ADVERTISEMENT

ಹಾಸನ: ₹8.04 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 2:05 IST
Last Updated 17 ಸೆಪ್ಟೆಂಬರ್ 2025, 2:05 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಹಾಸನ: ಇಲ್ಲಿನ ಶಾಂತಿನಗರ ಬಡಾವಣೆಯ ಮನೆಯ ಬೀರುವಿನಲ್ಲಿಟ್ಟಿದ್ದ ₹ 8.04 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ಪ್ರೇಮಾ ಅವರು ಸೆ.15 ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ, 9 ನೇ ಕ್ರಾಸ್‌ನಲ್ಲಿರುವ ಸ್ನೇಹಿತೆಯ ಮನೆಗೆ ಹೋಗಿದ್ದರು. ಮುಕ್ಕಾಲು ಗಂಟೆಯ ನಂತರ ಮನೆಗೆ ವಾಪಸ್‌ ಬಂದಾಗ, ಮನೆಯ ಬಾಗಿಲು ತೆರೆದಿತ್ತು. ಮನೆ ಒಳಗಿನಿಂದ ಸುಮಾರು 30-35 ವರ್ಷದ ಅಪರಿಚಿತ ವ್ಯಕ್ತಿ ಮನೆಯಿಂದ ಪರಾರಿಯಾಗಿದ್ದಾನೆ.

ಒಳಗೆ ಹೋಗಿ ನೋಡಿದಾಗ ಬೀರುವಿನಲ್ಲಿ ಇಟ್ಟಿದ್ದ ಸುಮಾರು 134 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ. ಇಲ್ಲಿನ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

₹60 ಸಾವಿರ ಮೌಲ್ಯದ ಚಿನ್ನಾಭರಣ ಕಳವು

ಹಾಸನ: ತಾಲ್ಲೂಕಿನ ದುದ್ದ ಗ್ರಾಮದ ಕಣಿಕಾಲ್‌ ಬಡಾವಣೆಯ ಮನೆಯ ಹಿಂಬಾಗಿಲಿನ ಬೀಗ ಮುರಿದು ₹60 ಸಾವಿರ ಮೌಲ್ಯ ಚಿನ್ನಾಭರಣ, ನಗದುಹಣ, ಮೊಬೈಲ್ ಕಳವು ಮಾಡಲಾಗಿದೆ.

ಲಕ್ಷ್ಮೇಗೌಡ ಅವರು, ಸೆ.11 ರಂದು ಮನೆಗೆ ಬೀಗ ಹಾಕಿ ಹಾಸನಕ್ಕೆ ಬಂದಿದ್ದು, ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಹೋದಾಗ, ಕಳ್ಳತನ ನಡೆದಿರುವುದು ಗೊತ್ತಾಗಿದೆ.

ಮನೆಯ ಹಿಂಬಾಗಿಲನ್ನು ಮೀಟಿ ಒಳಗೆ ನುಗ್ಗಿರುವ ಕಳ್ಳರು, ₹ 60ಸಾವಿರ ಮೌಲ್ಯದ ಚಿನ್ನಾಭರಣ, ₹16,490 ಮೌಲ್ಯದ ಮೊಬೈಲ್‌, ₹ 14,500 ನಗದು ಕಳವು ಮಾಡಿದ್ದಾರೆ. ದುದ್ದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹50 ಸಾವಿರ ನಗದು, ಚಿನ್ನಾಭರಣ ಕಳವು

ಹಾಸನ: ಆಲೂರು ತಾಲ್ಲೂಕಿನ ದೊಡ್ಡಕಣಗಾಲು ಗ್ರಾಮದಲ್ಲಿ ಮನೆಯ ಬಾಗಿಲು ಮುರಿದು, ₹ 45ಸಾವಿರ ಮೌಲ್ಯದ ಚಿನ್ನಾಭರಣ, ₹50 ಸಾವಿರ ನಗದು ಕಳವು ಮಾಡಲಾಗಿದೆ.

ಗ್ರಾಮದ ಅರುಣ್‍ಕುಮಾರ್ ಸೆ.15 ರಂದು ಮನೆಗೆ ಬೀಗ ಹಾಕಿ, ಜಮೀನಿಗೆ ತೆರಳಿದ್ದರು. ಮಧ್ಯಾಹ್ನ ವಾಪಸ್ ಬಂದು ನೋಡಿದಾಗ, ಮನೆಯ ಮುಂಬಾಗಿಲು ತೆರೆದಿತ್ತು. ಒಳಗೆ ಹೋಗಿ ನೋಡಿದಾಗ, ಚಿನ್ನಾಭರಣ, ನಗದು ಕಳವಾಗಿತ್ತು. ಈ ಕುರಿತು ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಯಿಂದ ಮನನೊಂದು ಆತ್ಮಹತ್ಯೆ

ಹಾಸನ: ಹಲ್ಲೆಯಿಂದ ಮನನೊಂದು ಚನ್ನರಾಯಪಟ್ಟಣ ತಾಲ್ಲೂಕಿನ ಸುಗ್ಗೇನಹಳ್ಳಿಯ ಯೋಗೇಶ (38) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯೋಗೇಶ್‌ ಅಡಗೂರು ಚೋಳೇನಹಳ್ಳಿಯ ತನ್ನ ಅಕ್ಕನ ಮನೆಗೆ ಹೋಗಿದ್ದು, ಸೆ.14 ರಂದು ಅಕ್ಕನ ಮಗ ಸಂಜಯ್‌ ಜೊತೆಗೆ ಬೆಳ್ಳೂರು ಕ್ರಾಸ್‌ನಲ್ಲಿ ನಿಂತಿದ್ದಾಗ, ಅವಿನಾಶ್, ಜಗದೀಶ, ಲೋಹಿತ್, ಶಂಕರಣ್ಣ, ವಿಶ್ವ ಎಂಬುವವರು, ಯೋಗೇಶನ ಕಣ್ಣಿಗೆ ಖಾರದಪುಡಿ ಎರಚಿ, ರಾಡ್ ಮತ್ತು ಕೈಗಳಿಂದ ಹಲ್ಲೆ ಮಾಡಿದ್ದಾರೆ. ನಂತರ ಯೋಗೇಶಗೆ ಬೆಳ್ಳೂರಿನ ಬಿ.ಜಿ.ಎಸ್.‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಅಡಗೂರು ಚೋಳೇನಹಳ್ಳಿಯ ಅಕ್ಕನ ಮನೆಗೆ ಕರೆದುಕೊಂಡು ಹೋಗಲಾಗಿತ್ತು.

ಸೆ.15 ರಂದು ರೂಮಿನಲ್ಲಿ ಮಲಗಿದ್ದ ಯೋಗೇಶ್‌, ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವಮಾನ ಮಾಡಿದ್ದರಿಂದ ಯೋಗೇಶ ಆತ್ಮಹತ್ಯೆ ಮಾಡಿಕೊಂಡಿದ್ದು, ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಯೋಗೇಶ ತಾಯಿ, ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

15 ಜಾನುವಾರು ರಕ್ಷಣೆ

ಹಾಸನ: ಅರಕಲಗೂಡು ತಾಲ್ಲೂಕಿನ ರಾಮನಾಥಪುರ-ಬೆಟ್ಟದಪುರ ರಸ್ತೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 15 ಜಾನುವಾರುಗಳನ್ನು ರಕ್ಷಣೆ ಮಾಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ವಾಹನ ಚಾಲಕ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಹಲಗನಹಳ್ಳಿಯ ಮೊಹಮ್ಮದ್ ನಾಜ್ ಬಂಧಿತ ಆರೋಪಿ. ಖಚಿತ ಮಾಹಿತಿ ಮೇಲೆ ಸೆ. 15 ರಂದು ಮಧ್ಯಾಹ್ನ 12.30 ಕ್ಕೆ ಕೊಣನೂರು ಸಬ್‌ ಇನ್‌ಸ್ಪೆಕ್ಟರ್‌ ಪ್ರಹ್ಲಾದ್ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.

ರಾಮನಾಥಪುರದಿಂದ ಹಲಗನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಗೂಡ್ಸ್ ವಾಹನ ತಡೆದ ತಪಾಸಣೆ ನಡೆಸಿದಾಗ, ಸಿಂದಿ ಕರುಗಳು, ಎಮ್ಮೆ ಕರುಗಳು ಸೇರಿದಂತೆ 15 ಜಾನುವಾರು ಸಾಗಿಸುತ್ತಿರುವುದು ಪತ್ತೆಯಾಗಿದೆ. ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.