
ಹಾಸನ: ನಗರದ ಡೈರಿ ವೃತ್ತದಿಂದ ಕಾಟಿಹಳ್ಳಿ ವೃತ್ತದವರೆಗಿನ ರಸ್ತೆ ಪಕ್ಕದ ಗೂಡಂಗಡಿಗಳನ್ನು ಮಹಾನಗರಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ಗುರುವಾರ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ದಿಢೀರ್ ಕಾರ್ಯಚರಣೆ ಆರಂಭಿಸಿದ್ದರಿಂದ, ಗೂಡಂಗಡಿಗಳ ವ್ಯಾಪಾರಿಗಳು– ಪಾಲಿಕೆ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.
ರಸ್ತೆಯ ಎರಡು ಬದಿಯಲ್ಲೂ ಪಾದಚಾರಿ ಮಾರ್ಗ, ರಸ್ತೆ ಅತಿಕ್ರಮಣ ಮಾಡಿ ನಿರ್ಮಿಸಲಾಗಿದ್ದ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.
‘ಏಕಾಏಕಿ ತೆರವು ಕಾರ್ಯಚರಣೆ ಮಾಡಲಾಗಿದೆ’ ಎಂದು ಕೆಲ ಗೂಡಂಗಡಿ ಮಾಲೀಕರು ದೂರಿದರು. ‘ಜೀವನೋಪಾಯಕ್ಕೆ ಇದ್ದ ಅಂಗಡಿಗಳು ಇಲ್ಲದಾಗಿದೆ. ಕುಟುಂಬ ನಿರ್ವಹಣೆ ಕಷ್ಟವಾಗಲಿದೆ’ ಎಂದು ಕೆಲ ಮಾಲೀಕರು ನೋವು ತೋಡಿಕೊಂಡರು.
‘ಅತಿಕ್ರಮಣ ತೆರವು ಹೆಸರಿನಲ್ಲಿ ಬಡವರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ’ ಎಂದು ಅಸಮಾಧಾನ ತೋಡಿಕೊಂಡ ಗೂಡಂಗಡಿ ಮಾಲೀಕರು, ‘ಜೀವನೋಪಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಕಾರ್ಯಾಚರಣೆ ಮಾಡಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ ಹಾಗೂ ಎಂಜಿನಿಯರ್ ಕವಿತಾ, ‘ನಗರದ ಸುಧಾರಣೆ ಮತ್ತು ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.