ADVERTISEMENT

ಕನಿಷ್ಠ ವೇತನ ಪರಿಷ್ಕರಣೆ ಮಾಡಲು ಒತ್ತಾಯ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾ ಪಂ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 5:54 IST
Last Updated 14 ಜುಲೈ 2022, 5:54 IST
ಗ್ರಾಮ ಪಂಚಾಯಿತಿ ನೌಕರರು ಹಾಸನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ನೌಕರರು ಹಾಸನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.   

ಹಾಸನ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ಪರಿಷ್ಕರಣೆ, ನೌಕರರಿಗೆ ಬಾಕಿ ವೇತನ ಮತ್ತು ಗ್ರಾಚ್ಯುಟಿ ಪಾವತಿಸದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ಬಾಕಿ ವೇತನ ಗ್ರಾಚ್ಯುಟಿ ದಂಡ ಸಹಿತವಾಗಿ ಪಾವತಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರು ನಗರದ ಕಾರ್ಮಿಕ ಇಲಾಖೆ ಉಪ ಆಯುಕ್ತರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿಗಳ ನೌಕರರಾದ ಬಿಲ್‍ಕಲೆಕ್ಟರ್, ಗುಮಾಸ್ತ್ರ ಕ್ಲರ್ಕ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್, ವಾಟರ್ ಮ್ಯಾನ್, ಸ್ವೀಪರ್ ಇತ್ಯಾದಿ ನೌಕರರಿಗೆ 2016ರಿಂದ ಜಾರಿಗೆ ಬರುವಂತೆ ಸರ್ಕಾರ ಕನಿಷ್ಠ ವೇತನ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿತ್ತು. 5 ವರ್ಷಕ್ಕೆ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಹೊಸ ಅಧಿಸೂಚನೆ ಹೊರಡಿಸಬೇಕಿದೆ. ಈ ಕುರಿತು ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘವು ಸರ್ಕಾರಕ್ಕೆ ಮನವಿ ಸಲ್ಲಿಸಿದ ಪರಿಣಾಮವಾಗಿ 2021 ರಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ವೇತನ ಪರಿಷ್ಕರಿಸಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಿದರು.

ಈ ಕರಡು ಅಧಿಸೂಚನೆಯಲ್ಲಿ ಬಿಲ್‍ಕಲೆಕ್ಟರ್, ಗುಮಾಸ್ತ, ಕ್ಲರ್ಕ್, ಕಂ ಡಾಟಾ ಎಂಟ್ರಿ ಅಪರೇಟರ್‌ಗಳಿಗೆ ₹15,196, ವಾಟರ್‌ಮ್ಯಾನ್, ಪಂಪ್ ಆಪರೇಟರ್‌ಗಳಿಗೆ ₹13,509, ಅಟೆಂಡರ್‌ಗಳಿಗೆ ₹12,873 ಮತ್ತು ಸ್ವೀಪರ್‌ಗಳಿಗೆ ₹16,019 ಕನಿಷ್ಠ ವೇತನ ನಿಗದಿಪಡಿಸಲಾಗಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಅವಕಾಶ ನೀಡಿತ್ತು. ಅದರಂತೆ ಬಿಲ್‌ ಕಲೆಕ್ಟರ್, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಅಪರೇಟರ್‌ಗಳಿಗೆ ₹ 38,021.86, ವಾಟರ್‌ಮ್ಯಾನ್, ಪಂಪ್ ಆಪರೇಟರ್‌ಗಳಿಗೆ ₹ 33,062.50, ಅಟೆಂಡರ್‌ಗಳಿಗೆ ₹ 28,750, ಸ್ವಚ್ಛತಾಗಾರರಿಗೆ ₹ 25,000 ನೀಡುವಂತೆ ಸಂಘದಿಂದ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಇದಕ್ಕೆ ಅನುಗುಣವಾಗಿ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆ ಅಧಿಸೂಚನೆಯನ್ನು ಹೊರಡಿಸಬೇಕು. ನಿವೃತ್ತರಾದ ಮತ್ತು ಕರ್ತವ್ಯದಲ್ಲಿದ್ದಾಗಲೇ ನಿಧನರಾದ ಬಹುತೇಕ ನೌಕರರಿಗೆ ಗ್ರಾಚ್ಯುಟಿ ಪಾವತಿಸಿಲ್ಲ. ಜಿಲ್ಲೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ, ನಿವೃತ್ತ ಮತ್ತು ಮೃತ ನೌಕರರ ಕುಟುಂಬದವರಿಗೆ ದಂಡ ಸಹಿತವಾಗಿ ಗ್ರಾಚ್ಯುಟಿ ಪಾವತಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೆಗೌಡ, ಖಜಾಂಚಿ ಕುಮಾರಸ್ವಾಮಿ, ಅರವಿಂದ್ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.