ಬೇಲೂರು: ಇಲ್ಲಿನ ಕೆಎಸ್ಆರ್‌ಟಿಸಿ ಡಿಪೋ ವ್ಯವಸ್ಥಾಪಕಿ ಶಾಜೀಯಭಾನು ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಬಸ್ ಚಾಲಕ ಕೋಟಿಗನಹಳ್ಳಿಯ ಹರೀಶ್ ಸೋಮವಾರ ಬೆಳಿಗ್ಗೆ ವಿಷ ಸೇವಿಸಿದ್ದಾರೆ.
ಬೇಲೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
‘ನನ್ನ ಸಾವಿಗೆ ಡಿಪೋ ಘಟಕ ವ್ಯವಸ್ಥಾಪಕಿ ಶಾಜೀಯ ಅವರೇ ಕಾರಣ, ಅವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಹರೀಶ್ ಪತ್ರ ಬರೆದಿದ್ದಾರೆ.
ಡಿಪೋದಲ್ಲಿರುವ ವಿಶ್ರಾಂತಿ ಕೊಠಡಿಯಲ್ಲಿ ವಿಷ ಸೇವಿಸಿ ಒದ್ದಾಡುತ್ತಿದ್ದ ಹರೀಶ್ ಅವರನ್ನು ವ್ಯವಸ್ಥಾಪಕಿ ಶಾಜೀಯಭಾನು ಹಾಗೂ ಇತರೆ ನೌಕರರು ಬಸ್‌ನಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸಿದರು.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ್ದ ಶಾಸಕ ಎಚ್.ಕೆ. ಸುರೇಶ್ ಮಾತನಾಡಿ ‘ಹರೀಶ್ ಕುಟುಂಬದವರು ಹಾಗೂ ನೌಕರರನ್ನು ಸಮಾಧಾನಪಡಿಸಿಡಿದರು.
‘ಡಿಪೋ ವ್ಯವಸ್ಥಾಪಕಿ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್ ಅವರಿಂದಾಗಿ ಇಲ್ಲಿ ಯಾವೊಬ್ಬ ಚಾಲಕ ಹಾಗೂ ನಿರ್ವಾಹಕರು ಕೆಲಸ ಮಾಡದ ಸ್ಥಿತಿ ನಿರ್ಮಾಣವಾಗಿದೆ, ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಕೆಲಸಗಾರರಿಗೆ ತೊಂದರೆ ನೀಡುತ್ತಿದ್ದಾರೆ. ಇವರಿಬ್ಬರ ಮೇಲೆ ಕಠಿಣ ಕ್ರಮ ಕೈಗೊಂಡು ಅಮಾನತುಗೊಳಿಸುವಂತೆ ಸಾರಿಗೆ ಸಚಿವರಿಗೆ ದೂರವಾಣಿ ಮೂಲಕ ಮನವಿ ಮಾಡಿದ್ದೇನೆ. ಅವರು ನನ್ನ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಇರಬಾರದು. ನೌಕರರ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡಲು ಬಿಡುವುದಿಲ್ಲ, ಬೇಲೂರು ಹಾಗೂ ಸಕಲೇಶಪುರ ಡಿಪೋಗಳು ಚಿಕ್ಕಮಗಳೂರು ವಿಭಾಗದಲ್ಲಿ ಇರುವುದರಿಂದ ಸಮಸ್ಯೆಯಾಗಿದ್ದು, ಹಾಸನ ವಿಭಾಗಕ್ಕೆ ವರ್ಗಾವಹಿಸುವಂತೆ ಸದನದಲ್ಲಿ ಮಾತನಾಡುತ್ತೇನೆ’ ಎಂದು ಶಾಸಕರು ತಿಳಿಸಿದರು.
ಡಿಪೋ ವ್ಯವಸ್ಥಾಪಕಿ ವಿರುದ್ಧ ಪ್ರತಿಭಟನೆ
ಶಾಜೀಯಭಾನು ಅವರನ್ನು ವರ್ಗಾವಣೆ ಮಾಡಬೇಕು ಎಂದು ಚಾಲಕರು ಪ್ರತಿಭಟನೆ ನಡೆಸಿದರು. ಶಾಜೀಯಭಾನು ಉಡಾಫೆಯಿಂದ ವರ್ತಿಸುತ್ತಾರೆ. ಅವರ ವಿರುದ್ಧ ಯಾರಾದರೂ ಮಾತನಾಡಿದರೆ ಅವರನ್ನು ಕೆಲಸದಿಂದ ವಜಾ ಮಾಡುತ್ತಾರೆ. ನೌಕರರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು ನನಗೆ ಕೆಂದ್ರ ಕಚೇರಿಯ ತನಕ ಸಂಪರ್ಕವಿದೆ ನೀವು ಏನು ಮಾಡಲು ಆಗುವುದಿಲ್ಲ ಹೋಗ್ರೋ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಅವರನ್ನು ವರ್ಗಾವಣೆ ಮಾಡುವ ತನಕ ನಾವು ಕೆಲಸ ಮಾಡುವುದಿಲ್ಲ’ ಎಂದು ಚಾಲಕರು ಪಟ್ಟುಹಿಡಿದರು.
ನೌಕರರ ಮನವೋಲಿಸಿದ ಕೆಎಸ್ಆರ್‌ಟಿಸಿ ಡಿಸಿ
ಬೇಲೂರು ಡಿಪೋಗೆ ಬಂದ ಕೆಎಸ್‌ಆರ್‌ಟಿಸಿ ಡಿಸಿ ಜಗದೀಶ್ ಕುಮಾರ್ ‘ವಿಷ ಕುಡಿದಿರುವ ಹರೀಶ್ ಅವರನ್ನು ಆಸ್ಪತ್ರೆಯಲ್ಲಿ ನೋಡಿಕೊಂಡು ವೈದ್ಯರ ಜೊತೆ ಮಾತನಾಡಿ ಬಂದಿದ್ದೇನೆ. ಅವರು ಶ್ರೀಘ್ರವಾಗಿ ಗುಣವಾಗಿವ ಭರವಸೆ ನೀಡಿದ್ದಾರೆ. ಘಟಕ ವ್ಯವಸ್ಥಾಪಕರನ್ನು ಬದಲಾವಣೆ ಮಾಡುವಂತೆ ಕೆಂದ್ರ ಕಚೇರಿಗೆ ಶಿಫಾರಸು ಮಾಡಲಾಗಿದೆ. ತಕ್ಷಣದಿಂದ ರಜೆಯಲ್ಲಿ ತೆರಳುವಂತೆ ತಿಳಿಸಲಾಗಿದೆ. ಅವರನ್ನು ಇಲ್ಲಿ ಮುಂದುವರೆಸಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ನೌಕರರ ಮೇಲಿರುವ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಡುತ್ತೇನೆ. ನಾನು ಇರುವವರೆಗೂ ನೀವು ಇಷ್ಟಪಟ್ಟು ಕೆಲಸ ಮಾಡಬೇಕೆ ಹೊರತು ಕಷ್ಟಪಟ್ಟು ಕೆಲಸ ಮಾಡಲು ನಾನು ಬಿಡುವುದಿಲ್ಲ’ ಎಂದು ನೌಕರರ ಮನವೋಲಿಸಿದ ನಂತರ ಚಾಲಕ ನಿರ್ವಾಹಕರು ಬಸ್ ತೆಗೆದು ಕೆಲಸಕ್ಕೆ ಹೋರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.