ADVERTISEMENT

ಹಿರೀಸಾವೆ: ಅಪಘಾತ ತಾಣವಾದ ಗನ್ನಿ ಬಸವೇಶ್ವರ ವೃತ್ತ

ವಿದ್ಯಾರ್ಥಿಗಳು, ಸಾರ್ವಜನಿಕರ ಓಡಾಟ ಅಧಿಕ: ಬೇಕಿದೆ ಶಾಶ್ವತ ಪರಿಹಾರ

ಹಿ.ಕೃ.ಚಂದ್ರು
Published 19 ಜೂನ್ 2025, 5:42 IST
Last Updated 19 ಜೂನ್ 2025, 5:42 IST
ಹಿರೀಸಾವೆಯ ಗನ್ನಿ ಬಸವೇಶ್ವರ ವೃತ್ತದಲ್ಲಿನ ನಾಲ್ಕು ರಸ್ತೆಯಲ್ಲಿ ಏಕಕಾಲದಲ್ಲಿ ವಾಹನಗಳು ಸಂಚಾರ ಮಾಡುತ್ತಿವೆ.
ಹಿರೀಸಾವೆಯ ಗನ್ನಿ ಬಸವೇಶ್ವರ ವೃತ್ತದಲ್ಲಿನ ನಾಲ್ಕು ರಸ್ತೆಯಲ್ಲಿ ಏಕಕಾಲದಲ್ಲಿ ವಾಹನಗಳು ಸಂಚಾರ ಮಾಡುತ್ತಿವೆ.   

ಹಿರೀಸಾವೆ: ರಾಷ್ಟ್ರೀಯ ಹೆದ್ದಾರಿ 75 ಹಾದು ಹೋಗಿರುವ ಇಲ್ಲಿನ ಗನ್ನಿ ಬಸವೇಶ್ವರ ವೃತ್ತದಲ್ಲಿ (ಮೇಟಿಕೆರೆ ಸರ್ಕಲ್) ವಾರಕ್ಕೆ 2-3 ಅಪಘಾತಗಳು ಸಂಭವಿಸುತ್ತಿವೆ. ಜೀವ ಹಾನಿ, ಗಾಯ ಇಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಈ ಸರ್ಕಲ್ ಅಪಘಾತದ ತಾಣವಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.

ನಾಲ್ಕು ದಿನದ ಹಿಂದೆ ನಡೆದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತು ಒಬ್ಬರ ಸ್ಥಿತಿ ಚಿಂತಾಜನವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವೃತ್ತದಲ್ಲಿ ಹಾಸನ–ಬೆಂಗಳೂರು, ಬೆಂಗಳೂರು– ಹಾಸನ ಕಡೆಗೆ ರಾಷ್ಟ್ರೀಯ ಹೆದ್ದಾರಿ ನಾಲ್ಕು ಪಥದ ರಸ್ತೆ ಇದ್ದು, ಇದಕ್ಕೆ ಹೊಂದಿಕೊಂಡಂತೆ ಎರಡು ಸರ್ವಿಸ್ ರಸ್ತೆ ಹಾಗೂ ಹಿರೀಸಾವೆ ಒಳಗೆ ಹೋಗುವ ರಾಜ್ಯ ಹೆದ್ದಾರಿ 8 ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೂ ಇವೆ. ಯಾವ ಕಡೆಯಿಂದ ವಾಹನಗಳು ಬರುತ್ತವೆ ಎಂಬ ಗೊಂದಲ ಸರ್ಕಲ್ ದಾಟುವವರಿಗೆ ಉಂಟಾಗುತ್ತಿದ್ದು, ಒಂದು ರಸ್ತೆ ದಾಟುವಷ್ಟರಲ್ಲಿ ಇನ್ನೊಂದು ಕಡೆಯಿಂದ ವಾಹನ ಬಂದ ಡಿಕ್ಕಿ ಹೊಡೆಯುತ್ತವೆ.

ADVERTISEMENT

ಈ ಸ್ಥಳದಲ್ಲಿ ಅಂಡರ್ ಪಾಸ್ ಮತ್ತು ರಸ್ತೆಗಳಿಗೆ ವೈಜ್ಞಾನಿಕ ಉಬ್ಬುಗಳಿಲ್ಲ. ರಾತ್ರಿ ಸಮಯದಲ್ಲಿ ಬೀದಿ ದೀಪದ ವ್ಯವಸ್ಥೆ ಇಲ್ಲದೇ ಇರುವುದರಿಂದ ಪಾದಚಾರಿಗಳು ಮತ್ತು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ರಾಷ್ಟ್ರೀಯ ಹೆದ್ದಾರಿ 75 ಸೇರಿದಂತೆ 5 ರಸ್ತೆಗಳನ್ನು ದಾಟಬೇಕಿದೆ.

ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಮತ್ತು ಹತ್ತಾರು ಹಳ್ಳಿಯ ಸಾರ್ವಜನಿಕರು ಈ 5 ರಸ್ತೆಗಳನ್ನು ದಾಟಬೇಕಿದೆ. ಹಾಸನ ಜಿಲ್ಲೆಯ ಗಡಿ ಭಾಗವಾದ ಹೋಬಳಿ ಕೇಂದ್ರವಾದ ಹಿರೀಸಾವೆ ಒಳಗೆ ಬರಲು ಮತ್ತು ಇಲ್ಲಿಂದ ಬೆಂಗಳೂರು ಕಡೆಗೆ ತೆರಳಲು ಜನರು ಈ ಕ್ರಾಸ್ ಮೂಲಕ ಹೋಗಬೇಕಿದೆ.

ಈ ವೃತ್ತವು ಅಪಾಯಕಾರಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಮತ್ತು ಸರ್ವಿಸ್ ರಸ್ತೆಗಳಿಗೆ ವೈಜ್ಞಾನಿಕ ಉಬ್ಬುಗಳನ್ನು ಹಾಕುವಂತೆ ಸಾರ್ವಜನಿಕರು ಹಲವು ಬಾರಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಹಿರೀಸಾವೆಯ ಗನ್ನಿ ಬಸವೇಶ್ವರ ವೃತ್ತ (ಮೇಟಿಕೆರೆ ಸರ್ಕಲ್).
ಗನ್ನಿ ಬಸವೇಶ್ವರ ವೃತ್ತ (ಮೇಟಿಕೆರೆ ಸರ್ಕಲ್) ಸೇರಿದಂತೆ ಎನ್ಎಚ್ 75ಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡಿ ಜನರ ಪ್ರಾಣ ಉಳಿಸಬೇಕು
ಮಂಜುನಾಥ್ ಬಾಳಗಂಚಿ ನಿವಾಸಿ
ಈ ವೃತ್ತದಲ್ಲಿ ವಾರಕ್ಕೆ ಎರಡು ಮೂರು ಅಪಘಾತಗಳು ಸಂಭವಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅಪಘಾತ ತಪ್ಪಿಸಲು ಶಾಶ್ವತ ಪರಿಹಾರ ಮಾಡಬೇಕು
ಆನಂದಣ್ಣ ಹಿರೀಸಾವೆ ಗನ್ನಿ ವೃತ್ತದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.