ADVERTISEMENT

ಜಾತಿ ಜನಗಣತಿ ವರದಿ ಜಾರಿಗೆ ಸರ್ಕಾರದ ಇಚ್ಛಾಶಕ್ತಿ ಇಲ್ಲ: ಅಹಿಂಸಾ ಚೇತನ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 11:07 IST
Last Updated 24 ಫೆಬ್ರುವರಿ 2025, 11:07 IST
<div class="paragraphs"><p>ಬಾಗೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಅಂಬೇಡ್ಕರ್ ಸೇನೆಯಿಂದ ಆಯೋಜಿಸಿದ್ದ ಬೃಹತ್ ದಲಿತ ಜಾಗೃತಿ ಸಮಾವೇಶವನ್ನು ನಟ ಅಹಿಂಸಾ ಚೇತನ್ ಉದ್ಘಾಟಿಸಿದರು.</p></div>

ಬಾಗೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಅಂಬೇಡ್ಕರ್ ಸೇನೆಯಿಂದ ಆಯೋಜಿಸಿದ್ದ ಬೃಹತ್ ದಲಿತ ಜಾಗೃತಿ ಸಮಾವೇಶವನ್ನು ನಟ ಅಹಿಂಸಾ ಚೇತನ್ ಉದ್ಘಾಟಿಸಿದರು.

   

ಬಾಗೂರು (ನುಗ್ಗೇಹಳ್ಳಿ): ‘ಜಾತಿ ಜನಗಣತಿ ವರದಿಯನ್ನು ಜಾರಿಗೊಳಿಸಲು ಯಾವುದೇ ಸರ್ಕಾರಗಳಿಗೂ ಇಚ್ಛಾಶಕ್ತಿ ಇಲ್ಲ. ಕೇವಲ ದಲಿತರ ಮತ ಪಡೆಯಲು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿವೆ’ ಎಂದು ನಟ ಅಹಿಂಸಾ ಚೇತನ್ ಆರೋಪಿಸಿದರು.

ಹೋಬಳಿ ಕೇಂದ್ರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ನಡೆದ ಬೃಹತ್ ದಲಿತ ಜಾಗೃತಿ ಸಮಾವೇಶ ಮತ್ತು ಅಂಬೇಡ್ಕರ್ ಸೇನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಚುನಾವಣೆಯ ಸಂದರ್ಭದಲ್ಲಿ ಯಾವುದೇ ಸರ್ಕಾರಗಳು ಜಾತಿ ಜನಗಣತಿ ವರದಿ ಜಾರಿಗೆ ತರುವ ಕುರಿತು ಆಶ್ವಾಸನೆ ನೀಡುತ್ತಾರೆ. ಆದರೆ, ಚುನಾವಣೆ ಮುಗಿದ ಮೇಲೆ ಆ ವಿಷಯವನ್ನೇ ಮರೆತು ಬಿಡುತ್ತಾರೆ. ಇದು ದಲಿತ ಹಾಗೂ ಹಿಂದುಳಿದ ವರ್ಗಕ್ಕೆ ಮಾಡಿದ ಅನ್ಯಾಯವಲ್ಲವೇ’ ಎಂದು ಪ್ರಶ್ನಿಸಿದರು.

‘ದೇಶದ 130 ಕೋಟಿ ಜನರಿಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಾವು ಬರೆದಂತ ಸಂವಿಧಾನದಲ್ಲಿ ನ್ಯಾಯ ಕಲ್ಪಿಸಿದ್ದಾರೆ. ಆದರೆ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆಲವು ಸಂದರ್ಭಗಳಲ್ಲಿ ನ್ಯಾಯ ಸಿಗುತ್ತಿಲ್ಲ. ಆದಿವಾಸಿ ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತ ಕೆಲಸವನ್ನು ಯಾವುದೇ ಸರ್ಕಾರಗಳು ಮಾಡಬೇಕು. ಅದು ಅವರ ಜವಾಬ್ದಾರಿಯೂ ಕೂಡ ಆಗಿದೆ’ ಎಂದರು.

‘ಕೋಮುವಾದ ಹಾಗೂ ಮನುವಾದ ಈ ಎರಡು ವಿಚಾರಗಳನ್ನು ರಾಜಕಾರಣಕ್ಕೆ ಬಳಸಿಕೊಂಡು ಜಾತಿ– ಜಾತಿಗಳ ಮುಂದೆ ದ್ವೇಷವನ್ನು ಹುಟ್ಟು ಹಾಕುವ ಕೆಲಸವನ್ನು ಮಾಡಲಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾವು ಹೆಚ್ಚು ಮನೋವಿಜ್ಞಾನ ಬೆಳೆಸಿಕೊಂಡರೆ ಸಮಾಜದಲ್ಲಿರುವ ಅಸ್ಪೃಶ್ಯತೆಯನ್ನು ಹೋಗಲಾಡಿಸಬಹುದು. ಈ ಬಗ್ಗೆ ದಲಿತ ಹಾಗೂ ಹಿಂದುಳಿದ ವರ್ಗ ಎಚ್ಚೆತ್ತುಕೊಂಡರೆ ಮಾತ್ರ ಸಾಧ್ಯ’ ಎಂದು ತಿಳಿಸಿದರು.

ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಹಾಗೂ ಚಲನಚಿತ್ರ ನಟ ಪಿ.ಮೂರ್ತಿ ಮಾತನಾಡಿ, ‘ಕೆಲವರು ಸಂವಿಧಾನವನ್ನು ಬದಲಿಸುವ ಕುರಿತು ಹೇಳಿಕೆ ಕೊಡುತ್ತಾರೆ. ಆದರೆ ಅವರಿಗಿನ್ನೂ ಗೊತ್ತಿಲ್ಲ ಸೂರ್ಯನಷ್ಟೇ ಬೆಂಕಿ ಜ್ವಾಲೆಯನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಹೊಂದಿದೆ. ಅದನ್ನು ಮುಟ್ಟಿದರೆ ಅವರು ಸುಟ್ಟು ಹೋಗುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲೂ ಅಂಬೇಡ್ಕರ್ ಸೇನೆ ಕಾರ್ಯನಿರ್ವಹಿಸುತ್ತಿದ್ದು ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದ ಜನರ ಪರವಾಗಿ ಸಂಘ ಧ್ವನಿ ಎತ್ತುವ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ. ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದೆ ಮೌನವಾಗಿರುವುದನ್ನು ನೋಡಿದರೆ ಸರ್ಕಾರದ ಮೇಲೆ ಅನುಮಾನ ಮೂಡುತ್ತಿದೆ’ ಎಂದರು.

ಕಾಂಗ್ರೆಸ್ ಯುವ ಮುಖಂಡ ಶಶಾಂಕ್ ಗೋಪಾಲಸ್ವಾಮಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ.ಪಿ.ಮೂರ್ತಿ ಸಾರಥ್ಯದಲ್ಲಿ ನಿರ್ಮಾಣಗೊಂಡಿರುವ ‘ಕೋರ’ ಚಲನಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರವಣಬೆಳಗೊಳ ಯೋಜನಾಧಿಕಾರಿ ಸದಾಶಿವ್ ಕುಲಾಲ್, ಅಂಬೇಡ್ಕರ್ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಗುಣಶೇಖರ್ (ದಲಿತರ ಧರ್ಮ), ಜಿಲ್ಲಾ ಮಹಿಳಾ ಅಧ್ಯಕ್ಷೆ ಭೀಮಾ ಪುತ್ರಿ ಧನಲಕ್ಷ್ಮಿ, ‘ಕೋರ’ ಚಿತ್ರದ ನಿರ್ದೇಶಕ ಒರಟ ಶ್ರೀ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಗೀತಾಂಜಲಿ ನಾಗರಾಜು, ಉಪಾಧ್ಯಕ್ಷ ಆನಂದ್, ಸಾಹಿತಿ ಬೆಳಗುಲಿ ಕೆಂಪಯ್ಯ, ಮಕ್ಕಳ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ವೆಂಕಟೇಶ್, ತಗಡೂರು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್, ಸಮಾಜದ ಪ್ರಮುಖರಾದ ಕೆಇಬಿ ಕುಮಾರ್, ಚಂದ್ರಕಲಾ, ಲಕ್ಷ್ಮೀದೇವಿ, ಚಂದು, ಭಾನುಕುಮಾರ್, ಪ್ರಕಾಶ್, ಮನೋಜ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.