆಂಬುಲೆನ್ಸ್ ವ್ಯವಸ್ಥೆ ಇದ್ದು ತುರ್ತು ಸಂದರ್ಭಗಳಲ್ಲಿ 1962 ನಂಬರ್ ಗೆ ಕರೆ ಮಾಡಿದರೆ ಮನೆ ಬಾಗಿಲಿಗೆ ಬಂದು ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಈ ಸಲಭ್ಯ ದೊರೆಯಲಿದೆ. ರೇಬಿಸ್ ಕುರಿತು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯ ನಡೆಸಲಾಗಿದೆ. 2349 ಪ್ರಾಣಿಗಳಿಗೆ ರೇಬಿಸ್ ನಿರೋಧಕ ಲಸಿಕೆ ಹಾಕಲಾಗಿದೆ. ರೇಬಿಸ್ ನಿರೋಧಕ ಲಸಿಕೆ ಲಭ್ಯವಿದ್ದು ಬೀದಿ ನಾಯಿಗಳನ್ನು ಹಿಡಿದು ತಂದಲ್ಲಿ ಅವುಗಳಿಗೆ ಉಚಿತವಾಗಿ ಲಸಿಕೆ ಹಾಕುಲಾಗುವುದು. ಈ ಕುರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದರು.

ADVERTISEMENT

1676 ಕರುಗಳಿಗೆ ಕಂದು ರೋಗದ ವಿರುದ್ಧ, 7785 ರಾಸುಗಳಿಗೆ ಗಳಲೆ ರೋಗ ಹಾಗೂ 69732 ರಾಸುಗಳಿಗೆ ಚರ್ಮ ಗಂಟು ರೋಗದ ರುದ್ದ ಲಸಿಕೆ ಹಾಕಲಾಗಿದೆ. ಜಾನುವಾರುಗಳ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಚಿಕಿತ್ಸೆ ನೀಡುತ್ತಿರುವುದಾಗಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.