ADVERTISEMENT

ಹಳೇಬೀಡು: ಸ್ಮಾರಕದ ಬಳಿ ಗಣಿಗಾರಿಕೆ: ಲಾರಿ, ಕಲ್ಲು ವಶ

ಗ್ರಾಮಸ್ಥರು ನೀಡಿದ ಮಾಹಿತಿಯಂತೆ ಹಳೇಬೀಡು ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 13:26 IST
Last Updated 18 ಮಾರ್ಚ್ 2025, 13:26 IST
ಹಳೇಬೀಡಿನಲ್ಲಿರುವ ಕೇಂದ್ರ ಪುರಾತತ್ವ ಇಲಾಖೆಯ ನಗರೇಶ್ವರ ಉತ್ಖನನ ಸ್ಮಾರಕ ಹಿಂಭಾಗ ಅಕ್ರಮವಾಗಿ ಗಣಿಗಾರಿಕೆ ಮಾಡಿ ಸಾಗಿಸುತ್ತಿದ್ದ ಬಂಡೆಗಳನ್ನು ಮಂಗಳವಾರ ಬೆಳಿಗ್ಗೆ ಹಳೇಬೀಡು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಹಳೇಬೀಡಿನಲ್ಲಿರುವ ಕೇಂದ್ರ ಪುರಾತತ್ವ ಇಲಾಖೆಯ ನಗರೇಶ್ವರ ಉತ್ಖನನ ಸ್ಮಾರಕ ಹಿಂಭಾಗ ಅಕ್ರಮವಾಗಿ ಗಣಿಗಾರಿಕೆ ಮಾಡಿ ಸಾಗಿಸುತ್ತಿದ್ದ ಬಂಡೆಗಳನ್ನು ಮಂಗಳವಾರ ಬೆಳಿಗ್ಗೆ ಹಳೇಬೀಡು ಪೊಲೀಸರು ವಶಪಡಿಸಿಕೊಂಡಿದ್ದಾರೆ   

ಹಳೇಬೀಡು: ಇಲ್ಲಿನ ಸ್ಮಾರಕಗಳ ಬಳಿ ಅಕ್ರಮ ಗಣಿಗಾರಿಕೆ ನಡೆಸಿ, ಬಂಡೆಗಳನ್ನು ಸಾಗಿಸುತ್ತಿದ್ದ ಬಗ್ಗೆ ಬಸ್ತಿಹಳ್ಳಿ ಯುವಕರು ನೀಡಿದ ಮಾಹಿತಿಯಂತೆ ಮಂಗಳವಾರ ಕಾರ್ಯಾಚರಣೆ ನಡೆಸಿದ ಪೊಲೀಸರು, ಲಾರಿ ಸಮೇತ ಕಲ್ಲುಗಳನ್ನು ವಶಕ್ಕೆ ಪಡೆದಿದ್ದಾರೆ.

ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸೇರಿದ ಸ್ಮಾರಕದ ಬಳಿ ಗಣಿಗಾರಿಕೆ ಮಾಡುವಂತಿಲ್ಲ ಎಂಬ ನಿಯಮವಿದ್ದರೂ, ಮೂರು ದಿನದಿಂದ ರಾತೋರಾತ್ರಿ ಗಣಿಗಾರಿಕೆ ನಡೆಯುತ್ತಿತ್ತು. ಇದು ಹತ್ತಿರದಲ್ಲಿರುವ ಬಸ್ತಿಹಳ್ಳಿಯ ಯುವಕರ ಗಮನ ಬಂದಿದೆ. ಯುವಕರು ಪೊಲೀಸ್ ತುರ್ತು ಸೇವೆಗೆ ಕರೆ ಮಾಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಹಳೇಬೀಡು ಪೊಲೀಸರು, ಬಂಡೆ ಸಾಗಿಸುತ್ತಿದ್ದ ಲಾರಿ ವಶಪಡಿಸಿಕೊಂಡಿದ್ದಾರೆ. ಲಾರಿ ಹಾಗೂ ಬಂಡೆಯನ್ನು ಗಣಿ ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ. 

‘ಗಣಿಗಾರಿಕೆ ನಡೆಸಲು ಅನುಮತಿ ಪಡೆದಿದ್ದಾರೆಯೇ, ಇಲ್ಲವೆ ಎಂಬುದನ್ನು ಇಲಾಖೆ ಪರಿಶೀಲನೆ ನಡೆಸುತ್ತದೆ. ರಾಜಧನ ಪಾವತಿಸದೇ ಗಣಿಗಾರಿಕೆ ನಡೆಸಿದ್ದರೆ ಗಣಿ ಭೂ ವಿಜ್ಞಾನ ಇಲಾಖೆಯವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ’ ಎಂದು ಸಬ್ ಇನ್‌ಸ್ಪೆಕ್ಟರ್ ಸಿದ್ದಲಿಂಗ ಬಾನಸೆ ತಿಳಿಸಿದರು.

ADVERTISEMENT

‘ಪುರಾತತ್ವ ಇಲಾಖೆಯ ಸ್ಮಾರಕಗಳ ಸುತ್ತ ಗಣಿಗಾರಿಕೆ ನಡೆಸುವಂತಿಲ್ಲ ಎಂಬ ನಿಯಮವಿದ್ದರೂ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಹೊಯ್ಸಳೇಶ್ವರ ದೇವಾಲಯ, ಜೈನ ಬಸದಿ, ನಗರೇಶ್ವರ ಸ್ಮಾರಕಗಳ ಸುತ್ತ 100 ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಾಣಕ್ಕೆ ಪುರಾತತ್ವ ಇಲಾಖೆ ಅವಕಾಶ ಕೊಡುತ್ತಿಲ್ಲ. ಶಿಥಿಲವಾದ ಮನೆಗಳನ್ನು ದುರಸ್ತಿ ಮಾಡಿಕೊಂಡು ವಾಸ ಮಾಡುವುದಕ್ಕೂ ಇಲಾಖೆ ಸಿಬ್ಬಂದಿ ಅಡ್ಡಿಪಡಿಸುತ್ತಾರೆ. ಮೂರು ದಿನದಿಂದ ರಾತ್ರಿ ವೇಳೆ ಗಣಿಗಾರಿಕೆ ಮಾಡುತ್ತಿದ್ದರೂ, ಇಲಾಖೆಯವರು ಗಮನ ಹರಿಸಿಲ್ಲ ಎಂಬುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಬಸ್ತಿಹಳ್ಳಿ ಗ್ರಾಮದ ಮದನ್, ವಿಜಯ್ ಕುಮಾರ್, ಹರೀಶ, ಈಶ್ವರಪ್ಪ ಆರೋಪಿಸಿದ್ದಾರೆ.

‘ನಗರೇಶ್ವರ ಉತ್ಖನನ ಸಂಕೀರ್ಣದ ಬಳಿ ಗಣಿಗಾರಿಕೆ ನಡೆಯುತ್ತಿರುವುದು ಮಂಗಳವಾರ ಬೆಳಿಗ್ಗೆ ಗಮನಕ್ಕೆ ಬಂದಿದೆ. ಗಣಿಗಾರಿಕೆ ನಡೆಯುತ್ತಿದ್ದ ನಿವೇಶನದ ಮಾಲೀಕರಾದ ಗಿರೀಜಮ್ಮ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಪುನಃ ಗಣಿಗಾರಿಕೆ ಆರಂಭಿಸಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ’ ಎಂದು ಸಹಾಯಕ ಸ್ಮಾರಕ ಸಂರಕ್ಷಣಾಧಿಕಾರಿ ಗೌತಮ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.