ADVERTISEMENT

ಹಾಸನ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಕೆಡವಲು ನಿರ್ಧಾರ: ಡಿ.ಸಿ ವಿರುದ್ಧ ರೇವಣ್ಣ ಕಿ

​ಪ್ರಜಾವಾಣಿ ವಾರ್ತೆ
Published 19 ಮೇ 2022, 15:48 IST
Last Updated 19 ಮೇ 2022, 15:48 IST
ಎಚ್.ಡಿ. ರೇವಣ್ಣ
ಎಚ್.ಡಿ. ರೇವಣ್ಣ   

ಹಾಸನ: ಮಳೆ ಹಾನಿ ತುರ್ತು ಪರಿಹಾರಕೈಗೊಳ್ಳಲು ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ₹ 2 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ಹಾನಿ ಜೊತೆಗೆ ಆಸ್ತಿ-ಪಾಸ್ತಿ, ಪ್ರಾಣ ಹಾನಿಯೂ ಸಂಭವಿಸಿದೆ. ಕಳೆದ ಬಾರಿ ಸರ್ಕಾರದಿಂದ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ಬೆಳೆ–ಹಾನಿ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಶೀಘ್ರ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು. ಶಾಸಕರು, ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಅನೇಕ ಕಡೆ ವಿದ್ಯುತ್ ಕಂಬ ಮುರಿದು ಬಿದ್ದು ಹಲವು ಗ್ರಾಮ ಕತ್ತಲೆಯಲ್ಲಿವೆ. ಅಧಿಕಾರಿಗಳು ತುರ್ತು ದುರಸ್ತಿ ಕಾರ್ಯ ಕೈಗೊಂಡು ಸರಿಪಡಿಸಬೇಕು. ಯಾವುದೇ ಅನಾಹುತ ಸಂಭವಿಸಿದರೂ ತುರ್ತಾಗಿ ಸ್ಪಂದಿಸಬೇಕು. ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು. ಎಸ್‌ಡಿಆರ್‌ಎಫ್‌ ಅಥವಾ ಎನ್‌ಡಿಆರ್‌ಎಫ್‌ನಲ್ಲಿ ಪರಿಹಾರ ನೀಡಬೇಕು’ ಎಂದರು.

ADVERTISEMENT

‘ನಾಲೆಯಲ್ಲಿ ನೀರು ಬಿಡುವ ಮೊದಲು ಹೂಳು, ಗಿಡ, ಗಂಟಿ ತೆಗೆಯಬೇಕು. ಕೃಷಿ ಇಲಾಖೆಯವರು ರೈತರಿಗೆ ಯಾವುದೇ ಕೊರತೆಯಾಗದಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಿಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಒಡೆಯದಂತೆ ದೇವೇಗೌಡರು ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದರೂ ಕಟ್ಟಡ ಒಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪುಟಗೋಸಿ ವರ್ಗಾಣೆಗೋಸ್ಕರ ಹೆದರಿ ಡಿ.ಸಿ ಯಾರು ಏನು ಹೇಳಿದರೂ ಸಹಿ ಹಾಕುತ್ತಾರೆ’ ಎಂದು ಆಕ್ರೋಶ ಹೊರ ಹಾಕಿದ ಅವರು, ‘ಅವರಿಗೆ ನೈತಿಕತೆ ಇದ್ದರೆ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಬಿಜೆಪಿ ಸದಸ್ಯತ್ವ ಪಡೆಯಲು ಹೇಳಿ’ ಎಂದು ಹರಿಹಾಯ್ದರು.

‘₹ 10 ಕೋಟಿಯಲ್ಲಿ ಡಿ.ಸಿ ಕಚೇರಿ ಕಟ್ಟಲು ಸಾಧ್ಯನಾ? ₹ 100 ಕೋಟಿ ಅನುದಾನ ಬೇಕು. ಸಚಿವನಾಗಿದ್ದಾಗ ಪಾರಂಪರಿಕ ಕಟ್ಟಡ ಎಂದು ಹೇಳಿದ್ದರು. ಇದೀಗ ಹೇಗೆ ಒಡೆಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಹಾಲಿ ಕಟ್ಟಡ ಒಡೆಯಬಾರದು. ನೆಲಸಮ ಮಾಡಿದರೆ ಅದಕ್ಕೆ ಡಿ.ಸಿ ಅವರೇ ಹೊಣೆ, ಮುಂದೆ ಏನಾಗುತ್ತದೆ ಎಂಬುದನ್ನು ಆಮೇಲೆ ಹೇಳುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದ ಬಳಿ ಹಣವಿಲ್ಲ ಎನ್ನುತ್ತಾರೆ. ಆದರೆ, ಸುಸ್ಥಿಯಲ್ಲಿರುವ ಕಟ್ಟಡ ಕೆಡವಿ ಹೊಸದಾಗಿ ನಿರ್ಮಿಸಲು ಹಣ ಎಲ್ಲಿಂದ ಬರುತ್ತದೆ? ಸಾರ್ವಜನಿಕ ಹಣ ಪೋಲು ಮಾಡಲು ಬಿಡುವುದಿಲ್ಲ. ಕೆಟ್ಟಡ ನೆಲಸಮ ಮಾಡುವ ಮುನ್ನ ಶಾಸಕರು ಹಾಗೂ ಸಂಸದರ ಜತೆ ಚರ್ಚಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.