ADVERTISEMENT

ಹಳೇಬೀಡು ಹೊಯ್ಸಳೇಶ್ವರ ದೇವಾಲಯ | ಕಾಣದ ಅಭಿವೃದ್ಧಿ; ಸೌಲಭ್ಯ ಮರೀಚಿಕೆ

ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿ ಒಂದು ವರ್ಷ

ಎಚ್.ಎಸ್.ಅನಿಲ್ ಕುಮಾರ್
Published 18 ಸೆಪ್ಟೆಂಬರ್ 2024, 5:56 IST
Last Updated 18 ಸೆಪ್ಟೆಂಬರ್ 2024, 5:56 IST
ಹಳೇಬೀಡು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿದೆ ಎಂದು ಸೂಚಿಸುವ  ಫಲಕ. 
ಹಳೇಬೀಡು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿದೆ ಎಂದು ಸೂಚಿಸುವ  ಫಲಕ.    

ಹಳೇಬೀಡು: ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿ ಸೆಪ್ಟೆಂಬರ್ 18 ಕ್ಕೆ ಒಂದು ವರ್ಷ ಕಳೆದಿದೆ. ಆದರೆ ಅಭಿವೃದ್ದಿ ಕೆಲಸಗಳು ಗರಿಗೆದರದೇ ಇರುವುದು ಜನರಲ್ಲಿ ಬೇಸರ ಮೂಡಿಸಿದೆ. 

ಜನರು ನಿರೀಕ್ಷಿಸಿದಷ್ಟು ಅಭಿವೃದ್ದಿ ಕಾಣದೇ ಹಳೇಬೀಡು ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಹಾಳಾದ ಬೀಡು ಹಳೇಬೀಡು ಎಂಬುದು ಅಕ್ಷರಶಃ ಸತ್ಯವಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಕೆಲವು ಪ್ರಾಚ್ಯವಸ್ತು ಶಾಸ್ತ್ರಜ್ಞರು ಹಳೇಬೀಡು ಎಂದರೆ ಹಾಳಾದ ಬೀಡು ಅಲ್ಲ. ಹಳೆಯ ನಗರ ಎಂದು ಪ್ರತಿಪಾದಿಸುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಹಳೇಬೀಡಿನಲ್ಲಿ ಹಳೆಯ ನಗರದ ಲಕ್ಷಣವೂ ಇಲ್ಲ. ಹೊಸ ಪಟ್ಟಣವಾಗಿಯೂ ಬೆಳೆಯದೇ ಸೊರಗಿದೆ.

ಹೊಯ್ಸಳೇಶ್ವರ ದೇವಾಲಯ, ಜೈನ ಬಸದಿಯ ಬಳಿ ಶೌಚಾಲಯ ಇಲ್ಲದೇ ಪ್ರವಾಸಿಗರು ಪರದಾಡುವಂತಾಗಿದೆ. ದೇವಾಲಯ ಪ್ರವೇಶ ದ್ವಾರದ ಬಳಿ ಇರುವ ಹಳೆಯ ಶೌಚಾಲಯ ಪಾಳು ಬಿದ್ದಿದೆ. ಶೌಚಾಲಯ ದುರಸ್ತಿ ಮಾಡಿಸಿದರೆ ಪ್ರವಾಸಿಗರಿಗೆ ಅನುಕೂಲ ಆಗುತ್ತಿತ್ತು ಎಂಬ ಮಾತು ಜನರಿಂದ ಕೇಳಿ ಬರುತ್ತಿದೆ.

ADVERTISEMENT

ದೂರದಿಂದ ಹಳೇಬೀಡಿಗೆ ಬಂದು ವಾಹನ ಇಳಿದಾಕ್ಷಣ ಪ್ರವಾಸಿಗರು ಸುಧಾರಿಸಿಕೊಳ್ಳಲು ಸೂಕ್ತ ಸ್ಥಳಾವಕಾಶ ಇಲ್ಲ. ನಿತ್ಯ ಕರ್ಮ ಮುಗಿಸಿಕೊಂಡು ಫ್ರೆಶ್ ಆಗಿ ದೇವಾಲಯ ವೀಕ್ಷಣೆ ಮಾಡಲು ಮುಂಜಾನೆ ಬೇಗ ಬಂದವರ ಪಾಡು ಹೇಳಲು ಅಸಾಧ್ಯವಾಗಿದೆ ಎಂದು ಜನರು ದೂರುತ್ತಿದ್ದಾರೆ.   

ಹೊಯ್ಸಳೇಶ್ವರ ದೇವಾಲಯ ಸಮೀಪದ ದ್ವಾರಸಮುದ್ರ ಕೆರೆ ಭರ್ತಿಯಾಗಿ ಕೋಡಿಯಲ್ಲಿ ಹರಿಯುವ ನೀರು ಜಲಪಾತದಂತೆ ಧುಮುಕುತ್ತಿದೆ. ಕೋಡಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಸ್ವಚ್ಛತೆ ಕೈಗೊಂಡಿದೆ. ಆದರೆ ಜನರಲ್ಲಿ ಅರಿವಿಲ್ಲದೆ, ಕೆರೆ ಸುತ್ತ  ಹಾಗೂ ಏರಿ ಬೀದಿಯಲ್ಲಿ ಮಲಮೂತ್ರ ವಿಸರ್ಜಿಸುವುದಲ್ಲದೆ, ಏರಿ ಬದಿ ಕಸ ಸುರಿಯುವ ಪ್ರಕ್ರಿಯೆ ನಡೆಯುತ್ತಿದೆ.

ಪ್ರವಾಸಿಗರು ದೋಣಿ ವಿಹಾರ ಮಾಡುವುದಲ್ಲದೇ, ಕೆಲಕಾಲ ಕೆರೆ ವೀಕ್ಷಣೆ ಮಾಡಲು ಆಸನಗಳ ವ್ಯವಸ್ಥೆ ಆಗಬೇಕು. ಪ್ರವಾಸಿಗರು ಕೆರೆ ನೀರಿಗೆ ಇಳಿಯದಂತೆ ಜಾಲರಿ ಹಾಕಬೇಕು ಎಂಬ ಮಾತು ಸ್ಥಳೀಯರಿಂದ ಕೇಳಿ ಬರುತ್ತಿದೆ.

 ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ

ಸಂಪರ್ಕ ರಸ್ತೆ ಗುಂಡಿಮಯ  

ಹಳೇಬೀಡಿಗೆ ಬರುವ ರಸ್ತೆಗಳು ಗುಂಡಿಮಯವಾಗಿವೆ. ಹಳೇಬೀಡಿಗೆ ಹಗರೆ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಹಾಸನ– ಬೇಲೂರು ರಸ್ತೆಯಲ್ಲಿ ಹೆಜ್ಜೆಗೊಂದರಂತೆ ಗುಂಡಿ ಬಿದ್ದಿದೆ. ಅಡಗೂರು ಮಾರ್ಗದ ರಸ್ತೆಯಲ್ಲಿಯೂ ಗುಂಡಿಗಳಾಗಿವೆ. ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ರಸ್ತೆ ಕೂಡ ಗುಂಡಿಗಳಿಂದ ಮುಕ್ತವಾಗಿಲ್ಲ. ಲೋಕೋಪಯೋಗಿ ಇಲಾಖೆಯವರಿಗೆ ಯುನೆಸ್ಕೊ ತಂಡವೇ ನಿರ್ದೇಶನ ನೀಡಬೇಕಾಗಿದೆ ಎನ್ನುತ್ತಾರೆ ರೈತ ಮಲ್ಲಾಪುರ ರವಿ.  

ಹೋಂ ಸ್ಟೇ ನಿರಾಸಕ್ತಿ

ಹಳೇಬೀಡಿಗೆ ಬರುವ ಪ್ರವಾಸಿಗರ ವಾಸ್ತವ್ಯಕ್ಕೆ ಸಮರ್ಪಕವಾಗಿ ವಸತಿ ದೊರಕುತ್ತಿಲ್ಲ. ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಶಾಂತಲಾ ಮಯೂರ ಹೋಟೆಲ್‌ನಲ್ಲಿ ಕೇವಲ ನಾಲ್ಕು ಕೊಠಡಿಗಳಿವೆ. ಖಾಸಗಿ ಲಾಡ್ಜ್ ನಲ್ಲಿ 10 ಕೊಠಡಿಗಳಿವೆ. ಕಲ್ಯಾಣ ಮಂಟಪಗಳಲ್ಲಿ ವಿವಾಹಗಳಿದ್ದರೆ ಲಾಡ್ಜ್‌ನಲ್ಲಿ ಪ್ರವಾಸಿಗರಿಗೆ ಕೊಠಡಿ ದೊರಕುವುದಿಲ್ಲ. ಹಳೇಬೀಡು ಭಾಗದ ಜನರಿಗೆ ಪ್ರವಾಸೋದ್ಯಮವನ್ನು ಬಳಸಿಕೊಳ್ಳುವ ಕಲೆ ಗೊತ್ತಿಲ್ಲ. ಹೀಗಾಗಿ ಹೋಂ ಸ್ಟೇ ಗಳು ಸೃಷ್ಟಿಯಾಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ದೊರಕುತ್ತದೆ ಎಂದರೂ ಹೋಂ ಸ್ಟೇ ತೆರೆಯಲು ಇಲ್ಲಿಯ ಜನರು ಆಸಕ್ತಿ ತೋರಿಸಿಲ್ಲ. 

ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವುದರಿಂದ ಪ್ರವಾಸೋದ್ಯಮ ಲೋಕೋಪಯೋಗಿ ಗ್ರಾಮೀಣಾಭಿವೃದ್ಧಿ ಮೊದಲಾದ ಇಲಾಖೆಗಳು ಅಭಿವೃದ್ದಿಯತ್ತ ಚಿತ್ತ ಹರಿಸಬೇಕಾಗಿದೆ.
ಶರತ್ ಎಚ್.ಎನ್. , ಕಾಂಗ್ರೆಸ್ ಮುಖಂಡ
ಗ್ರಾಮ ಪಂಚಾಯಿತಿಯಿಂದ ದೇವಾಲಯ ಬಳಿ ಸುಗಮ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಸ್ವಚ್ಛತೆ ಕೈಗೊಳ್ಳಲಾಗಿದೆ. ಶೌಚಾಲಯ ನಿರ್ಮಾಣಕ್ಕೆ ಪುರಾತತ್ವ ಇಲಾಖೆ ಅನುಮತಿ ಕೇಳಲಾಗಿದೆ.
ಎಸ್.ಸಿ.ವಿರೂಪಾಕ್ಷ, ಪಿಡಿಒ, ಹಳೇಬೀಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.