ADVERTISEMENT

ಕನ್ನಡ ಪರೀಕ್ಷೆಗೆ ವಿದ್ಯಾರ್ಥಿಗಳ ಉತ್ಸಾಹ

ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಮೊದಲ ದಿನ 208 ಮಂದಿ ಗೈರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 5:14 IST
Last Updated 1 ಮಾರ್ಚ್ 2026, 5:14 IST
ಹಾಸನದ ಗಂಧದಕೋಠಿ ಸರ್ಕಾರಿ ಪದವಿಪೂರ್ವ (ವಿಭಜಿತ) ಕಾಲೇಜಿಗೆ ಭೇಟಿ ನೀಡಿದ ಸಂಸದ ಶ್ರೇಯಸ್ ಪಟೇಲ್‌, ವಿದ್ಯಾರ್ಥಿಗಳನ್ನು ವಿಚಾರಿಸಿದರು 
ಹಾಸನದ ಗಂಧದಕೋಠಿ ಸರ್ಕಾರಿ ಪದವಿಪೂರ್ವ (ವಿಭಜಿತ) ಕಾಲೇಜಿಗೆ ಭೇಟಿ ನೀಡಿದ ಸಂಸದ ಶ್ರೇಯಸ್ ಪಟೇಲ್‌, ವಿದ್ಯಾರ್ಥಿಗಳನ್ನು ವಿಚಾರಿಸಿದರು    

ಹಾಸನ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಜಿಲ್ಲೆಯಲ್ಲಿ ಶುಕ್ರವಾರ ಸುಗಮವಾಗಿ ಆರಂಭಗೊಂಡವು. ಮೊದಲ ದಿನ ನಡೆದ ಕನ್ನಡ ವಿಷಯದ ಪರೀಕ್ಷೆಗೆ 208 ವಿದ್ಯಾರ್ಥಿಗಳು ಗೈರಾಗಿದ್ದರು.

ಜಿಲ್ಲೆಯಾದ್ಯಂತ ನೋಂದಾಯಿಸಿಕೊಂಡಿದ್ದ 13,740 ವಿದ್ಯಾರ್ಥಿಗಳ ಪೈಕಿ 13,532 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಜಿಲ್ಲೆಯಾದ್ಯಂತ ಒಟ್ಟು 33 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಎಲ್ಲೆಡೆ ಸೂಕ್ತ ಭದ್ರತೆ, ಮೂಲಸೌಕರ್ಯ ಹಾಗೂ ಮೇಲ್ವಿಚಾರಣೆಯ ವ್ಯವಸ್ಥೆ ಕಲ್ಪಿಸಲಾಗಿತ್ತು.

ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿ ಘೋಷಿಸಿದ್ದು, ಪ್ರತಿ ಕೇಂದ್ರದಲ್ಲೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪರೀಕ್ಷಾ ಅವಧಿಯಲ್ಲಿ ಕೇಂದ್ರಗಳ ಸಮೀಪದ ಜೆರಾಕ್ಸ್ ಹಾಗೂ ಸೈಬರ್ ಕೇಂದ್ರಗಳನ್ನು ಮುಚ್ಚುವಂತೆ ಆದೇಶಿಸಲಾಗಿತ್ತು. ಜಾಗೃತ ದಳ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡಗಳು ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದವು.

ADVERTISEMENT

ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಿಂದ ತಹಶೀಲ್ದಾರರು ಹಾಗೂ ಪ್ರಾಂಶುಪಾಲರನ್ನು ಒಳಗೊಂಡ ಸಮಿತಿಯ ಮೇಲ್ವಿಚಾರಣೆಯಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಹೊಂದಿದ ವಾಹನಗಳ ಮೂಲಕ 10 ಮಾರ್ಗಗಳಲ್ಲಿ ಸುರಕ್ಷಿತವಾಗಿ ತಲುಪಿಸಲಾಯಿತು. ಅಕ್ರಮ ತಡೆಯುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಶನಿವಾರ ಕನ್ನಡ ಭಾಷೆಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವ ವಿಶ್ವಾಸವಿದೆ. ಸೋಮವಾರ ನಡೆಯುವ ಇಂಗ್ಲಿಷ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೇಗಿರುತ್ತದೆ ಎಂಬುದನ್ನು ಪರಾಮರ್ಶಿಸಿದರೆ, ಜಿಲ್ಲೆಗೆ ಯಾವ ರೀತಿಯ ಫಲಿತಾಂಶ ಬರಲಿದೆ ಎಂಬುದನ್ನು ಅಂದಾಜಿಸಬಹುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಕನ್ನಡ ಭಾಷಾ ಪರೀಕ್ಷೆಗೆ ವಿದ್ಯಾರ್ಥಿಗಳು ಹೆಚ್ಚು ಉತ್ಸಾಹದಿಂದ ಪಾಲ್ಗೊಂಡಿದ್ದು ಕಂಡುಬಂದಿತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೇರಿದಂತೆ ನಗರ ಭಾಗದ ವಿದ್ಯಾರ್ಥಿಗಳು ಬೆಳಿಗ್ಗೆ ಮುಂಚಿತವಾಗಿ ಪರೀಕ್ಷೆ ಕೇಂದ್ರಗಳಿಗೆ ಲವಲವಿಕೆಯಿಂದ ಹಾಜರಾದರು.

ಧೈರ್ಯ ತುಂಬಿದ ಸಂಸದ

ನಗರದ ಗಂಧದಕೋಠಿ ಬಾಲಕಿಯರ ವಿಭಜಿತ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಸಂಸದ ಶ್ರೇಯಸ್ ಪಟೇಲ್ ಪರೀಕ್ಷಾರ್ಥಿಗಳಿಗೆ ಶುಭ ಕೋರಿದರು. ಪರೀಕ್ಷಾ ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ ಅವರು ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬುದನ್ನು ವಿಚಾರಿಸಿದರು. ಭಯಕ್ಕೆ ಒಳಗಾಗದೇ ಧೈರ್ಯದಿಂದ ಎಲ್ಲ ಪ್ರಶ್ನೆಗಳನ್ನು ಗಮನವಿಟ್ಟು ಓದಿ ಉತ್ತರಿಸುವಂತೆ ಸಲಹೆ ನೀಡಿದ ಅವರು ಹೆಚ್ಚು ಅಂಕಗಳನ್ನು ಗಳಿಸಿ ಯಶಸ್ವಿಯಾಗಲಿ ಎಂದು ಆತ್ಮವಿಶ್ವಾಸ ತುಂಬಿದರು. ಇದೇ ವೇಳೆ ಪರೀಕ್ಷಾ ಕೇಂದ್ರಕ್ಕೆ ನಿಯೋಜನೆಗೊಂಡಿದ್ದ ಆರೋಗ್ಯ ಸಹಾಯಕಿಯರೊಂದಿಗೆ ಚರ್ಚಿಸಿ ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಅಗತ್ಯವಿರುವ ಔಷಧಿಗಳ ಲಭ್ಯತೆ ಬಗ್ಗೆ ಪರಿಶೀಲಿಸಿದರು. ವಿದ್ಯಾರ್ಥಿನಿಯರಿಗೆ ಅಗತ್ಯವಿದ್ದರೆ ತಕ್ಷಣ ಸಹಾಯ ಮಾಡಲು ಗ್ಲುಕೋಸ್ ಪೌಡರ್ ಸೇರಿದಂತೆ ಆರೋಗ್ಯ ಸೌಲಭ್ಯಗಳನ್ನು ಸಿದ್ಧವಾಗಿ ಇರಿಸಿಕೊಳ್ಳುವಂತೆ ಸೂಚಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಾಧರ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದು ಪರೀಕ್ಷೆಯ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.