ADVERTISEMENT

ಒಳಮೀಸಲಾತಿ ಗೊಂದಲ ನಿವಾರಿಸಿ: ಛಲವಾದಿ ಮಹಾಮಂಡಲದಿಂದ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:31 IST
Last Updated 24 ಫೆಬ್ರುವರಿ 2026, 7:31 IST
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಛಲವಾದಿ ಮಹಾಮಂಡಲದ ಸದಸ್ಯರು ಪ್ರತಿಭಟನೆ ನಡೆಸಿದರು 
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಛಲವಾದಿ ಮಹಾಮಂಡಲದ ಸದಸ್ಯರು ಪ್ರತಿಭಟನೆ ನಡೆಸಿದರು    

ಹಾಸನ: ಒಳಮೀಸಲಾತಿಗೆ ಸಂಬಂಧಿಸಿದ ಗೊಂದಲಗಳು, ಸಮಸ್ಯೆಗಳು ಹಾಗೂ ನ್ಯಾಯಾಲಯದ ಅಡೆತಡೆಗಳು ಸಂಪೂರ್ಣವಾಗಿ ನಿವಾರಣೆ ಆಗುವವರೆಗೆ, ಹಳೆಯ ಮೀಸಲಾತಿ ಜಾರಿಗೆ ಒತ್ತಾಯಿಸಿ ಛಲವಾದಿ ಮಹಾಮಂಡಲ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಪುಟ್ಟರಾಜಪ್ಪ ಮಾತನಾಡಿ, ಒಳ ಮೀಸಲಾತಿ ಗೊಂದಲ ಬಗೆಹರಿಯುವವರೆಗೂ ಹಳೆಯ ಮೀಸಲಾತಿ ಜಾರಿ ಮಾಡುವ ಮೂಲಕ ನೇಮಕಾತಿ ಮತ್ತು ಶಿಕ್ಷಣಕ್ಕೆ ತೊಂದರೆ ಆಗದಂತೆ ತಕ್ಷಣ ಸೂಕ್ತ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ ಪ್ರವರ್ಗ ಎ, ಬಿ, ಸಿ ಎಂದು ವರ್ಗೀಕರಿಸಿ ಪ್ರಮಾಣಪತ್ರ ವಿತರಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎರಡು ವರ್ಷಗಳಿಂದ ಒಳಮೀಸಲಾತಿ ಗೊಂದಲದಿಂದಾಗಿ ಪರಿಶಿಷ್ಟ ಜಾತಿಯವರಷ್ಟೇ ಅಲ್ಲದೇ ಇತರೆ ಸಮುದಾಯದ ಅಭ್ಯರ್ಥಿಗಳಿಗೂ ನೇಮಕಾತಿ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾಗಿದೆ. ವಯೋಮಿತಿ ಮೀರಿದ ಅಭ್ಯರ್ಥಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ದೂರಿದರು.

ADVERTISEMENT

ರಾಜ್ಯ ಸರ್ಕಾರವು ಸೆ.3 ರಂದು ಯಾವುದೇ ಮಾನದಂಡಗಳನ್ನು ಅನುಸರಿಸದೇ ಅವೈಜ್ಞಾನಿಕವಾಗಿ ಹೊರಡಿಸಿರುವ ಮೀಸಲಾತಿ ಆದೇಶವನ್ನು ತಕ್ಷಣ ಪರಿಷ್ಕರಿಸಬೇಕು. ಈ ಹಿಂದಿನ ಆದೇಶವನ್ನು ತಿದ್ದುಪಡಿ ಮಾಡಿ ವೈಜ್ಞಾನಿಕವಾಗಿ ಮೀಸಲಾತಿ ರೋಸ್ಟರ್ ಬಿಂದುಗಳನ್ನು ಮರು ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಉಪಾಧ್ಯಕ್ಷ ಜಯದೇವಯ್ಯ, ಪ್ರಧಾನ ಕಾರ್ಯದರ್ಶಿ ಜವರಯ್ಯ, ದಲಿತ ಹೋರಾಟಗಾರ ಕೃಷ್ಣದಾಸ್, ಈರೇಹಳ್ಳಿ, ವಿರೇಶ್ ಶಿವಮ್ಮ, ಭಾಗ್ಯಾ ಕಲಿವೀರ್, ಹರೀಶ್ ಉಳುವಾರೆ, ರಾಜಶೇಖರ್, ಗೋವಿಂದರಾಜು, ಕೋಡಿಹಳ್ಳಿ ರಂಗಪ್ಪ, ರಂಗಸ್ವಾಮಿ, ಸಿದ್ದಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.