ADVERTISEMENT

ಜಗತ್ತಿನ ಮೊದಲ ಕೈಗಾರಿಕೆ ಕುಂಬಾರಿಕೆ: ಶಂಕರೇಗೌಡ

ಸಂತ ಕವಿ ಸರ್ವಜ್ಞ ಜಯಂತಿಯಲ್ಲಿ ಉಪನ್ಯಾಸ ನೀಡಿದ ಶಂಕರೇಗೌಡ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 4:22 IST
Last Updated 21 ಫೆಬ್ರುವರಿ 2026, 4:22 IST
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ಮಾತನಾಡಿದರು.
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ಮಾತನಾಡಿದರು.   

ಹಾಸನ: ಜಗತ್ತಿನಲ್ಲಿ ಮೊಟ್ಟಮೊದಲ ಕೈಗಾರಿಕೆ ತೆರೆದಿದ್ದು ಕುಂಬಾರಿಕೆ. ಮೊದಲ ವಿಜ್ಞಾನಿಗಳು ಕುಂಬಾರರು ಎಂದು ಹೆಬ್ಬಾಲೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ಶಂಕರೇಗೌಡ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ‌ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹರಪ್ಪನ್ ನಾಗರಿಕತೆ, ಗ್ರೀಕ್‌ ನಾಗರಿಕತೆ ಸೇರಿದಂತೆ ಪ್ರಾಚೀನ ನಾಗರಿಕತೆಯಲ್ಲಿ ಬಳಕೆಯಾಗಿರುವುದು ಮಡಿಕೆಯೇ. ಆದ್ದರಿಂದ ಜಗತ್ತಿನ ಮೊದಲ ಕೈಗಾರಿಕೆ ಕುಂಬಾರಿಕೆ ಎಂದು ಹೇಳಬಹುದು ಎಂದರು.

ADVERTISEMENT

ಮನುಕುಲ, ಸಮಾಜವನ್ನು ತಿದ್ದಿ ತೀಡಿದ ಒಬ್ಬ ಮಹಾನ್ ದಾರ್ಶನಿಕ ಸಂತಕವಿ ಸರ್ವಜ್ಞ. ಅವರು ಕೇವಲ ವ್ಯಕ್ತಿಯಲ್ಲ ಸರ್ವಜ್ಞಾನಿ. ಮನುಕುಲದ ಎಲ್ಲ ವರ್ಗಕ್ಕಾಗಿ ಕೆಲಸ ಮಾಡಿದ್ದಾರೆ. ಆದರೆ ಇಂದು ಅವರನ್ನು ಒಂದು ವರ್ಗಕ್ಕೆ ಸೀಮಿತವಾಗಿಸಿರುವುದು ಶೋಷಣೆಯೇ ಸರಿ. ಸರ್ವಜ್ಞರ ವಚನಗಳನ್ನು ಆಲಿಸಿ, ಅನುಸರಿಸುವವನು ಸಮಾಜದಲ್ಲಿ ಧಾರ್ಮಿಕನಾಗಿ, ಸಜ್ಜನನಾಗಿ ರೂಪುಗೊಳ್ಳುತ್ತಾನೆ ಎಂದರು.

ಉದ್ಘಾಟಿಸಿದ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಸಂತ ಕವಿ ಸರ್ವಜ್ಞರನ್ನು ನೆನಪು ಮಾಡಿಕೊಳ್ಳುವುದೇ ಹೆಮ್ಮೆಯ ವಿಷಯ. ಅಂತಹ ಮಹಾನ್ ವ್ಯಕ್ತಿತ್ವವನ್ನು ಸ್ಮರಿಸುತ್ತಿರುವ ನಾವೇ ಧನ್ಯರು ಎಂದು ಬಣ್ಣಿಸಿದರು.

ಸರ್ವಜ್ಞ ಅವರ ಜೀವನ ಯಾನದಲ್ಲಿ ಅನೇಕ ತ್ರಿಪದಿಗಳನ್ನು ಬರೆದಿದ್ದು, ಸುಮಾರು ಮೂರು ಸಾವಿರಕ್ಕೂ ಹೆಚ್ಚು ತ್ರಿಪದಿಗಳ ಮೂಲಕ ಸರ್ವಜ್ಞ ಅವರು ಸಮಾಜವನ್ನೇ ಒಂದು ವಿಶ್ವವಿದ್ಯಾನಿಲಯದಂತೆ ಕಂಡು ಜೀವನಕ್ಕೆ ಆಧಾರವಾಗುವ ಸಂದೇಶವನ್ನು ಜನರಿಗೆ ನೀಡಿದ್ದಾರೆ ಎಂದರು.

ಸಂತ ಕವಿಯಾದ ಅವರು ವಿಶೇಷವಾಗಿ ಸಮಾಜದ ಮನೋಶಾಸ್ತ್ರಜ್ಞರ ರೀತಿ ತಮ್ಮ ತ್ರಿಪದಿಗಳಲ್ಲಿ ಜನರ ಒಳಗಿನ ಮತ್ತು ಹೊರಗಿನ ಭಾವನೆಯನ್ನು ಸರ್ವರಿಗೂ ಅರ್ಥವಾಗುವ ರೀತಿಯಲ್ಲಿ ತ್ರಿಪದಿಗಳ ಮೂಲಕ ಪರಿಚಯಿಸಿದ್ದಾರೆ ಎಂದರು.

ವಿದ್ಯೆ ಕಲಿಸದ ತಂದೆ, ಬುದ್ಧಿ ಹೇಳದ ಗುರು, ಬಿದ್ದಿರಲು ಬಂದು ನೋಡದ ತಾಯಿಯು ಶುದ್ಧ ವೈರಿಗಳು" ಎಂಬುದು ಪ್ರಸಿದ್ಧ ತ್ರಿಪದಿ. ತಪ್ಪು ಮಾಡಿದಾಗ ತಿದ್ದಿ ಸರಿಯಾದ ಮಾರ್ಗ ತೋರದ ಗುರು, ಶಿಷ್ಯನಿಗೆ ಶತ್ರುವಿಗೆ ಸಮಾನವೆಂದು ಈ ಕವಿವಾಣಿ ಅರ್ಥೈಸುತ್ತದೆ. ಅರಿವು ಮೂಡಿಸದ ಗುರು ಸಮಾಜಕ್ಕೆ ಹೊರೆಯಾಗುತ್ತಾನೆ. ಇದೇ ರೀತಿ ಜಾರಿಗೆ ಅರ್ಥವಾಗುವಂತಹ ಮತ್ತು ದಾರಿದೀಪ ಆಗುವಂತಹ ತ್ರಿಪದಿಗಳನ್ನು ಸರ್ವಜ್ಞ ನೀಡಿದ್ದಾರೆ. ಈ ಮೂಲಕ ತಮ್ಮದೇ ರೀತಿಯಲ್ಲಿ ಸಮಾಜ ತಿದ್ದುವ ಕೆಲಸದಲ್ಲಿ ಸರ್ವಜ್ಞ ಸರ್ವ ಶ್ರೇಷ್ಠರಾಗಿ ಉಳಿದಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್. ಮಲ್ಲೇಶ್‌ಗೌಡ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಬಾಬು, ಕುಂಬಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ವಿ ಕೃಷ್ಣಪ್ಪ, ಗೌರವಾಧ್ಯಕ್ಷ ಎಂ.ಬಿ. ರಂಗಶೆಟ್ಟಿ, ಜಿಲ್ಲಾ ಪ್ರಜಾಪತಿ ಸಮಾಜದ ಅಧ್ಯಕ್ಷ ರಘುರಾಮ್ ಪ್ರಜಾಪತಿ, ಕುಂಬಾರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಆರ್. ನಟರಾಜ್, ಗೌರವಾಧ್ಯಕ್ಷ ಹಾಸನ ಶಂಕರ್, ಖಜಾಂಚಿ ಪ್ರಕಾಶ್, ದೊರೆಸ್ವಾಮಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.