ADVERTISEMENT

ತಡೆಗೋಡೆ ಒಡೆದು ರೈತರಿಗೆ ದಾರಿ ಮಾಡಿಕೊಡಿ: ಜಿಲ್ಲಾಧಿಕಾರಿ ಲತಾಕುಮಾರಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 5:09 IST
Last Updated 6 ನವೆಂಬರ್ 2025, 5:09 IST
<div class="paragraphs"><p>ಹಾಸನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿದರು.</p><p><br></p></div>

ಹಾಸನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿದರು.


   

ಹಾಸನ: ವಿಮಾನ ನಿಲ್ದಾಣದ ಸುತ್ತ ಬದಲಿ ರಸ್ತೆ ವ್ಯವಸ್ಥೆ ಕಲ್ಪಿಸುವವರೆಗೆ, ರೈತರು ತಮ್ಮ ಜಮೀನುಗಳಿಗೆ ಹೋಗಿ ಬರಲು ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಕರ್ನಾಟಕ ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ADVERTISEMENT

ಬೂವನಹಳ್ಳಿ ಬಳಿ ನಿರ್ಮಿಸುತ್ತಿರುವ ವಿಮಾನ ನಿಲ್ದಾಣದಿಂದ ಸುತ್ತಲಿನ ಗ್ರಾಮಸ್ಥರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಇತ್ತಿಚೆಗೆ ತಮ್ಮ ಕಚೇರಿಯ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣ ಆವರಣದ ಗೋಡೆಯಿಂದ ಹೊರಗೆ ನಿರ್ದಿಷ್ಟ ಪ್ರಮಾಣದ ಬಫರ್ ವಲಯ ಇರಬೇಕು. ನಂತರ ಒಂದು ಸರ್ವಿಸ್ ರಸ್ತೆ ಇರಬೇಕು. ಈ ವ್ಯವಸ್ಥೆಯು ವಿಮಾನ ನಿಲ್ದಾಣ ಯೋಜನೆಯ ಒಂದು ಭಾಗವಾಗಿರಬೇಕು. ಆದರೆ ಹಾಸನ ವಿಮಾನ ನಿಲ್ದಾಣದ ವಿಚಾರದಲ್ಲಿ ಈ ನಿಯಮಗಳನ್ನು ಪಾಲನೆ ಮಾಡದೇ ಇರುವುದರಿಂದ ಸಮಸ್ಯೆ ಜಟಿಲಗೊಂಡಿದೆ ಎಂದು ಹೇಳಿದರು.

ಮುಂದಿನ ಸೋಮವಾರದ ಒಳಗಾಗಿ ಗ್ರಾಮಸ್ಥರು ಜಮೀನುಗಳಿಗೆ ಹೋಗಿ ಬರಲು ಮಾಡಿಕೊಡುವ ವ್ಯವಸ್ಥೆಯ ಉಸ್ತುವಾರಿಯನ್ನು ನೋಡಿಕೊಳ್ಳುವಂತೆ ಉಪ ವಿಭಾಗಾಧಿಕಾರಿ ಜಗದೀಶ್ ಅವರಿಗೆ ಸೂಚಿಸಿದರು.

ಹಾಸನದ ಉದ್ದೇಶಿತ ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಯಾವಾಗ ಆರಂಭವಾಯಿತೋ, ಅಲ್ಲಿಂದ ಇಲ್ಲಿಯ ತನಕ ಯಾವ ಯಾವ ಪ್ರಕ್ರಿಯೆಗಳು ನಡೆದಿವೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.

1966-67ನೇ ಸಾಲಿನಲ್ಲಿ ಹಾಸನ ಉಪವಿಭಾಗಾಧಿಕಾರಿ 167 ಎಕರೆ ಪ್ರದೇಶವನ್ನು ಹಾಗೂ 1996-97 ರಲ್ಲಿ ಕೆಐಎಡಿಬಿ ಮೈಸೂರು ವಿಭಾಗಾಧಿಕಾರಿಗಳು 302 ಎಕರೆ 36 ಗುಂಟೆ ಹಾಗೂ 2007ರಲ್ಲಿ 63 ಎಕರೆ ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭವಾಯಿತು. ಇದರಲ್ಲಿ 40 ಎಕರೆ ಸರ್ಕಾರಿ ಜಮೀನು ಕೂಡ ಇದ್ದುದರಿಂದ ಸ್ವಲ್ಪ ಗೊಂದಲ ಆಗಿದೆ ಎಂದು ಕೆಐಎಡಿಬಿ ಅಧಿಕಾರಿಗಳು ವಿವರಿಸಿದರು.

ವಿಮಾನ ನಿಲ್ದಾಣಕ್ಕೆ ಆವರಣ ಗೋಡೆ ನಿರ್ಮಿಸಲು 12 ಕಿ.ಮೀ. ಜಾಗ ಗುರುತಿಸಲಾಗಿದೆ. ಆದರೆ ಅಲ್ಲಲ್ಲಿ ಭೂ ಸ್ವಾಧೀನದ ಸಮಸ್ಯೆಗಳು ಇರುವುದರಿಂದ 6 ಕಿ.ಮೀ. ಉದ್ದ ಮಾತ್ರ ಗೋಡೆ ನಿರ್ಮಿಸಲಾಗಿದೆ ಎಂದು ಗುತ್ತಿಗೆದಾರರ ಪ್ರತಿನಿಧಿ ಮಾಹಿತಿ ನೀಡಿದರು.

ಲಕ್ಷ್ಮಿ ಸಾಗರದ ರೈತರ ಸ್ವಾಧೀನದಲ್ಲಿರುವ ಜಮೀನುಗಳನ್ನು, ಹಿಂದಿನ ತಹಶೀಲ್ದಾರರು ಸರ್ಕಾರಿ ಭೂಮಿ ಎಂದು ವರದಿ ನೀಡಿದ್ದು, ಆ ಭೂಮಿಯನ್ನು ವಶಪಡಿಸಿಕೊಳ್ಳಲು ಕೆಐಎಡಿಬಿ ಅಧಿಕಾರಿಗಳು ಪ್ರಯತ್ನಿಸಿದ್ದರು. ಆದರೆ ತಮ್ಮ ಸ್ವಾಧೀನದಲ್ಲಿರುವ ಭೂಮಿಗೆ ಪರಿಹಾರ ನೀಡದೆ ಗೋಡೆ ನಿರ್ಮಿಸಲು ಅವಕಾಶ ನೀಡುವುದಿಲ್ಲ ಎಂದು ರೈತರು ತಿಳಿಸಿದರು.

ತಮ್ಮ ಜಮೀನಿಗೆ ಹೋಗಿ ಬರಲು ಇದ್ದ ದಾರಿಯನ್ನು ಮುಚ್ಚಿದ್ದರಿಂದ ಆಗಿರುವ ಸಮಸ್ಯೆಗಳ ಬಗ್ಗೆ ದ್ಯಾವಲಪುರದ ರೈತರು ಹೇಳಿಕೊಂಡರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಮಂಜುನಾಥ್, ಹಾಸನ ತಹಶೀಲ್ದಾರ್ ಗೀತಾ, ಸಾಮಾಜಿಕ ಹೋರಾಟಗಾರ ಆರ್.ಪಿ. ವೆಂಕಟೇಶಮೂರ್ತಿ, ಬೂವನಹಳ್ಳಿ, ತೆಂಡಿಹಳ್ಳಿ, ಮೈಲನಹಳ್ಳಿ, ಲಕ್ಷ್ಮಿಸಾಗರ ಹಾಗೂ ದ್ಯಾವಲಾಪುರದ ರೈತರು ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.