ADVERTISEMENT

ಬಜೆಟ್‌ನಲ್ಲಿ ಹಾಸನಕ್ಕೆ ಜೂಜು, ಗಾಂಜಾ ಗ್ಯಾರಂಟಿ ನೀಡಿದ ಸರ್ಕಾರ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 11:31 IST
Last Updated 10 ಮಾರ್ಚ್ 2025, 11:31 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ ಬುಕ್‌ನಲ್ಲಿ ಹಾಸನ ಜಿಲ್ಲೆಯೇ ಇಲ್ಲ. 2025-2026ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಗೆ ಹೆಚ್ಚುವರಿಯಾಗಿ ಜೂಜು, ಮದ್ಯ, ಮಟ್ಕಾ, ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ಶಾಸಕ ಎಚ್.ಡಿ. ರೇವಣ್ಣ ಟೀಕಿಸಿದರು

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಮುಂದುವರಿಸಿದ್ದಾರೆ. ಆದರೆ ಬಜೆಟ್‌ನಲ್ಲಿ ಹಾಸನ ಜಿಲ್ಲೆಯೇ ಇಲ್ಲ. ಇದಕ್ಕಾಗಿ ಜಿಲ್ಲೆಯ ಜನ ಸರ್ಕಾರಕ್ಕೆ ಧನ್ಯವಾದ ಹೇಳಬೇಕು ಎಂದು ಲೇವಡಿ ಮಾಡಿದರು.

ತೋಟಗಾರಿಕೆ ಕಾಲೇಜು ಬರಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ನಗರದ ರೈಲ್ವೆ ಮೇಲ್ಸೇತುವೆಗೆ ಅನುದಾನ ಸಿಕ್ಕಿಲ್ಲ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಜಾರಿ ಮಾಡಿದ ಯೋಜನೆಗಳನ್ನು ಮುಂದುವರಿಸಲು ಅನುದಾನ ನೀಡಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ₹100 ಕೋಟಿ ಬೇಕಿತ್ತು. ಅದನ್ನೂ ಕೊಟ್ಟಿಲ್ಲ ಎಂದು ಹೇಳಿದರು.

ADVERTISEMENT

ಹಾಸನ ಮಹಾನಗರ ಪಾಲಿಕೆಯಾಗಿ ಘೋಷಣೆ ಮಾಡಿದ್ದರೂ, ಬೆಳವಣಿಗೆಗೆ ಅಗತ್ಯ ಅನುದಾನ ನೀಡಿಲ್ಲ. ನಗರದಲ್ಲಿ ಅಲ್ಪಸಂಖ್ಯಾತರು ವಾಸಿಸುವ ಬಡಾವಣೆಗಳ ರಸ್ತೆಗಾದರೂ ಅನುದಾನ ಕೊಡಬೇಕಿತ್ತು. ಕನಿಷ್ಠ 1 ಸಾವಿರ ವಸತಿಗೃಹಗಳನ್ನು ಮಂಜೂರು ಮಾಡಬೇಕಿತ್ತು ಎಂದರು.

ಕೆಲವರು ಟೀಕೆ ಮಾಡುತ್ತಾರೆ, ಆದರೆ ನಾನು ಅದೆಲ್ಲ ಮಾಡಲ್ಲ. ಹಾಸನ ಮಹಾನಗರ ಪಾಲಿಕೆಯಾಗಿ ಘೋಷಣೆ ಮಾಡಿದರೂ ಅಭಿವೃದ್ಧಿಗೆ ಹಣ ಮೀಸಲಿಟ್ಟಿಲ್ಲ. ಹಾಸನ ಜಿಲ್ಲೆಯ ಬೆಳವಣಿಗೆಯನ್ನು ಈ ಸರ್ಕಾರ ಸಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಬೇಡ ಎಂಬ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ದೊಡ್ಡವರ ಬಗ್ಗೆ ಮಾತನಾಡುವ ಶಕ್ತಿ ಇಲ್ಲ. ಅವರೆಲ್ಲ ದೊಡ್ಡವರು ನಾವು ಮಾತನಾಡಲ್ಲ ಎಂದರು.

ಈ ಸಂದರ್ಭದಲ್ಲಿ ಶಾಸಕ ಸ್ವರೂಪ್ ಪ್ರಕಾಶ್, ನಗರಸಭೆ ಅಧ್ಯಕ್ಷ ಚಂದ್ರೇಗೌಡ ಇದ್ದರು.

ಕರ್ನಾಟಕದ ಬಜೆಟ್ ಬುಕ್‌ನಲ್ಲಿ ಹಾಸನ ಇಲ್ಲ. ಆದರೆ ದೆಹಲಿ ಬಜೆಟ್ ಬುಕ್‌ನಲ್ಲಿದೆ. ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಅಗತ್ಯ ಯೋಜನೆ ತರುವ ಶಕ್ತಿ ದೇವೇಗೌಡರಿಗೆ ಇದೆ.
ಎಚ್‌.ಡಿ.ರೇವಣ್ಣ ಶಾಸಕ

ಕರ್ತವ್ಯದಲ್ಲಿದ್ದಾಗಲೇ ಪೊಲೀಸರ ಎಣ್ಣೆ

ಕರ್ತವ್ಯದಲ್ಲಿದ್ದಾಗ ಪೊಲೀಸರು ಏಳು ಗಂಟೆಗೆ ಎಣ್ಣೆ ಹಾಕುತ್ತಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇದನ್ನು ತಡೆಗಟ್ಟಬೇಕು ಎಂದು ಎಚ್‌.ಡಿ. ರೇವಣ್ಣ ಆಗ್ರಹಿಸಿದರು. ಮಟ್ಕಾ ಜೂಜು ಮದ್ಯ ಸೇವನೆಯಿಂದ ಹೆಣ್ಣುಮಕ್ಕಳ ಒಡವೆ ಮಾರಲಾಗುತ್ತಿದೆ. ಕೆಳಮಟ್ಟದ ಅಧಿಕಾರಿಗಳು ಎಸ್ಪಿಯವರ ನಿಯಂತ್ರಣದಲ್ಲಿಲ್ಲ. ಪೊಲೀಸರು ಕೆಲಸ ಮುಗಿಸಿ ಮನೆಗೆ ಹೋಗಿ ಕುಡಿಯಲಿ ನಾನು ಬೇಡ ಅನ್ನಲ್ಲ. ಕತ್ಯವ್ಯದಲ್ಲಿದ್ದಾಗಲೇ ಪೊಲೀಸರು ಎಣ್ಣೆ ಹಾಕುತ್ತಾರೆ ಎಂದು ದೂರಿದರು. ದೂರು ಕೊಡಲು ಬಂದವರನ್ನು ಬಾಯಿಗೆ ಬಂದಂತೆ ಬೈಯುತ್ತಾರೆ. ನಗರದ ಬಹುತೇಕ ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡಲಾಗುತ್ತಿದೆ. ಇದಕ್ಕೆಲ್ಲ ಎಸ್ಪಿ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.