
ನುಗ್ಗೇಹಳ್ಳಿ ಹೋಬಳಿಯ ಅತ್ತಿಹಳ್ಳಿ ಗ್ರಾಮದಲ್ಲಿ ಶ್ರೀ ಕಂಬದ ನರಸಿಂಹ ಸ್ವಾಮಿ, ಶ್ರೀ ದೊಡ್ಡಮ್ಮ ದೇವಿ, ಚಿಕ್ಕಮ್ಮ ದೇವಿ ಮತ್ತು ಶ್ರೀ ಭೈರವೇಶ್ವರ ದೇವರ ಅದ್ದೂರಿ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮಸ್ಥರಿಂದ ರಂಗ ಕುಣಿತ ನಡೆಯಿತು
ನುಗ್ಗೇಹಳ್ಳಿ: ಹೋಬಳಿಯ ಅತ್ತಿಹಳ್ಳಿ ಗ್ರಾಮದಲ್ಲಿ ಶ್ರೀ ಕಂಬದ ನರಸಿಂಹ ಸ್ವಾಮಿ, ಶ್ರೀ ದೊಡ್ಡಮ್ಮ ದೇವಿ, ಚಿಕ್ಕಮ್ಮ ದೇವಿ ಮತ್ತು ಶ್ರೀ ಭೈರವೇಶ್ವರ ದೇವರ ಅದ್ದೂರಿ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಸಂಪ್ರದಾಯದಂತೆ ಫೆ.21ರ ಶನಿವಾರದಿಂದ 28ರವರೆಗೆ ಗ್ರಾಮಸ್ಥರಿಂದ ರಂಗ ಕುಣಿತ ಪ್ರತಿನಿತ್ಯ ನಡೆಯಿತು. ಭಾನುವಾರ ಬೆಳಿಗ್ಗೆ ಗ್ರಾಮದ ಕಾಲಭೈರವೇಶ್ವರ ದೇವಾಲಯದ ಮುಂಭಾಗ ಶ್ರೀ ಕಂಬದ ನರಸಿಂಹಸ್ವಾಮಿ, ಶ್ರೀ ದೊಡ್ಡಮ್ಮ, ಚಿಕ್ಕಮ್ಮ ದೇವಿ ಉತ್ಸವದೊಂದಿಗೆ ರಂಗ ಕುಣಿತ ನಡೆಸಿ, ರಂಗ ಕುಣಿತಕ್ಕೆಂದು ತರಲಾಗಿದ್ದ ಕಂಬಗಳಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಗ್ರಾಮದ ಕೆರೆಗೆ ಪೂಜೆ ಸಲ್ಲಿಸಿ ನೀರಿಗೆ ಬಿಡಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ರಾಜಬೀದಿಗಳಲ್ಲಿ ದೇವರ ಉತ್ಸವದೊಂದಿಗೆ ಶ್ರೀ ಕಂಬದ ನರಸಿಂಹ ಸ್ವಾಮಿ ದೇವಾಲಯದಲ್ಲಿ ಶನಿವಾರ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ಪೂಜೆ, ಅಭಿಷೇಕ ಸೇರಿ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು ಶನಿವಾರ ಮತ್ತು ಭಾನುವಾರ ಬೆಳಿಗ್ಗೆ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ರಂಗ ಕುಣಿತಕ್ಕೆ ಹೆಜ್ಜೆ ಹಾಕಿದ ಗ್ರಾಮಸ್ಥರು: ಸಂಪ್ರದಾಯವನ್ನು ಉಳಿಸಿ ಬೆಳೆಸುವ ಸಲುವಾಗಿ ನೂರಾರು ವರ್ಷಗಳಿಂದ ಗ್ರಾಮದಲ್ಲಿ ರಂಗ ಕುಣಿತ ಹಬ್ಬ ಆಚರಿಸುತ್ತಾ ಬರಲಾಗುತ್ತಿದೆ. ಒಂದು ವಾರದಿಂದ ಶ್ರದ್ಧಾಭಕ್ತಿಯಿಂದ ಗ್ರಾಮಸ್ಥರು ರಂಗ ಕುಣಿತದಲ್ಲಿ ಪಾಲ್ಗೊಂಡರು. ಚಿಕ್ಕ ಮಕ್ಕಳು ಸೇರಿ ವೃದ್ಧರೂ ಕೂಡ ರಂಗ ಕುಣಿತದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಶಾಸಕ ಸಿ.ಎನ್. ಬಾಲಕೃಷ್ಣರ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ರಂಗ ಕುಣಿತಕ್ಕೆ ಶುಭ ಹಾರೈಸಿದರು.
ಅತ್ತಿಹಳ್ಳಿ ಸೇರಿ ಸುತ್ತಮುತ್ತಲ ಅನೇಕ ಗ್ರಾಮಗಳ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.