ADVERTISEMENT

ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎರಡನೇ ಸ್ಥಾನ: : ಕೆಪಿಸಿಸಿ ಸದಸ್ಯ ಮಹೇಶ್‌

ಬಿಜೆಪಿ ಯಾವ ಸ್ಥಾನದಲ್ಲಿದೆ ಬಹಿರಂಗಪಡಿಸಲಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 11:00 IST
Last Updated 13 ಜನವರಿ 2021, 11:00 IST
ಎಚ್‌.ಕೆ. ಮಹೇಶ್‌
ಎಚ್‌.ಕೆ. ಮಹೇಶ್‌   

ಹಾಸನ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಸದಸ್ಯರು ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್‌ ಎರಡನೇ ಸ್ಥಾನದಲ್ಲಿದೆ ಎಂದು ಕೆಪಿಸಿಸಿ ಸದಸ್ಯ ಎಚ್.ಕೆ.ಮಹೇಶ್‌ ಹೇಳಿದರು.

ಹಾಸನ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಚನ್ನರಾಯಪಟ್ಟಣ, ಸಕಲೇಶಪುರ, ಹೊಳೆನರಸೀಪುರ, ಬೇಲೂರು, ಅರಸೀಕೆರೆಯಲ್ಲಿ ಕಾಂಗ್ರೆಸ್‌ ದ್ವಿತೀಯ ಸ್ಥಾನದಲ್ಲಿದೆ. ಬಿಜೆಪಿ ಯಾವ ಸ್ಥಾನದಲ್ಲಿದೆ ಎಂಬುದನ್ನು ಶಾಸಕ ಪ್ರೀತಂ ಜೆ.ಗೌಡ ಸ್ಪಷ್ಟಪಡಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮೂರನೇ ಸ್ಥಾನ ಇರಬಹುದು. ಬಿಜೆಪಿ ರೀತಿ ಹಣ, ಮದ್ಯ ಹಂಚಿಕೆ
ಮಾಡುವಷ್ಟು ಶಕ್ತಿ ಇಲ್ಲ. ರೈತರ ಪರ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಾರೆ. ಆದರೆ, ಮೂರು ಕೃಷಿ ಸುಧಾರಣಾ ಕಾನೂನುಗಳ ಜಾರಿಗೆ ಸುಪ್ರೀಂಕೋರ್ಟ್‌ ಮಧ್ಯಂತರ ಏಕೆ ನೀಡಿದೆ ಎಂದು ಪ್ರಶ್ನಿಸಿದರು.

ನಗರದ ಹೊಸ ಬಸ್‌ ನಿಲ್ದಾಣ ಬಳಿಯ ಚನ್ನಪಟ್ಟಣ ಕೆರೆಯಲ್ಲಿ ಉದ್ಯಾನ ನಿರ್ಮಾಣ ಯೋಜನೆಗೆ ಸಮ್ಮಿಶ್ರ
ಸರ್ಕಾರದ ಅವಧಿಯಲ್ಲಿ ಅನುಮೋದನೆ ಸಿಕ್ಕಿದ್ದು ನಿಜ. ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ಅವರು ₹144ಕೋಟಿ ಅನುದಾನ ನೀಡಿದ್ದು ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ADVERTISEMENT

ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾದ ಅನುದಾನವನ್ನೇ ಶಾಸಕ ಪ್ರೀತಂ ಜೆ.ಗೌಡ
ಅವರು ನಗರದ 6 ಕೆರೆ ಮತ್ತು 9 ಉದ್ಯಾನ ಅಭಿವೃದ್ಧಿಗೆ ಹಂಚಿಕೆ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಬಜೆಟ್‌
ಮಂಡನೆಗೆ ಸಿದ್ಧತೆ ನಡೆದಿದೆ. ಶಾಸಕರಿಗೆ ತಮ್ಮ ಪ್ರಭಾವ ಬಳಸಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತರಲಿ ಎಂದು ಸವಾಲು ಹಾಕಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕನಿಷ್ಟ 5 ಸ್ಥಾನ ಗೆಲ್ಲಲಿದೆ. ಜೆಡಿಎಸ್‌ ಸೇರ್ಪಡೆಯಾಗುವ ವಿಚಾರ ಸುಳ್ಳು. ವದಂತಿಗಳಿಗೆ ಕಿವಿ ಕೊಡಬೇಕಾಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಂಡಿತ್ತು. ಗೆದ್ದ ಬಳಿಕ ಸಂಸದರು ತಿರುಗಿಯೂ ನೋಡಿಲ್ಲ. ವಿರೋಧ ಪಕ್ಷದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಇರುವುದರಿಂದ ಸಹಜವಾಗಿ ಎಚ್.ಡಿ. ರೇವಣ್ಣ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಚಂದ್ರು, ಆಶು ಆಶಿಫ್, ಸಿಂಗಟಗೆರೆ ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.