ADVERTISEMENT

ಹಾಸನ: ಬಡಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ

ಎಐಡಿಎಸ್‌ಒ ಪ್ರಥಮ ಜಿಲ್ಲಾ ಸಮ್ಮೇಳನದಲ್ಲಿ ಉಪಾಧ್ಯಕ್ಷೆ ಚಂದ್ರಕಲಾ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 8:32 IST
Last Updated 14 ಡಿಸೆಂಬರ್ 2025, 8:32 IST
ಎಐಡಿಎಸ್‌ಒ ನೇತೃತ್ವದಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ಜಿಲ್ಲಾ ವಿದ್ಯಾರ್ಥಿ ಸಮ್ಮೇಳನದ ಅಂಗವಾಗಿ ಹಾಸನದಲ್ಲಿ ಪ್ರತಿಭಟನೆ ನಡೆಸಲಾಯಿತು
ಎಐಡಿಎಸ್‌ಒ ನೇತೃತ್ವದಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ಜಿಲ್ಲಾ ವಿದ್ಯಾರ್ಥಿ ಸಮ್ಮೇಳನದ ಅಂಗವಾಗಿ ಹಾಸನದಲ್ಲಿ ಪ್ರತಿಭಟನೆ ನಡೆಸಲಾಯಿತು   

ಹಾಸನ: ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯಡಿ ಗ್ರಾಮ ಪಂಚಾಯಿತಿಗೆ ಒಂದರಂತೆ ರಾಜ್ಯದಲ್ಲಿ 6ಸಾವಿರ ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸುವ ಮೂಲಕ 40ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಬಡ ಮಕ್ಕಳ ಶಿಕ್ಷಣ ಕನಸನ್ನು ಕಸಿದುಕೊಳ್ಳಲು ಮುಂದಾಗುತ್ತಿದೆ ಎಂದು ರಾಜ್ಯ ಸಮಿತಿಯ ಉಪಾಧ್ಯಕ್ಷೆ ಚಂದ್ರಕಲಾ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಶನಿವಾರ ಆಯೋಜಿಸಿದ್ದ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯ ಪ್ರಥಮ ವಿದ್ಯಾರ್ಥಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಒಂದೇ ಒಂದು ಶಾಲೆ ಮುಚ್ಚುವುದಿಲ್ಲ ಎಂಬ ಸರ್ಕಾರದ ಸ್ಪಷ್ಟನೆ ಮತ್ತು ಮಾಧ್ಯಮಗಳೆದುರಿಗೆ ರಾಜ್ಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರು, ಹೇಳುತ್ತಿರುವ ಮಾತು ಸತ್ಯಕ್ಕೆ ದೂರವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯಾವ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯನ್ನಾಗಿ ಮಾಡಬೇಕು ಮತ್ತು ಆ ಶಾಲೆಗೆ ಯಾವ ಯಾವ ಶಾಲೆಗಳನ್ನು ಸೇರಿಸಬೇಕು ಎಂಬುದರ ಪೂರ್ಣ ಪಟ್ಟಿಯನ್ನು ಈಗಾಗಲೇ ಸಿದ್ಧಗೊಳಿಸಲಾಗಿದೆ ಎಂದರು.

ADVERTISEMENT

ಮುಚ್ಚುತ್ತಿರುವ 40ಸಾವಿರ ಸರ್ಕಾರಿ ಶಾಲೆಗಳ ಸಂಪೂರ್ಣ ಪಟ್ಟಿಯನ್ನು ಎಐಡಿಎಸ್‌ಒ ನಾಡಿನ ಜನತೆಯ ಮುಂದಿಟ್ಟು, ಕೆಪಿಎಸ್-ಮ್ಯಾಗ್ನೆಟ್ ಯೋಜನೆಯ ಕರಾಳ ವಾಸ್ತವವನ್ನು ಬಯಲಿಗೆಳೆದಿದೆ. ಈಗ ಸರ್ಕಾರದ ಉತ್ತರವೇನು ಎಂಬುದು ನಾಡಿನ ಜನತೆಯ ಪ್ರಶ್ನೆ ಎಂದರು.

ವಿಲೀನದ ನೆಪದಲ್ಲಿ ಮುಚ್ಚುವ ಶಾಲಾ ಕಟ್ಟಡಗಳನ್ನು ಇತರ ಕೆಲಸಗಳಿಗೆ ವಿನಿಯೋಗಿಸಲು ಸರ್ಕಾರವು ಮುಂದಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಮಸೂದೆ ಮಂಡಿಸುವುದಾಗಿ ಹೇಳಿದೆ. ಒಂದೇ ಒಂದು ಶಾಲೆಯನ್ನು ಮುಚ್ಚದಿದ್ದ ಮೇಲೆ ಸರ್ಕಾರಿ ಶಾಲೆಗಳನ್ನು ಬೇರೆ ಉದ್ದೇಶಕ್ಕೆ ವಿನಿಯೋಗಿಸುವ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ ಎಂದು ಪ್ರಶ್ನಿಸಿದರು.

ಎಐಡಿಎಸ್‌ಒ ರಾಜ್ಯ ಘಟಕದ ಖಜಾಂಚಿ ಸುಭಾಷ್ ಮಾತನಾಡಿ, ಈ ದೇಶದಲ್ಲಿ ಶಿಕ್ಷಣಕ್ಕಾಗಿ ಧ್ವನಿ ಎತ್ತಿದ ಚಿಂತಕರಾದ ಈಶ್ವರ ಚಂದ್ರ ವಿದ್ಯಾಸಾಗರ್, ಜ್ಯೋತಿರಾವ್ ಪುಲೆ, ಸಾವಿತ್ರಿಬಾಯಿ ಪುಲೆ  ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ನಮ್ಮ ನಾಡಿನ ಕುವೆಂಪು, ಕುದ್ಮುಲ್ ರಂಗರಾವ್, ಪಂಡಿತ್ ತಾರಾನಾಥ್ ಮುಂತಾದ ಮಹನೀಯರ ಆಶಯಗಳಿಗೆ ವಿರುದ್ಧವಾಗಿ ಸರ್ಕಾರವು ಶಿಕ್ಷಣದ ಮೇಲೆ ಪ್ರಹಾರ ನಡೆಸಿದೆ ಎಂದು ದೂರಿದರು.

ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲು ಹಾಗೂ ನಾಯಕತ್ವ ನೀಡಲು ಹಾಸನ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಚೈತ್ರಾಯು.ಕೆ. (ಅಧ್ಯಕ್ಷೆ), ಅಭಿಷೇಕ್ ಡಿ.ಪಿ. (ಉಪಾಧ್ಯಕ್ಷ), ಸುಷ್ಮಾ (ಕಾರ್ಯದರ್ಶಿ), ಮಮತಾ, ಪುರುಷೋತ್ತಮ್, ಚಂದ್ರಶೇಖರ್, ಶ್ಯಾಮಲಾ, ಮೋಹನ್ ರಾತೋಡ್, ಧನರಾಜ್ (ಜಂಟಿ ಕಾರ್ಯದರ್ಶಿಗಳು), ಕಾರ್ಯಕಾರಿ ಸಮಿತಿಯಲ್ಲಿ ವಿವಿಧ ಕಾಲೇಜಿನ 31 ವಿದ್ಯಾರ್ಥಿಗಳು ಹಾಗೂ 65 ವಿದ್ಯಾರ್ಥಿಗಳು ಕೌನ್ಸಿಲ್ ಸದಸ್ಯರಾಗಿ ಆಯ್ಕೆಯಾದರು.

ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಸರ್ಕಾರ ಶಾಲೆ ಮುಚ್ಚುವುದಕ್ಕೆ ವಿರೋಧ

ಸರ್ಕಾರವು ಹೊಸ ಕೆಪಿಎಸ್ ಮ್ಯಾಗ್ನೆಟ್‌ ಶಾಲೆಗಳನ್ನು ತೆರೆದು ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಶಾಲೆ ಉಳಿಸಲು ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ಮಾಡುತ್ತಿರುವ ಹೋರಾಟಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸಮ್ಮೇಳನ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ಮಲ್ಲೇಶ್ ಗೌಡ ಹೇಳಿದರು.

ಸರ್ಕಾರಿ ಶಾಲೆಗಳನ್ನು ಮುಚ್ಚುವ ಬದಲು ಹೆಚ್ಚು ಅನುದಾನ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕು. ಆದರೆ ವಾಸ್ತವದಲ್ಲಿ ಬೇರೆ ಬೇರೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಇಂದು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ  ಮಾತುಗಳು ಕೇವಲ ಹಾಳೆಯ ಮೇಲಿದೆ. ಈ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಮಹತ್ವದ ಜವಾಬ್ದಾರಿ ಶಿಕ್ಷಣ ಪ್ರೇಮಿ ಜನತೆ ಹಾಗೂ ಪೋಷಕರ ಮೇಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.