ಹಾಸನ: ಹೊಳೆನರಸೀಪುರ ತಾಲ್ಲೂಕಿನ ಜೋಡಿಗುಬ್ಬಿ ಗ್ರಾಮದ ಎಸ್.ಎಂ.ಇಟ್ಟಿಗೆ ಕಾರ್ಖಾನೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಒಂದೇ ಕುಟುಂಬದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ.
ಹೊಳೆನರಸೀಪುರ ತಹಶೀಲ್ದಾರ್ ಕೃಷ್ಣಮೂರ್ತಿ ಸೂಚನೆ ಮೇರೆಗೆ ಹಳ್ಳಿಮೈಸೂರು ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಒಡಿಶಾದ ಬಲಂಗಿರ್ ಜಿಲ್ಲೆ ಪೆನ್ನಾಗೋಡ್ ತಾಲ್ಲೂಕಿನ ಕೋಪ್ರಾಕೋಲ್ ಗ್ರಾಮದ ಮೊಕರ್ದಾಜ್ ಪುಟೇಲ್, ಪತ್ನಿ ಊರ್ಮಿಳಾ ಪುಟೇಲ್, ಮಕ್ಕಳಾದ ವರ್ಷಿತಾ ಪುಟೇಲ್ ಹಾಗೂ ರಾಜ್ ಪುಟೇಲ್ ಎಂಬುವವರು ಜೀತಮುಕ್ತರಾದವರು.
ಗ್ರಾಮದ 1.06 ಎಕರೆ ಜಮೀನಿನಲ್ಲಿ ಸತೀಶ್ ಎಂಬುವವರ ಎಸ್.ಎಂ. ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡಲು 3 ವರ್ಷಗಳಿಂದ ಇವರನ್ನು ಇರಿಸಿಕೊಳ್ಳಲಾಗಿತ್ತು. ಪ್ರತಿದಿನಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆಲಸ ಮಾಡಿಸಲಾಗುತ್ತಿತ್ತು. 3 ವರ್ಷದ ಹಿಂದೆ ₹ 17 ಸಾವಿರ ಪಡೆದಿದ್ದು, ದಿನಕ್ಕೆ ₹1ಸಾವಿರ ಇಟ್ಟಿಗೆ ಮಾಡಿದರೆ ₹ 800 ನೀಡುವುದಾಗಿ ಈ ಕುಟುಂಬವನ್ನು ಕರೆದುಕೊಂಡು ಬರಲಾಗಿತ್ತು.
‘ಇಟ್ಟಿಗೆ ಕೆಲಸ ನಿರ್ವಹಿಸಿದ ಹಣವನ್ನು ನೀಡಿಲ್ಲ. ವಾರದಲ್ಲಿ ಒಂದು ದಿನವೂ ವಿಶ್ರಾಂತಿ ಇಲ್ಲದೆ ಕೆಲಸ ಮಾಡಿಸಿಕೊಳ್ಳುತಿದ್ದು, ಹೊರಗಡೆ ಮುಕ್ತವಾಗಿ ತಿರುಗಲು ಅವಕಾಶ ಕೊಡುತ್ತಿರಲಿಲ್ಲ. 3 ವರ್ಷದಿಂದ ಸ್ವಂತ ಗ್ರಾಮಕ್ಕೆ ತೆರಳಲು ಅವಕಾಶ ನೀಡಿರಲಿಲ್ಲ’ ಎಂದು ರಕ್ಷಣೆಗೆ ಒಳಗಾದ ಕಾರ್ಮಿಕರು ಪೊಲೀಸರಿಗೆ ತಿಳಿಸಿದ್ದಾರೆ.
ಕಾರ್ಖಾನೆ ಮಾಲೀಕ ಸತೀಶ್ ವಿರುದ್ದ ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.