ಬೇಲೂರು ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ
ಬೇಲೂರು (ಹಾಸನ): ಇಲ್ಲಿನ ಬಸ್ ನಿಲ್ದಾಣದ ಮುಂಭಾಗದ ಪುರಸಭೆ ಆವರಣದಲ್ಲಿರುವ ವಿದ್ಯಾ ಗಣಪತಿ ದೇವಾಲಯದ ಕಬ್ಬಿಣದ ಬಾಗಿಲು ತೆರೆದು, ಕಲ್ಲಿನ ಗಣೇಶ ಮೂರ್ತಿ ಮೇಲೆ ಕಿಡಿಗೇಡಿಗಳು ಚಪ್ಪಲಿ ಇಟ್ಟಿರುವ ಘಟನೆ ಭಾನುವಾರ ನಡೆದಿದೆ.
ದೇವಾಲಯದಲ್ಲಿ ನಿತ್ಯ ಪೂಜೆ ನಡೆಯುತ್ತಿದ್ದು, ವ್ಯಾಪಾರಿಗಳು ಬೆಳಿಗ್ಗೆ ಗಣೇಶಮೂರ್ತಿಗೆ ಕೈಮುಗಿದು ವ್ಯಾಪಾರ ಆರಂಭಿಸುತ್ತಾರೆ. ಶನಿವಾರ ರಾತ್ರಿ ಪುರಸಭೆ ಗೇಟ್‌ಗೆ ಬೀಗ ಹಾಕಿಕೊಂಡು ತೆರಳಿದ್ದರು. ಭಾನುವಾರ ಬೆಳಿಗ್ಗೆ ಭಕ್ತಾದಿಗಳು ಕೈಮುಗಿಯಲು ಹೋದಾಗ ಗಣಪತಿಗೆ ಚಪ್ಪಲಿ ಹಾಕಿ ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಆರಂಭಿಸಿದ್ದು, ಈ ಕೃತ್ಯವನ್ನು ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಮಾಡಿರಬಹುದೆಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ ಮಹಿಳೆಯೊಬ್ಬಳು ಚಪ್ಪಲಿ ಧರಿಸಿಕೊಂಡು ದೇವಾಲಯದ ಒಳಗೆ ಪ್ರವೇಶಿಸಿದ್ದಾಳೆ. ಹೊರಬರುವಾಗ ಆಕೆಯ ಕಾಲಿನಲ್ಲಿ ಚಪ್ಪಲಿ ಇರಲಿಲ್ಲ. ಮೂರ್ತಿಯ ಮೇಲಿದ್ದ ಚಪ್ಪಲಿಗಳು ಮತ್ತು ಮಹಿಳೆ ಧರಿಸಿದ್ದ ಚಪ್ಪಲಿಗಳ ನಡುವೆ ಹೊಂದಾಣಿಕೆ ಕಂಡುಬಂದಿದ್ದು, ಆಕೆಯೇ ಈ ಕೃತ್ಯವನ್ನು ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆಕೆಯ ಮಾನಸಿಕ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ‘ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದು, ಆರೋಪಿಯ ಬಂಧನಕ್ಕೆ 8 ತಂಡ ರಚನೆ ಮಾಡಲಾಗಿದೆ’ ಎಂದು ತಿಳಿಸಿದರು.
‘ಕೋಮು ಸೌಹಾರ್ದ ಕದಡಲು ಕಿಡಿಗೇಡಿಗಳು ಇಂತಹ ದುಷ್ಕೃತ್ಯ ಎಸಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ’ ಆಗ್ರಹಿಸಿ ಸ್ಥಳೀಯರು ಪುರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ‘ಸಂಜೆಯೊಳಗೆ ಆರೋಪಿಯನ್ನು ಬಂಧಿಸಿದೇ ಇದ್ದಲ್ಲಿ, ಸೋಮವಾರ ಬೇಲೂರು ಬಂದ್‌ಗೆ ಕರೆ ನೀಡಲಾಗುವುದು’ ಎಂದು ಎಚ್ಚರಿಸಿದರು.
ಬೇಲೂರಿಗೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ‘ಪದೇ ಪದೇ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಲಾಗುತ್ತದೆ. ಹಸುವಿನ ಕೆಚ್ಚಲು ಕೊಯ್ಯುತ್ತಾರೆ. ಈಗ ಪುರಸಭೆ ಆವರಣ ಗಣಪತಿಗೆ ಚಪ್ಪಲಿ ಹಾಕಿದ್ದಾರೆ. ಇದು ಕೋಮು ಗಲಭೆ ಸೃಷ್ಟಿಸುವ ಸಂಚಿನ ಭಾಗವಾಗಿದೆ’ ಎಂದು ಆರೋಪಿಸಿದರು.
‘ಸಜ್ಜನರಿಗೆ ಸಿಟ್ಟು ಬಂದರೆ ದುರ್ಜನರು ಯಾರೂ ಉಳಿಯಲ್ಲ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದರು.
ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ‘ಶೀಘ್ರ ಆರೋಪಿಯನ್ನು ಬಂಧಿಸಿ, ಕೂಡಲೇ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ. ಮಹಿಳೆಗೆ ಒತ್ತಡವಿದ್ದರೆ, ಅದನ್ನು ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು. ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.