ADVERTISEMENT

ಹರಿಹರಪುರ: ಬೇಸಿಗೆಗೂ ಮುನ್ನವೇ ಕುಡಿಯುವ ನೀರಿಗೆ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 6:44 IST
Last Updated 18 ಫೆಬ್ರುವರಿ 2026, 6:44 IST
<div class="paragraphs"><p>ಹಾಸನ ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ಮಹಿಳೆಯರು ನೀರಿಗಾಗಿ ಕೊಡ ಇಟ್ಟು ಕಾಯುತ್ತಿರುವುದು</p></div>

ಹಾಸನ ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ಮಹಿಳೆಯರು ನೀರಿಗಾಗಿ ಕೊಡ ಇಟ್ಟು ಕಾಯುತ್ತಿರುವುದು

   

ಹಾಸನ: ಜಿಲ್ಲೆಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಗ್ರಾಮೀಣ ಪ್ರದೇಶದ ಜನರು ಶುದ್ಧ ಕುಡಿಯುವ ನೀರಿಗೂ ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ಹಲವು ತಿಂಗಳಿನಿಂದ ಸಮರ್ಪಕ ಹಾಗೂ ಶುದ್ಧ ಕುಡಿಯುವ ನೀರು ಲಭ್ಯ ಆಗುತ್ತಿಲ್ಲ ಎಂದು ಗ್ರಾಮಸ್ಥರು, ಸರ್ಕಾರ ಹಾಗೂ ಸ್ಥಳೀಯ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮದ ಬಹುತೇಕ ನಿವಾಸಿಗಳು ಕೂಲಿ ಕಾರ್ಮಿಕರಾಗಿದ್ದು, ಕನಿಷ್ಠ ಸೌಕರ್ಯವಾದ ಶುದ್ಧ ಕುಡಿಯುವ ನೀರು ಸಿಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಜೆಜೆಎಂ (ಜಲಜೀವನ್ ಮಿಷನ್) ಯೋಜನೆಯಡಿ ಕೆಲವೊಮ್ಮೆ ನೀರು ಪೂರೈಕೆ ಆಗುತ್ತಿದೆ. ಆದರೆ, ನೀರು ಕಲುಷಿತ ಆಗಿರುವುದರಿಂದ ಕುಡಿಯಲು ಯೋಗ್ಯವಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ADVERTISEMENT

ಈ ನೀರನ್ನು ಬಳಸಿದ ಪರಿಣಾಮ ಮಕ್ಕಳು ಹಾಗೂ ವೃದ್ಧರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಆರೋಗ್ಯ ಕೆಟ್ಟರೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗುತ್ತದೆ. ನಮಗೆ ಗ್ಯಾರಂಟಿಗಳಿಗಿಂತ ಶುದ್ಧ ಕುಡಿಯುವ ನೀರೇ ಮುಖ್ಯ, ಕಲುಷಿತ ನೀರು ಕುಡಿಯುವುದರಿಂದ ಕಾಯಿಲೆಗಳು ಹೆಚ್ಚುತ್ತಿದ್ದು, ಜೆಜೆಎಂ ಯೋಜನೆಯಡಿ ಪೂರೈಕೆ ಆಗುತ್ತಿರುವ ನೀರು ಸುರಕ್ಷಿತವಲ್ಲ ಎಂದು ಗ್ರಾಮದ ಮಹಿಳೆಯರು ದೂರಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಧರಣಿ ನಡೆಸುತ್ತೇವೆ. ಅಲ್ಲೂ ಉತ್ತರ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದೇವೆ ಎಂದು ಎಚ್ಚರಿಸಿದರು.

ಬೇಸಿಗೆಯ ಮುನ್ನವೇ ಉಲ್ಬಣಗೊಂಡಿರುವ ಈ ನೀರಿನ ಸಮಸ್ಯೆ ನಿವಾರಣೆಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಗ್ರಾಮದಲ್ಲಿ ಆರೋಗ್ಯ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಆತಂಕ ಎದುರಾಗಿದೆ. ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆಗಳು ತ್ವರಿತವಾಗಿ ಸ್ಪಂದಿಸಿ ಶುದ್ಧ ಕುಡಿಯುವ ನೀರಿನ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಿಡಿಒ ರಿಯಾಜ್‌ ಅಲಿ, ‘ಜಲಜೀವ ಮಿಷನ್ ಯೋಜನೆ ಅಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಕಲುಷಿತ ನೀರು ಪೂರೈಕೆ ಆಗುತ್ತಿರುವ ದೂರುಗಳು ಬಂದಿದ್ದು, ಗೇಟ್ ವಾಲ್ ಸಮಸ್ಯೆಯಿಂದ ಕೊಳವೆಬಾವಿ ನೀರಿನ ಪೂರೈಕೆಯಲ್ಲಿ ತೊಂದರೆಯಾಗಿತ್ತು. ಮಧ್ಯಾಹ್ನದ ವೇಳೆಗೆ ಗ್ರಾಮಕ್ಕೆ ಸಮರ್ಪಕ ನೀರನ್ನು ಒದಗಿಲಾಗುವುದು’ ಎಂದು ಭರವಸೆ ನೀಡಿದರು.

ಗೃಹಲಕ್ಷ್ಮಿ ಯೋಜನೆಯ ಹಣ ನಮಗೆ ಬೇಡ. ಶುದ್ಧ ಕುಡಿಯುವ ನೀರು ಪೂರೈಸಿ. ಪಂಚಾಯಿತಿಗೆ ದೂರು ನೀಡಿದರೂ ಸ್ಪಂದನೆ ಇಲ್ಲ. ಅನ್ನವಿಲ್ಲದಿದ್ದರೂ ಬದುಕಬಹುದು. ಶುದ್ಧ ಕುಡಿಯುವ ನೀರು ಅವಶ್ಯಕ.
ಸುಭದ್ರ, ಗ್ರಾಮದ ಮಹಿಳೆ
ಜೆಜೆಎಂ ಯೋಜನೆಯಡಿ ಪೂರೈಕೆ ಆಗುತ್ತಿರುವ ನೀರು ಕಲುಷಿತವಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು. ಶೀಘ್ರವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಿ.
ಮಹೇಶ್, ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.