ADVERTISEMENT

ಹಾಸನಾಂಬ ಉತ್ಸವ: ದೇವಿ ದರ್ಶನ ಪಡೆದ ಮೂರೂವರೆ ಲಕ್ಷ ಜನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 1:59 IST
Last Updated 13 ಅಕ್ಟೋಬರ್ 2025, 1:59 IST
ಹಾಸನಾಂಬ ದೇವಿಗೆ ಭಾನುವಾರ ಮಾಡಿದ್ದ ಅಲಂಕಾರ.
ಹಾಸನಾಂಬ ದೇವಿಗೆ ಭಾನುವಾರ ಮಾಡಿದ್ದ ಅಲಂಕಾರ.   

ಹಾಸನ: ವಾರಾಂತ್ಯದ ರಜೆ ಇರುವುದರಿಂದ ಭಾನುವಾರ ಹಾಸನಾಂಬ ದೇವಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬಂದಿತ್ತು. ಸಾರ್ವಜನಿಕ ದರ್ಶನ ಆರಂಭವಾಗಿ ಮೂರು ದಿನ ಕಳೆದಿದ್ದು, ಇದುವರೆಗೆ ಮೂರೂವರೆ ಲಕ್ಷ ಜನರು ದೇವಿಯ ದರ್ಶನ ಪಡೆದಿದ್ದಾರೆ.

ಶನಿವಾರ ಸಂಜೆ 7ಕ್ಕೆ ದರ್ಶನ ಸ್ಥಗಿತ ಮಾಡಲಾಗಿತ್ತು. ಭಾನುವಾರ ಬೆಳಿಗ್ಗೆ 5ಗಂಟೆಗೆ ದರ್ಶನ ಆರಂಭಿಸಲಾಯಿತು. ಶನಿವಾರ ಮಧ್ಯರಾತ್ರಿಯಿಂದಲೇ ಸಂತೇಪೇಟೆ ಸರ್ಕಲ್ ರಸ್ತೆ ಉದ್ದಕ್ಕೂ ಸಹಸ್ರಾರು ಭಕ್ತರು ಸಾಲಿನಲ್ಲಿ ನಿಂತಿದ್ದರು. ಬೆಳಿಗ್ಗೆ 8 ಗಂಟೆಗೆ ಸರಾಗವಾಗಿ ಸಾಲು ಕರಗಿತು. ಮಧ್ಯಾಹ್ನ 12 ಗಂಟೆಯ ವೇಳೆಗೆ ಭಕ್ತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಧರ್ಮದರ್ಶನದ ಸಾಲುಗಳು ತುಂಬಿದ್ದವು. ಆದರೂ ಕೆಲ ತಾಸಿನಲ್ಲೇ ಎಲ್ಲ ಭಕ್ತರು ದರ್ಶನ ಪಡೆದರು.

₹ 1 ಸಾವಿರ ಹಾಗೂ ₹ 300 ದರದ ಟಿಕೆಟ್‌ ಖರೀದಿಸಿ ಬರುವವರ ಸಂಖ್ಯೆಯೂ ಹೆಚ್ಚಿದ್ದು, ಭಾನುವಾರ ಬೆಳಿಗ್ಗೆ 8ರ ವೇಳೆಗೆ ಪಾಸ್ ಹಾಗೂ ಲಡ್ಡು ಮಾರಾಟದಿಂದ ದಾಖಲೆಯ 2.24 ಕೋಟಿ ಹಣ ಸಂಗ್ರಹವಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿ ಹೇಮಲತಾ ತಿಳಿಸಿದ್ದಾರೆ.

ADVERTISEMENT

ಧರ್ಮದರ್ಶನ ಸೇರಿದಂತೆ ಎಲ್ಲ ಸಾಲುಗಳಲ್ಲಿ ಭಕ್ತರು ಸರಾಗವಾಗಿ‌ ಸಾಗಿ ದರ್ಶನ ಪಡೆದಿದ್ದಾರೆ. ಈ ನಡುವೆ ಕೆಲ ವೃದ್ಧರು ಮತ್ತು ಮಕ್ಕಳು ಕುಂಟುಂಬದಿಂದ ಬೇರ್ಪಟ್ಟ ಘಟನೆಯೂ ನಡೆದಿದ್ದು, ದೇವಸ್ಥಾನದ ಆಡಳಿತ ಮಂಡಳಿಯ ತುರ್ತು ಕರೆಯ ಬಳಿಕ ಕುಟುಂಬ ಸದಸ್ಯರನ್ನು ಸೇರಿದ್ದಾರೆ.

ಸುಗಮ ದರ್ಶನಕ್ಕೆ ವ್ಯವಸ್ಥೆ

ಶನಿವಾರ ರಾತ್ರಿ 9 ಗಂಟೆಯ ವೇಳೆಗೆ 1.2 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದು, ಜಾತ್ರಾ ಮಹೋತ್ಸವದ ವ್ಯವಸ್ಥೆಗಳು ಯೋಜನೆಯಂತೆ ಸುಗಮವಾಗಿ ನಡೆಯುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಶ್ಲಾಘಿಸಿದ್ದಾರೆ.

₹ 1ಸಾವಿರ ಟಿಕೆಟ್ ದರ್ಶನವು 10 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ, ₹ 300 ಟಿಕೆಟ್ ದರ್ಶನವು 10 ರಿಂದ 30 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತಿದೆ. ಧರ್ಮ ದರ್ಶನವು 30 ನಿಮಿಷಗಳಿಂದ ಗರಿಷ್ಠ 2 ಗಂಟೆ 30 ನಿಮಿಷಗಳಲ್ಲಿ ಆಗುತ್ತಿದ್ದು, ಎಲ್ಲ ವ್ಯವಸ್ಥೆಗಳು ಸುಸೂತ್ರವಾಗಿ ಸಾಗಿವೆ. ಗಣ್ಯರ ದರ್ಶನವೂ ಗೌರವಯುತವಾಗಿ ಸಾಗುತ್ತಿದೆ ಎಂದು ತಿಳಿಸಿದ್ದಾರೆ.

ಶನಿವಾರ ರಾತ್ರಿ ಧರ್ಮ ದರ್ಶನದ ಸಾಲು ಭರ್ತಿಯಾಗಿದ್ದು, ಮಧ್ಯರಾತ್ರಿ 12 ಗಂಟೆಗೆ ಗರಿಷ್ಠ ಜನಸಂದಣಿ ಇತ್ತು. ಅಕ್ಟೋಬರ್ 18 ರಿಂದ 22 ರವರೆಗೆ ಅತೀ ಹೆಚ್ಚು ಜನಸಂದಣಿ ಇರುವುದರಿಂದ, ಭಕ್ತರು ಸಾಧ್ಯವಾದರೆ ಅಕ್ಟೋಬರ್ 18ರ ಒಳಗೆಯೇ ಬಂದು ದರ್ಶನ ಪಡೆಯುವ ಮೂಲಕ ಸಹಕರಿಸಬೇಕು ಎಂದು ಕೃಷ್ಣ ಬೈರೇಗೌಡ ಕೋರಿದ್ದಾರೆ.

ಸೇವೆ ಶ್ಲಾಘನೆ

ಹಾಸನಾಂಬ ದರ್ಶನೋತ್ಸವದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸ್ಕೌಟ್ಸ್ ಮತ್ತು ಗೈಡ್‌ ಮತ್ತು ಎನ್‌ಸಿಸಿ ಶಿಬಿರಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದಾರೆ. ದರ್ಶನಕ್ಕೆ ಬರುವ ಸಹಸ್ರಾರು ಮಂದಿ ಭಕ್ತರಿಗೆ ಕುಡಿಯಲು ನೀರು, ಮಜ್ಜಿಗೆ ಒದಗಿಸುವುದು, ವೃದ್ದರು ಮತ್ತು ಅಂಗವಿಕಲರು ದೇವಿಯ ದರ್ಶನ ಪಡೆಯಲು ಸಹಾಯ ಮಾಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

700ಕ್ಕೂ ಹೆಚ್ಚು ಸ್ಕೌಟ್ಸ್ ಮತ್ತು ಗೈಡ್‌, ರೋವರ್ಸ್ ಮತ್ತು ರೆಂಜರ್ಸ್ ಶಿಬಿರಾರ್ಥಿಗಳು ಜಾತ್ರಾ ಮಹೋತ್ಸವದ ಅಂಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸ್ಕೌಟ್ ಮತ್ತು ಗೈಡ್‌ ತಂಡದ ನಾಯಕ ಆರ್.ಜೆ. ಗಿರೀಶ್ ತಿಳಿಸಿದ್ದಾರೆ.

ನಗರ ಸೇರಿದಂತೆ ಜಾತ್ರಾ ಮಹೋತ್ಸವ ನಡೆಯುವ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ನಗರಪಾಲಿಕೆಯ ಪೌರಕಾರ್ಮಿಕರ ಪಾತ್ರವೂ ಮಹತ್ತರವಾಗಿದೆ. ದೇವಾಲಯದ ಸುತ್ತ ಹಾಗೂ ಸಾವಿರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಸಾಗುವ ಕಡೆಗಳಲ್ಲಿ ಸ್ವಚ್ಛತೆ ಅತಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಸಿಸಿಟಿವಿ ಕ್ಯಾಮೆರಾ ಕಣ್ಗಾಗಲು

ದೇಗುಲದ ಸುತ್ತಲೂ ಅಳವಡಿಸಿರುವ 280 ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿದ್ದು, ಹಾಸನಾಂಬ ದೇವಾಲಯದ ಎಡಭಾಗದಲ್ಲಿ ತೆರೆಯಲಾಗಿರುವ ನಿಯಂತ್ರಣ ಕೊಠಡಿಯಲ್ಲಿ ಕುಳಿತು ಎಲ್ಲವನ್ನೂ ವೀಕ್ಷಿಸಲಾಗುತ್ತಿದೆ.

ಇಲ್ಲಿ ಭಕ್ತರು, ಅಧಿಕಾರಿ, ಸಿಬ್ಬಂದಿ ಸೇರಿದಂತೆ ಎಲ್ಲರ ಚಲನವಲನ ಗಮನಿಸಲಾಗುತ್ತಿದೆ. ಯಾವ ಸಾಲಿನಲ್ಲಿ ಹೆಚ್ಚು ಜನ ಸೇರಿದ್ದಾರೆ? ಎಲ್ಲಿ ಸಾಲುಗಳು ಕಡಿಮೆ ಇದೆ? ನಿರ್ದಿಷ್ಟ ಗೇಟ್‌ಗಳಲ್ಲಿ ಬೇಕಾಬಿಟ್ಟಿ ಜನರು ಸಾಗುತ್ತಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ಪಡೆಯುತ್ತಿದ್ದಾರೆ. ಭಕ್ತರ ಸಾಲು ಸುಗಮವಾಗಿ ಸಾಗಲು ಕಾಲಕಾಲಕ್ಕೆ ನಿರ್ದೇಶನ ನೀಡುತ್ತಿದ್ದಾರೆ.

ಹಾಸನಾಂಬ ಜಾತ್ರೆಯ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳು ಭಾನುವಾರ ಬೆಳಿಗ್ಗೆ ದೇಗುಲದ ಎದುರು ಸೇರಿದ್ದರು.

ಭಾನುವಾರ ಹಾಸನಾಂಬ ದೇವಿಯ ದರ್ಶನಕ್ಕೆ ಸರದಿಯಲ್ಲಿ ಸಾಗಿದ ಅಪಾರ ಸಂಖ್ಯೆಯ ಜನರು.

ಸ್ಕೌಟ್ಸ್‌ ಮತ್ತು ಗೈಡ್ ಶಿಬಿರಾರ್ಥಿಗಳು ನೀರಿನ ಬಾಟಲಿಗಳನ್ನು ಎತ್ತಿಟ್ಟರು.
ಸರದಿ ಸಾಲಿನಲ್ಲಿ ಬರುವ ಭಕ್ತರ ಮನರಂಜನೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತಿದೆ.
ಮಧ್ಯಾಹ್ನ ನೈವೇದ್ಯಕ್ಕಾಗಿ ಗರ್ಭಗುಡಿಯ ಬಾಗಿಲು ಬಂದ್‌ ಮಾಡಿದ್ದರಿಂದ ಭಕ್ತಾದಿಗಳು ಬ್ಯಾರಿಕೇಡ್‌ ಮಧ್ಯದಲ್ಲಿಯೇ ಕುಳಿತಿದ್ದರು.
ಹಾಸನಾಂಬ ದೇಗುಲದ ಆವರಣದಲ್ಲಿ ಆರಂಭಿಸಿರುವ ನಿಯಂತ್ರಣ ಕೊಠಡಿಯಲ್ಲಿ ವ್ಯವಸ್ಥೆಯನ್ನು ಪರಿಶೀಲಿಸಲಾಗುತ್ತಿದೆ.
ದರ್ಶನಕ್ಕೆ ಬರುವ ಜನರ ಸಂಖ್ಯೆ ದಾಖಲೆ ಮಟ್ಟ ತಲುಪಿದೆ. ಹಾಗಾಗಿ ಬೆಳಗಿನ 2 ಗಂಟೆಯಿಂದ 5 ಗಂಟೆಯವರೆಗೆ ದೇಗುಲವನ್ನು ಮುಚ್ಚದಿರಲು ನಿರ್ಧರಿಸಿದ್ದೇವೆ. ಎಲ್ಲರೂ ವಿಳಂಬವಿಲ್ಲದೆ ದೇವಿಯ ದರ್ಶನ ಪಡೆಯಬಹುದು.
ಕೃಷ್ಣ ಬೈರೇಗೌಡ ಜಿಲ್ಲಾ ಉಸ್ತುವಾರಿ ಸಚಿವ

ಎರಡೇ ದಿನದಲ್ಲಿ ₹2.25 ಕೋಟಿ ಆದಾಯ

ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು ಶುರುವಾದ ಎರಡೇ ದಿನದಲ್ಲಿ ದೇವಾಲಯಕ್ಕೆ ₹2.25 ಕೋಟಿ ಆದಾಯ ಬಂದಿದೆ. ಗುರುವಾರ ಹಾಸನಾಂಬ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ಶುಕ್ರವಾರದಿಂದ ಸಾರ್ವಜನಿಕ ದರ್ಶನ ಪ್ರಾರಂಭವಾಗಿದೆ. ಭಾನುವಾರ ಬೆಳಿಗ್ಗೆ 8 ಗಂಟೆಯವರೆಗೆ ₹ 300 ದರದ 27759 ಟಿಕೆಟ್‌ಗಳು ಮಾರಾಟವಾಗಿವೆ. ಅದರಲ್ಲಿ ಆನ್‌ಲೈನ್‌ನಲ್ಲಿ 4499 ಹಾಗೂ ನೇರ ಖರೀದಿಯಲ್ಲಿ 23260 ಟಿಕೆಟ್‌ಗಳು ಮಾರಾಟವಾಗಿವೆ. ₹ 1ಸಾವಿರ ದರದ 12396 ಮಾರಾಟವಾಗಿವೆ. ಇದರಲ್ಲಿ ಆನ್‌ಲೈನ್‌ನಲ್ಲಿ 3912 ಹಾಗೂ ನೇರ ಖರೀದಿಗಳು 8484 ಆಗಿವೆ. 17337 ಲಡ್ಡು ಪ್ರಸಾದ ಮಾರಾಟವಾಗಿದೆ. ₹ 300 ದರದ ಟಿಕೆಟ್‌ಗಳಿಂದ ಒಟ್ಟು ₹ 8327700 ₹ 1ಸಾವಿರ ದರದ ಟಿಕೆಟ್‌ಗಳಿಂದ ₹ 12396000 ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ₹ 1733700 ಸೇರಿ ಒಟ್ಟು ₹ 22457400 ಸಂಗ್ರಹವಾಗಿದೆ.

₹5 ಲಕ್ಷ ನೀಡಿ 1200 ಟಿಕೆಟ್‌ ಖರೀದಿಸಿದ ಸಂಸದ ಶ್ರೇಯಸ್‌

ಜಿಲ್ಲಾಡಳಿತಕ್ಕೆ ತೊಂದರೆ ಆಗದಂತೆ ಮತ್ತು ಕಾರ್ಯಕರ್ತರಿಗೂ ಬೇಸರ ಆಗದಂತೆ ನೋಡಿಕೊಂಡಿರುವ ಸಂಸದ ಶ್ರೇಯಸ್ ಪಟೇಲ್‌ ₹ 5 ಲಕ್ಷ ನೀಡಿ 1200 ಟಿಕೆಟ್‌ ಖರೀದಿಸಿದ್ದಾರೆ. ಕಠಿಣ ಪಾಸ್‌ ನಿಯಮದಿಂದಾಗಿ ಗೋಲ್ಡ್‌ ಪಾಸ್‌ಗಾಗಿ ಬೇಡಿಕೆ ಹೆಚ್ಚಾಗಿದ್ದು ಇದರಿಂದಾಗಿ ಸಂಸದ ಶ್ರೇಯಸ್‌ ಅವರೇ ಹಣ ಪಾವತಿಸಿ 1200 ಟಿಕೆಟ್‌ಗಳನ್ನು ಖರೀದಿಸಿ ತಮ್ಮ ಬೆಂಬಲಿಗರಿಗೆ ವಿತರಿಸಿದ್ದಾರೆ. ಈ ಬಾರಿ ಹಾಸನಾಂಬ ದರ್ಶನ ಮಹೋತ್ಸವಕ್ಕೆ ಪಾಸ್‌ ವಿತರಣೆಯಲ್ಲಿ ಜಿಲ್ಲಾಡಳಿತ ಕಠಿಣ ನಿಯಮ ಜಾರಿಗೆ ತಂದಿದೆ. ಭಾನುವಾರ ಭಕ್ತರ ಸಂಖ್ಯೆ ಏರಿಕೆ ಕಂಡಿದ್ದು ಗೋಲ್ಡ್‌ ಪಾಸ್‌ಗಳಿಗಾಗಿ ಸಂಸದರ ಮೇಲೆ ಒತ್ತಡ ಬಂದಿತ್ತು. ಸಚಿವ ಕೃಷ್ಣ ಬೈರೇಗೌಡರೂ ತಮ್ಮ ಕ್ಷೇತ್ರದ ಜನರಿಗಾಗಿ ₹ 5 ಲಕ್ಷ ಪಾವತಿಸಿ ಟಿಕೆಟ್‌ ಖರೀದಿಸಿದ್ದರು. ಅದೇ ಮಾರ್ಗವನ್ನು ಸಂಸದರು ಅನುಸರಿಸಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ಬನ್ನಿ: ಎಚ್‌.ಕೆ.ಮಹೇಶ್‌

ಜಿಲ್ಲೆಯ ಅಧಿದೇವತೆ ಹಾಸನಾಂಬ ಹಾಗೂ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಆರಂಭವಾಗಿದೆ. ರಾಜ್ಯ ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಜಾತ್ರಾ ಮಹೋತ್ಸವಕ್ಕೆ ಬರುತ್ತಿದ್ದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಿಯ ದರ್ಶನ ಪಡೆಯಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್‌.ಕೆ.ಮಹೇಶ್ ಮನವಿ ಮಾಡಿದ್ದಾರೆ. ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಗೂ ಪವಾಡವನ್ನು ಹೊಂದಿರುವ ಹಾಸನಾಂಬೆಗೆ ನಾಡಿನಾದ್ಯಂತ ಭಕ್ತರಿದ್ದಾರೆ. ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವದ ವ್ಯವಸ್ಥೆಗಳು ಅಚ್ಚುಕಟ್ಟಾಗಿದ್ದು ಭಕ್ತರಿಗೆ ಸುಗಮ ದರ್ಶನ ಸಿಗುತ್ತಿದೆ ಎಂದು ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಕೈಗೊಂಡಿರುವ ಹಲವು ವಿನೂತನ ಕ್ರಮಗಳಿಂದಾಗಿ ಭಕ್ತಾದಿಗಳು ಸಂತಸದಿಂದ ದೇವಿಯ ದರ್ಶನ ಮಾಡುತ್ತಿದ್ದು ಜಿಲ್ಲೆಯ ಜನರ ಪರವಾಗಿ ಸಚಿವರನ್ನು ಅಭಿನಂದಿಸುವುದಾಗಿ ಹೇಳಿದ್ದಾರೆ. ಅ.15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ದೇವಿಯ ದರ್ಶನ ಪಡೆಯಲಿದ್ದಾರೆ. ನಾಡಿನ ವಿವಿಧೆಡೆಯಿಂದ ಬರುತ್ತಿರುವ ಭಕ್ತರು ಸಂತಸ ಸಂಭ್ರಮದಿಂದ ದೇವಿಯ ದರ್ಶನ ಪಡೆದು ಕೃತಾರ್ಥರಾಗಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.