ADVERTISEMENT

ಉನ್ನತ ಶಿಕ್ಷಣ ಇಲಾಖೆಗೆ ಅನುದಾನ ನೀಡಿ: ಶಾಸಕ ಎಚ್‌.ಡಿ. ರೇವಣ್ಣ ಆಗ್ರಹ

ಮೂಲಸೌಕರ್ಯ ಕಲ್ಪಿಸಲು ₹2 ಸಾವಿರ ಕೋಟಿ ನೀಡುವಂತೆ ಸರ್ಕಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 2:49 IST
Last Updated 31 ಮಾರ್ಚ್ 2021, 2:49 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ‘ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಉನ್ನತ ಶಿಕ್ಷಣ ಇಲಾಖೆಗೆ ಕೂಡಲೇ ₹2 ಸಾವಿರ ಕೋಟಿ ಅನುದಾನ ಮಂಜೂರು ಮಾಡಬೇಕು’ ಎಂದು ಶಾಸಕ ಎಚ್‌.ಡಿ. ರೇವಣ್ಣ ಆಗ್ರಹಿಸಿದರು.

‘ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ಅಡಿ 431 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 85 ಸರ್ಕಾರಿ ಪಾಲಿಟೆಕ್ನಿಕ್‌, 14 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಸೇರಿದಂತೆ ಒಟ್ಟು 528 ಸರ್ಕಾರಿ ಸಂಸ್ಥೆಗಳಿವೆ. 4.70 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ, ಕಳೆದ ಒಂದು ದಶಕದಿಂದ ಮೂಲ ಸೌಕರ್ಯಗಳಾದ ಸ್ವಂತ ಕಟ್ಟಡ, ತರಗತಿ ಕೊಠಡಿ, ಪ್ರಯೋಗಾಲಯ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಕಂಪ್ಯೂಟರ್‌ ಲ್ಯಾಬ್‌ಗಳ ಕೊರತೆ ಇದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ರಾಜ್ಯದಲ್ಲಿ 525 ಪ್ರಾಂಶುಪಾಲರ ಹುದ್ದೆಗಳು ಮಂಜೂರಾಗಿದ್ದು, ಕೇವಲ 70 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. 15,318 ಬೋಧಕ ಹುದ್ದೆಗಳಲ್ಲಿ 12,302 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 19,030 ಬೋಧಕೇತರ ಹುದ್ದೆಗಳ ಪೈಕಿ 7,572 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಟ್ಟಡ ಕೊರತೆ ನೀಗಿಸಲು 2,053 ಕೊಠಡಿಗಳು, 1,620 ಪ್ರಯೋಗಾಲಯಗಳು, 1,805 ಶೌಚಾಲಯಗಳು, 661 ಮಹಿಳಾ ನಿರೀಕ್ಷಣಾ ಕೊಠಡಿಗಳು, 272 ಗ್ರಂಥಾಲಯಕೊಠಡಿಗಳು ಸೇರಿದಂತೆ ಅನುಷ್ಠಾನದಲ್ಲಿರುವ 4,042 ಕಾಮಗಾರಿಗಳಿಗೆ ಒಟ್ಟು ₹2,431 ಕೋಟಿ ಅಗತ್ಯವಿದೆ. ಹಾಗೂ ಪೀಠೋಪಕರಣ, ಕಂಪ್ಯೂಟರ್‌ಗಳು, ಸ್ಮಾರ್ಟ್ ತರಗತಿ ಪ್ರಯೋಗಾಲಯ ಇತ್ಯಾದಿಗೆ ₹625 ಕೋಟಿ ಒದಗಿಸುವಂತೆ ಉನ್ನತ ಶಿಕ್ಷಣಇಲಾಖೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆಸಲ್ಲಿಸಿದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರ 2021-22ನೇ ಸಾಲಿನ ಬಜೆಟ್‌ನಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ₹483 ಕೋಟಿ ಮಾತ್ರ ನೀಡಿದೆ. ಬೋಧಕರ ಹುದ್ದೆ ಭರ್ತಿ ಮಾಡದೆ ಇರುವುದರಿಂದ ಕಾಲೇಜು ಶಿಕ್ಷಣ ಇಲಾಖೆಯಲ್ಲಿ 14,682 ಅತಿಥಿ ಉಪನ್ಯಾಸಕರು, ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ 1,209 ಉಪನ್ಯಾಸಕರು ಮತ್ತು ವಿಶ್ವವಿದ್ಯಾಲಯಗಳಲ್ಲಿ 2,074 ಸೇರಿದಂತೆ ಒಟ್ಟು 18,595 ಅತಿಥಿ ಉಪನ್ಯಾಸಕರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

‘ಹೊಸ ಶಿಕ್ಷಣ ನೀತಿ ಜಾರಿಯಲ್ಲಿದ್ದು, ಅದರಂತೆಯೇಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿರುವುದರಿಂದ ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಮೂಲಸೌಕರ್ಯ ಒದಗಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.