ADVERTISEMENT

ಹಳೇಬೀಡು: ಶುಂಠಿಗೆ ಕಾಡುತ್ತಿರುವ ರೋಗ ಬಾಧೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 1:54 IST
Last Updated 1 ಸೆಪ್ಟೆಂಬರ್ 2025, 1:54 IST
ಹಳೇಬೀಡು ಬಳಿಯ ರಾಜಗೆರೆ ಗ್ರಾಮದಲ್ಲಿ ರೋಗಕ್ಕೆ ತುತ್ತಾದ ಶುಂಠಿ ಬೆಳೆ ತೋರಿಸುತ್ತಿರುವ ರೈತ ದೇವರಾಜು ಆರ್.ಕೆ.
ಹಳೇಬೀಡು ಬಳಿಯ ರಾಜಗೆರೆ ಗ್ರಾಮದಲ್ಲಿ ರೋಗಕ್ಕೆ ತುತ್ತಾದ ಶುಂಠಿ ಬೆಳೆ ತೋರಿಸುತ್ತಿರುವ ರೈತ ದೇವರಾಜು ಆರ್.ಕೆ.   

The disease affecting ginger is troubling.

ಹಳೇಬೀಡು: ಕೈ ತುಂಬಾ ಹಣ ಸಂಪಾದಿಸಿ ಸ್ವಾವಲಂಬಿ ಜೀವನ ಸಾಗಿಸಬಹುದು ಎಂದು  ಶುಂಠಿ ಬೆಳೆ ಮಾಡಿದ ರಾಜಗೆರೆ ಗ್ರಾಮದ ಸಣ್ಣ ರೈತ ದೇವರಾಜು ಆರ್.ಕೆ. ಸಾಲದ ಹೊರೆಯಲ್ಲಿ ಮುಳುಗಿದ್ದಾರೆ. 

‘ನನಗೆ 1.5 ಎಕರೆ ಪಿರ್ತ್ರಾರ್ಜಿತ ಜಮೀನಿದ್ದು, ಆದಾಯ ಸಿಗದೇ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಒಂದು ವರ್ಷ ಕಷ್ಟ ಪಟ್ಟರೆ ಆರ್ಥಿಕವಾಗಿ ಚೇತರಿಸಿಕೊಳ್ಳಬಹುದು ಎಂದು ಶುಂಠಿ ಬೆಳೆಗೆ ಕೈಹಾಕಿ ನಷ್ಟದಲ್ಲಿ ಮುಳುಗಿದ್ದೇನೆ. ಕೂಲಿ ಮಾಡಿದ ಹಣವನ್ನು ಹೊಲಕ್ಕೆಸುರಿದಿದ್ದು, ಸಾಲ ಮಾಡಿಕೊಂಡು ಬರಿಗೈಯಲ್ಲಿ ಕೂರುವಂತಾಗಿದೆ’ ಎಂದು ದೇವರಾಜು ಅಳಲು ತೋಡಿಕೊಂಡರು.

ADVERTISEMENT

‘ಹಳೇಬೀಡು ಭಾಗದಲ್ಲಿ ಶುಂಠಿ ಬೆಳೆಗೆ ರೋಗ ಹರಡುತ್ತಿದೆ. ಶುಂಠಿ ಗಿಡದಲ್ಲಿ ಬಿಳಿ ಸುಳಿ ಕಾಣಿಸಿಕೊಂಡು ಸೊರಗುತ್ತಿದೆ. ಗಿಡಗಳು ಹಳದಿ ಬಣ್ಣಕ್ಕೆ ತಿರುಗಿ ಕೊಳೆಯುತ್ತಿವೆ. ಬೆಳೆ ಬೆಂಕಿ ರೋಗದಿಂದಲೂ ಬಳಲಿ ಬೆಂಡಾಗುತ್ತಿದೆ’ ಎಂದು ರೈತ ದೇವರಾಜು ಕಣ್ಣೀರಿಟ್ಟರು.

‘ಶುಂಠಿ ಕೃಷಿ ಪರಿಪೂರ್ಣವಾಗಿ ಮುಗಿಯಲು ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ಬೇಕಾಗುತ್ತದೆ. ಬಿತ್ತನೆಯಿಂದ ಕಟಾವು ಮುಗಿಯುವವರೆಗೆ ಬಿಡುವಿಲ್ಲದಂತೆ ಕೆಲಸ ಮಾಡಬೇಕು. ಶುಂಠಿ ಗಡ್ಡೆ ಕಟ್ಟಲು ಅನುಕೂಲವಾಗುವಂತೆ ಬೆಡ್ ಮಾಡಿ ಬಿತ್ತನೆ ಮಾಡಬೇಕು. ಆಗಾಗ್ಗೆ ಗಿಡಗಳಿಗೆ ಮಣ್ಣು ಏರಿಸಬೇಕು. ಶುಂಠಿ ಹೊಲದಲ್ಲಿ ಬರುವ ಕಳೆಯನ್ನು ಆಗಾಗ್ಗೆ ‌ತೆಗಿಸಬೇಕು. ಸಕಾಲಕ್ಕೆ ಗೊಬ್ಬರ ಹಾಕಿ ಔಷಧ ಸಿಂಪಡಣೆ ಮಾಡಬೇಕು. ಶುಂಠಿ ಪಸಲು ಕೈಗೆ ಸಿಗುವ ಹೊತ್ತಿಗೆ ಒಂದು ಎಕರೆಗೆ ₹10 ಲಕ್ಷ ವೆಚ್ಚವಾಗುತ್ತದೆ. ನಾನು 25 ಗುಂಟೆ ಶುಂಠಿ ಕೃಷಿಗೆ ಕೈಹಾಕಿ ₹ 2 ಲಕ್ಷ ಸಾಲದ ಹೊರೆ ಹೊರುವಂತಾಗಿದೆ’ ಎಂದು ದೇವರಾಜು ತಿಳಿಸಿದರು. 

‘ಬೇರೆ ಹೊಲದಲ್ಲಿ ಬೀನ್ಸ್ ಬೆಳೆದಿದ್ದೆ. ಮಳೆ‌ ಹೆಚ್ಚಾಗಿದ್ದರಿಂದ ಕಾಯಿ ಕಟ್ಟಿದ ಬೀನ್ಸ್ ಕೊಳೆತು ಹೋಯಿತು. ಗಾಯದ ಮೇಲೆ ಬರೆ ಎಳೆದಂತೆ ಶುಂಠಿಯಲ್ಲಿಯೂ ನಷ್ಟ ಆಗಿದೆ. ಶುಂಠಿಯಿಂದ ಬರುವ ಆದಾಯದಿಂದ ಇಬ್ಬರು ಹೆಣ್ಣುಮಕ್ಕಳನ್ನು ದಡ ಸೇರಿಸಬಹುದು ಎಂದು ಕಂಡಿದ್ದ ಕನಸೆಲ್ಲಾ ನುಚ್ಚು ನೂರಾಗಿದೆ’ ಎಂದು ದೇವರಾಜು ಕಣ್ಙಿರಿಟ್ಟರು.

ಹಳೇಬೀಡು ಭಾಗದಲ್ಲಿ ಹೆಚ್ಚಿದ ರೋಗ: ಗುತ್ತಿಗೆ ಜಮೀನುಗಳಲ್ಲಿ ಹತ್ತಾರು ಎಕರೆ ಶುಂಠಿ ಬೆಳೆದ ರೈತರು ಪಾಡು ಹೇಳಲು ಅಸಾಧ್ಯವಾಗಿದೆ. ಒಂದು ಎಕರೆಗೆ ₹60ಸಾವಿರದಿಂದ ₹80ಸಾವಿರದವರೆಗೆ ಕೊಟ್ಟು ಜಮೀನು ಗುತ್ತಿಗೆ ಮಾಡಿಕೊಂಡು ಹಲವು ಮಂದಿ ಶುಂಠಿ ಬೆಳೆದಿದ್ದಾರೆ.

‘ಒಬ್ಬೊಬ್ಬ ರೈತರು ಕನಿಷ್ಠ 3–4 ಎಕರೆಯಿಂದ ಹತ್ತಾರು ಎಕರೆ ಜಮೀನು ಗುತ್ತಿಗೆ ಮಾಡಿಕೊಂಡು ಶುಂಠಿ ಬೆಳೆದು ಕೈ ಸುಟ್ಟು ಕೊಂಡಿದ್ದಾರೆ. ಬಂಡವಾಳಶಾಯಿ ರೈತರು ಮಾತ್ರವಲ್ಲದೇ ಕೆಲವು ರೈತರು ಸಾಲದ ಹೊರೆಯಲ್ಲಿ ಮುಳುಗಿದ್ದಾರೆ’ ಎಂದು ರೈತ ಲೋಕೇಶ್ ಹೇಳಿದರು.

ರೋಗ ಬಂದ ನಂತರ ನಿಯಂತ್ರಣ ಮಾಡಲು ಮಾರುಕಟ್ಟೆಯಲ್ಲಿ ಔಷಧ ದೊರಕುತ್ತಿಲ್ಲ. ಮುನ್ಸೂಚನೆ ಇಲ್ಲದೇ ರೋಗ ಶುಂಠಿ ಬೆಳೆ ಆವರಿಸುತ್ತಿದೆ.
ರಾಜಗೆರೆ ಚಂದ್ರಯ್ಯ, ರೈತ

ಮುಂಜಾಗ್ರತಾ ಕ್ರಮ ಅಗತ್ಯ

‘ಶುಂಠಿ ಬೆಳೆಗೆ ರೋಗ ಹರಡಿದ ನಂತರ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಶುಂಠಿ ಬೆಳೆಗಾರರು ಮೊದಲೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಸತೀಶ್ ಕೆ.ಬಿ. ಹೇಳಿದರು.

‘ವ್ಯಾಕ್ಸಿನ್ ರೀತಿಯಲ್ಲಿ ಪ್ರಾಪಿರೋನೋಜಲ್ ಔಷಧ ಸಿಂಪಡಿಸಬೇಕು. ಶುಂಠಿ ಬೆಳೆಯಲ್ಲಿ ಗಾಳಿಯಿಂದ ರೋಗ ಹರಡುತ್ತಿದೆ. ಬೀಜದಿಂದಲೂ ರೋಗ ಹರಡುವುದರಿಂದ ರೈತರು ರೋಗ ರಹಿತ ಬೀಜದ ಆಯ್ಕೆ ಮಾಡಬೇಕು. ಮಳೆ ಹಾಗೂ ಶೀತದ ವಾತಾವರಣದಲ್ಲಿ ರೋಗ ವ್ಯಾಪಕವಾಗಿ ಹರಡುತ್ತದೆ. ರೋಗ ಬಂದ ಹೊಲದ ಮಣ್ಣಿನಿಂದ ಹರಿಯುವ ನೀರಿನಿಂದಲೂ ರೋಗ ಪಸರಿಸುತ್ತದೆ. ಮಳೆ ಹೆಚ್ಚಾಗಿದ್ದರಿಂದ ರೋಗ ವ್ಯಾಪಕವಾಗಿ ಹರಡುತ್ತಿದೆ. ವಿಜ್ಞಾನಿಗಳು ಸಹ ರೋಗ ಪರಿಶೀಲನೆ ಮಾಡಿದ್ದಾರೆ. ರೋಗ ಕಡಿಮೆ ಆಗುವವವರೆಗೆ ಪರ್ಯಾಯ ಬೆಳೆ ಮಾಡಲು ಸೂಚಿಸಿದ್ದಾರೆ’ ಎಂದು ತಿಳಿಸಿದರು. 

ಹಳೇಬೀಡು ಬಳಿಯ ರಾಜಗೆರೆಯಲ್ಲಿ ರೋಗದಿಂದ ಕೊಳೆಯುತ್ತಿರುವ ಶುಂಠಿ ಬೆಳೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.