
ಹಳೇಬೀಡು: ‘ಸಾಹಿತ್ಯದ ಮೂಲ ಬೇರು ಜನಪದದಲ್ಲಿ ಅಡಗಿದೆ. ಬಾಯಿಂದ ಬಾಯಿಗೆ ವರ್ಗಾವಣೆ ಹೊಂದಿದ ಅಕ್ಷರದ ಸಾಲುಗಳು ಕಾಲಕ್ರಮೇಣ ಲಿಖಿತರೂಪ ಪಡೆದು ಅತ್ಯುತ್ತಮ ಸಾಹಿತ್ಯವಾಗಿ ಹೊರಹೊಮ್ಮಿವೆ’ ಎಂದು ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಉಮೇಶ್ ಹೊಸಹಳ್ಳಿ ಹೇಳಿದರು.
ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟದ ಭರವಸಾ ಕೋಶ ಹಾಗೂ ಕನ್ನಡ ವಿಭಾಗದ ಆಶ್ರಮದಲ್ಲಿ ನಡೆದ ಸಾಹಿತ್ಯ ಮತ್ತು ಯುವ ಜನತೆ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಸಾಹಿತ್ಯ ಆರಂಭದಲ್ಲಿ ಅನಕ್ಷರಸ್ಥರಿಂದ ಹುಟ್ಟಿದೆ. ನಂತರ ಸಾಹಿತ್ಯ ವಿದ್ಯಾವಂತರಿಗೆ ಜ್ಜಾನಾರ್ಜನೆ ನೀಡುವ ಶಕ್ತಿಯಾಗಿ ಹೊರ ಹೊಮ್ಮಿದೆ. ಸಾಹಿತ್ಯ ಯುವ ಜನರಿಗೆ ವೈಚಾರಿಕತೆ, ತಾರ್ಕಿಕ ತಲೆಯನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ’ ಎಂದು ಉಮೇಶ್ ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ.ಬಿ.ಕೆ.ಶ್ರೀನಿವಾಸ್ ಮಾತನಾಡಿ, ‘ಸಾಹಿತ್ಯದ ಜ್ಞಾನ ಸಂಪಾದಿಸಿದರೆ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಇಂದಿನ ಯುವ ಜನತೆ ಸಾಹಿತ್ಯದ ಅಧ್ಯಯನಕ್ಕೆ ಮಹತ್ವ ನೀಡಬೇಕಾಗಿದೆ. ಯುವ ಜನತೆ ಉತ್ತಮ ಸಾಹಿತ್ಯ ಅಧ್ಯಯನ ಮಾಡುವುದರೊಂದಿಗೆ ಸನ್ಮಾರ್ಗದತ್ತ ಹೆಜ್ಜೆ ಹಾಕಬೇಕಾಗಿದೆ’ ಎಂದರು.
ಕನ್ನಡ ವಿಭಾಗ ಮುಖ್ಯಸ್ಥ ತಿಮ್ಮನಾಯಕ ಮಾತನಾಡಿ, ‘ಸಾಹಿತ್ಯ ಎಂದರೆ ಕೇವಲ ಭಾಷೆಗೆ ಸಂಬಂಧಿಸಿದಂತೆ ಎಂದು ತಿಳಿಯಬಾರದು. ಸಾಹಿತ್ಯದಲ್ಲಿ ವಿವಿಧ ಪ್ರಕಾರಗಳಿವೆ. ವಿವಿಧ ವಿಷಯಗಳ ಅಧ್ಯಯನಕ್ಕೆ ಸಾಹಿತ್ಯ ಸಹಕಾರಿಯಾಗುತ್ತದೆ’ ಎಂದರು.
ಐಕ್ಯೂಎಸಿ ಸಂಚಾಲಕ ಡಾ.ಅಭಿಷೇಕ್.ಎನ್, ಹಿರಿಯ ಶ್ರೇಣಿ ಗ್ರಂಥಪಾಲಕ ಡಾ.ಮನೋಜ್ ಕುಮಾರ್, ಪ್ರಾಧ್ಯಾಪಕರಾದ ರಾಘವೇಂದ್ರ ಕೆ.ಸಿ, ಶಂಕರಪ್ಪ ಎಸ್.ಆರ್, ಚಂದ್ರಶೇಖರ ಸಿಂಗ್, ರೇಷ್ಮಾಭಾನು, ಪ್ರಥಮ ದರ್ಜೆ ಸಹಾಯಕ ಉಮೇಶ್.ಎಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.