ADVERTISEMENT

ಹಾಸನ ಗಣೇಶ ಮೆರವಣಿಗೆ ದುರಂತ | ಸರ್ಕಾರ ನೆರವಾಗಲಿ: ನಿಶ್ಚಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 2:34 IST
Last Updated 16 ಸೆಪ್ಟೆಂಬರ್ 2025, 2:34 IST
ಹೊಳೆನರಸೀಪುರ ತಾಲೂಕಿನ ಕೆ.ಬಿ.ಪಾಳ್ಯದ ಮೃತ ವಿ.ಎಂ.ರಾಜೇಶ್ ಮನೆಗೆ ನಿಶ್ಚಲಾನಂದನಾಥ ಸ್ವಾಮೀಜಿ ಸೋಮವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಇದ್ದರು
ಹೊಳೆನರಸೀಪುರ ತಾಲೂಕಿನ ಕೆ.ಬಿ.ಪಾಳ್ಯದ ಮೃತ ವಿ.ಎಂ.ರಾಜೇಶ್ ಮನೆಗೆ ನಿಶ್ಚಲಾನಂದನಾಥ ಸ್ವಾಮೀಜಿ ಸೋಮವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಇದ್ದರು   

ಹೊಳೆನರಸೀಪುರ: ‘ಗಣೇಶೋತ್ಸವದ ವೇಳೆ ಟ್ಯಾಂಕರ್‌ ಹರಿದು ಅನೇಕ ಯುವಕರು ಪ್ರಾಣ ಕಳೆದುಕೊಂಡಿರುವುದರಿಂದ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಿ, ಬದುಕು ಕಟ್ಟಿಕೊಳ್ಳಲು ಶಾಶ್ವತ ಯೋಜನೆ ರೂಪಿಸಿಕೊಡಬೇಕು’ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಮೊಸಳೆಹೊಸಳ್ಳಿಯಲ್ಲಿ ಗಣೇಶೋತ್ಸವ ಮೆರವಣಿಗೆ ಮೇಲೆ ಕ್ಯಾಂಟರ್‌ ನುಗ್ಗಿ ಪ್ರಾಣ ಕಳೆದುಕೊಂಡ ತಾಲ್ಲೂಕಿನ ವಡ್ಡರಪಾಳ್ಯ (ಕೆ.ಬಿ.ಪಾಳ್ಯ)ದ ವಿ.ಎಂ.ರಾಜೇಶ್ (18) ಅವರ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮಾತನಾಡಿದರು.

‘ಮೊಸಳೆಹೊಸಳ್ಳಿ ದುರ್ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದು, ಇವರೆಲ್ಲರ ಕುಟುಂಬದ ಕನಸ್ಸುಗಳು ಕಮರಿಹೋಗಿವೆ. ಒಬ್ಬ ಚಾಲಕ ನಿರ್ಲಕ್ಷ್ಯತನ ತೋರಿದಕ್ಕೆ ಹತ್ತಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ನನ್ನ ಪೂರ್ವಾಶ್ರಮದ ಸಂದರ್ಭದಲ್ಲಿ ಹೊಳೆನರಸೀಪುರ ತಾಲ್ಲೂಕಿನ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದಾಗ ಮೃತ ವಿ.ಎಂ ರಾಜೇಶ್ ಅವರ ಅಪ್ಪ, ಅಮ್ಮ ವಾಸವಾಗಿದ್ದ ಅದೇ ಹಳೇ ಮನೆಯಲ್ಲಿ ಇಂದು ಸಹ ವಾಸ ಮಾಡುತ್ತಿದ್ದು, ಅವರ ಬಡತನಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದರು.

ADVERTISEMENT

‘ರಾಜೇಶ್‌ ಗಾರೆ ಕೆಲಸ ಮಾಡಿ, ದುಡಿದು ಡಿಗ್ರಿ ವ್ಯಾಸಂಗ ಮಾಡುತ್ತಿದ್ದ. ದುರ್ಘಟನೆಯಲ್ಲಿ ಮಡಿದ ಕುಟುಂಬಗಳಿಗೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಸಾಂತ್ವನ ಹೇಳಿ ಸ್ಪಂದಿಸಿ ತಾತ್ಕಾಲಿಕ ಪರಿಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ’ ಎಂದರು.

ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಉಪ ತಹಶೀಲ್ದಾರ್ ಶಿವಕುಮಾರ್, ರಾಜಸ್ವ ನಿರೀಕ್ಷಕ ಉದಯ ಕುಮಾರ್, ಹಳೇಕೋಟೆ ಹೋಬಳಿ ಕಂದಾಯ ಇಲಾಖೆಯ ನೌಕರರು ಜೊತೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.