ADVERTISEMENT

ಸರ್ಕಾರ–ನೌಕರರ ಹಠಮಾರಿ ಧೋರಣೆ ಸರಿಯಲ್ಲ: ರೇವಣ್ಣ

ಮುಷ್ಕರ ಕೈ ಬಿಡಿ, ಮೇ 2ರ ವರೆಗೆ ಕಾಲಾವಕಾಶ ನೀಡಿ : ರೇವಣ್ಣ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 13:00 IST
Last Updated 12 ಏಪ್ರಿಲ್ 2021, 13:00 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ಸಾರಿಗೆ ಸಂಸ್ಥೆ ನೌಕರರು ಮತ್ತು ಸರ್ಕಾರ ಹಠಮಾರಿ ಧೋರಣೆ ಬಿಡಬೇಕು. ನೌಕರರು ತಕ್ಷಣ ಮುಷ್ಕರ ಕೈ ಬಿಟ್ಟು, ಮೇ 2 ರವರೆಗೂ ಸರ್ಕಾರಕ್ಕೆ ಕಾಲಾವಕಾಶ ನೀಡಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು.

ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗಿದೆ. ಈ ಮುಷ್ಕರದ ಹಿಂದೆ ಖಾಸಗಿ ಬಸ್‌ ಮಾಲೀಕರು ಕೈವಾಡವೂ ಇದೆ. ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಕಾರಣ ಮೇ 2ರ ವರೆಗೆ ಸರ್ಕಾರ ಕಾಲಾವಕಾಶ ಕೇಳಿದೆ. ಯುಗಾದಿ ಹಬ್ಬ ಕಳೆದು ಪ್ರತಿಭಟನೆ ಮಾಡಬಹುದಿತ್ತು. ಸಂಸ್ಥೆಗೆ ಒಂದಿಷ್ಟು ಲಾಭ ಬರುತ್ತಿತ್ತು. ಮೂರು ತಿಂಗಳಿಗೆ ಪ್ರತಿಭಟನೆ ಮಾಡುವುದು ತಪ್ಪು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎರಡನೇ ತಾರೀಖು ನೌಕರರ ಸಮಸ್ಯೆ ಸರಿ ಪಡಿಸದಿದ್ದರೆ ನಾವು ನಿಮ್ಮೊಂದಿಗೆ ಜೈ ಜೋಡಿಸುತ್ತೇವೆ. ವಿರೋಧ ಪಕ್ಷಗಳು ಮತ್ತು ಕಾರ್ಮಿಕರನ್ನು ಕೂರಿಸಿಕೊಂಡು ಸಿ.ಎಂ ಮಾತನಾಡಲಿ. ರಾಜ್ಯ ಕೆಎಸ್‌ಆರ್‌ಟಿಸಿಮಾದರಿ ಸಂಸ್ಥೆಯಾಗಿದ್ದು, ಒಂದು ಸಂಸ್ಥೆ ಕಟ್ಟಿ ಬೆಳೆಸುವುದು ತುಂಬಾ ಕಷ್ಟದ ಕೆಲಸ. ಸಂಸ್ಥೆಯನ್ನು ಹಾಳು ಮಾಡಲು ಹೆಚ್ಚು ಸಮಯ ಬೇಕಾಗಿಲ್ಲ. ನೌಕರರಿಗೆ ಹಿಂದೆಯಿಂದ ಹೇಳಿಕೊಟ್ಟು ಪ್ರತಿಭಟನೆಮಾಡಿಸುತ್ತಿರುವವರನ್ನು ಕೈ ಬಿಡಬೇಕು. ಕೆಲ ಶಕ್ತಿಗಳು ನೌಕರರ ಹಿಂದೆ ಕೆಲಸ ಮಾಡುತ್ತಿವೆ ಎಂದು ಕೋಡಿಹಳ್ಳಿಚಂದ್ರಶೇಖರ್‌ ವಿರುದ್ಧಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ADVERTISEMENT

ಮುಷ್ಕರ ವಿಚಾರದಲ್ಲಿ ರಾಜಕೀಯ ಮಾಡಬಾರದು. ನೌಕರರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು.‌ ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ, ವಿದ್ಯುತ್ ಬಿಲ್ ಕೂಡ ಹೆಚ್ಚಾಗಿದೆ. ನೌಕರರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಆಗುತ್ತಾ? ಈಗಾಗಲೇ 45ಕ್ಕೂ ಹೆಚ್ಚು ಜನರನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ, ಅಮಾನತಿನಿಂದ ಸಮಸ್ಯೆ ಬಗೆಹರಿಯಲ್ಲ. ತಕ್ಷಣ ನೌಕರರ ಸಂಬಳ ನೀಡಬೇಕು ಎಂದು ಆಗ್ರಹಿಸಿದರು.

‘ನೌಕರರ ಮುಷ್ಕರಿಂದ ಸಾರ್ವಜನಿಕರಿಗೆ ತೊಂದರೆ ಆಗಿದೆ. ಖಾಸಗಿ ವಾಹನಗಳ ಮಾಲೀಕರು ಪ್ರಯಾಣಿಕರ ಸುಲಿಗೆ ಮಾಡುತ್ತಿವೆ. ಈ ಹಣ ಕೇವಲ ಬಸ್‌ ಮಾಲೀಕರಿಗೆ ಹೋಗುತ್ತಿಲ್ಲ. ಬದಲಿಗೆ ಆರ್‌ಟಿಒ ಅಧಿಕಾರಿಗಳಿಗೂ ಪಾಲು ಹೋಗುತ್ತಿದೆ. ಬ್ರೇಕ್‌ ಇನ್‌ಸ್ಪೆಕ್ಟರ್‌ಗಳು ಮತ್ತು ಆರ್‌ಟಿಒ ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ಇತ್ತೀಚೆಗೆ ಹಾಸನ ಆರ್‌ಟಿಒ ಕಚೇರಿ ಮೇಲೆಯೂ ಎಸಿಬಿ ದಾಳಿ ನಡೆಯಿತು. ಆದರೆ, ಪ್ರಕರಣ ದಾಖಲಿಸಲಿಲ್ಲ ಏಕೆ? ಹಣ ಪಡೆದು ಬಿಟ್ಟಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.