ADVERTISEMENT

ಹಾಸನ ಜಿಲ್ಲೆಯಾದ್ಯಂತ 1,697 ತಪಾಸಣೆ: 20 ಕಿಶೋರ, 4 ಬಾಲ ಕಾರ್ಮಿಕರ ಪತ್ತೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:21 IST
Last Updated 9 ಜನವರಿ 2026, 7:21 IST
ಹಾಸನ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಬಾಲಕಾರ್ಮಿಕರ ಪತ್ತೆಗಾಗಿ ತಪಾಸಣೆ ನಡೆಸಲಾಯಿತು (ಸಾಂದರ್ಭಿಕ ಚಿತ್ರ)
ಹಾಸನ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಬಾಲಕಾರ್ಮಿಕರ ಪತ್ತೆಗಾಗಿ ತಪಾಸಣೆ ನಡೆಸಲಾಯಿತು (ಸಾಂದರ್ಭಿಕ ಚಿತ್ರ)   

ಹಾಸನ: ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕರ ಪತ್ತೆಗೆ 1,697 ವಿಶೇಷ ತಪಾಸಣೆ ನಡೆಸಿದ್ದು, ತಪಾಸಣೆಯಲ್ಲಿ ನಾಲ್ವರು ಬಾಲ ಕಾರ್ಮಿಕರು ಮತ್ತು 20 ಕಿಶೋರ ಕಾರ್ಮಿಕರು ಕೆಲಸದಲ್ಲಿ ತೊಡಗಿರುವುದು ದೃಢಪಟ್ಟಿದೆ.

ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರ ತಾಲ್ಲೂಕಿನಲ್ಲಿ ತಲಾ ಒಬ್ಬ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದ್ದು, ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ತಲಾ 5, ಹಾಸನ ತಾಲ್ಲೂಕಿನಲ್ಲಿ 7 ಕಿಶೋರ ಕಾರ್ಮಿಕರನ್ನು ಪತ್ತೆ ಮಾಡಲಾಗಿದೆ. ಹೊಳೆನರಸೀಪುರ ಮತ್ತು ಅರಕಲಗೂಡು ತಾಲ್ಲೂಕಿನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಇವರಲ್ಲಿ ಒಬ್ಬರು ಅಂತರ ಜಿಲ್ಲೆ ಕಾರ್ಮಿಕರಾಗಿದ್ದು, 8 ಮಂದಿ ಅಂತರ ರಾಜ್ಯ ಕಾರ್ಮಿಕರಾಗಿದ್ದಾರೆ. ಸ್ಥಳೀಯ 15 ಜನ ಸೇರಿದಂತೆ ಒಟ್ಟು 24 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ತಿಳಿಸಿದ್ದಾರೆ.

ADVERTISEMENT

ಪಾಲನೆ-ಪೋಷಣೆಯ ಹಿತದೃಷ್ಟಿಯಿಂದ 14 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಒಪ್ಪಿಸಲಾಗಿದೆ. ಉಳಿದ 11 ಪ್ರಕರಣಗಳಲ್ಲಿ ತಪ್ಪಿತಸ್ಥ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಹೇಳಿದರು.

2025-26ನೇ ಸಾಲಿನಲ್ಲಿ 6 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ದಂಡ ವಿಧಿಸಿ, ಸುಮಾರು ₹1.60 ಲಕ್ಷ ಕಾರ್ಪಸ್ ಮೊತ್ತವನ್ನು ವಸೂಲಿ ಮಾಡಲಾಗಿದೆ. ಸ್ಥಳೀಯ ನ್ಯಾಯಾಲಯಗಳಲ್ಲಿ ಬಾರ್, ರೆಸ್ಟೋರೆಂಟ್ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಪತ್ತೆಯಾದ 7 ಪ್ರಕರಣಗಳಲ್ಲಿ ಒಟ್ಟು ₹1.15 ಲಕ್ಷ ದಂಡ ವಿಧಿಸಲಾಗಿದೆ, ಉಳಿದ ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇವೆ.

ಹಣಕಾಸು ನೆರವು: 2025-26ನೇ ಸಾಲಿಗೆ ಎಸ್‌ಸಿಎಸ್‌ಪಿ ಯೋಜನೆಯಡಿ ₹2,53,911 ಮತ್ತು ಟಿಎಸ್‌ಪಿ ಅಡಿ ₹84,637 ಬಿಡುಗಡೆ ಮಾಡಲಾಗಿದೆ.

ಇದರಲ್ಲಿ ಎಸ್‌ಸಿಎಸ್‌ಪಿ ಯೋಜನೆಯಡಿ 4 ಕಿಶೋರ ಕಾರ್ಮಿಕರ ವಿದ್ಯಾಭ್ಯಾಸಕ್ಕೆ ಪೂರಕ ಪುನರ್ವಸತಿ ಕಿಟ್‌ಗಳನ್ನು ವಿತರಿಸಲು ₹19,864 ಖರ್ಚು ಮಾಡಲಾಗಿದೆ. ಟಿಎಸ್‌ಪಿ ಯೋಜನೆಯಡಿ ಒಬ್ಬ ಬಾಲ ಕಾರ್ಮಿಕನಿಗೆ ₹4,906 ಖರ್ಚು ಮಾಡಲಾಗಿದೆ. ಎಸ್‌ಸಿಎಸ್‌ಪಿಯ ₹2,34,667 ಮತ್ತು ಟಿಎಸ್‌ಪಿಯ ₹79,671 ಅನುದಾನ ಬಾಕಿ ಇದೆ.

ಯಮುನಾ
ಬಾಲಕಾರ್ಮಿಕತೆ ನಿರ್ಮೂಲನೆಗೆ ಪಾಲಿಸಬೇಕಾದ ನಿಯಮಗಳ ಬಗ್ಗೆ 1567 ಕಾನೂನು ಅರಿವು ಕಾರ್ಯಕ್ರಮ ನಡೆಸಲಾಗಿದೆ. ಇಲಾಖೆ ಸಿಬ್ಬಂದಿಗೆ ಒಂದು ವಿಶೇಷ ತರಬೇತಿ ಕಾರ್ಯಾಗಾರ ಕೂಡ ಆಯೋಜಿಸಲಾಗಿದೆ
ಯಮುನಾ ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ
ಮಾಹಿತಿ ನೀಡಿ
ಯಾವುದೇ ಅಂಗಡಿ ಉದ್ಯಮದಲ್ಲಿ ಬಾಲಕಾರ್ಮಿಕ ಅಥವಾ ಕಿಶೋರರನ್ನು ಕೆಲಸ ಇಟ್ಟುಕೊಂಡಿರುವುದು ಕಂಡುಬಂದರೆ ಕಾರ್ಮಿಕ ಸಹಾಯವಾಣಿ 155214 ಮತ್ತು ಮಕ್ಕಳ ಸಹಾಯವಾಣಿ 1098 ಗೆ ತಕ್ಷಣ ಕರೆ ಮಾಡಲು ಯಮುನಾ ತಿಳಿಸಿದ್ದಾರೆ. ಸಾರ್ವಜನಿಕರು ಹೋಟೆಲ್ ಮತ್ತು ಉದ್ಯಮಗಳಲ್ಲಿ ನೇರವಾಗಿ ದೂರು ದಾಖಲಿಸಬಹುದಾಗಿದೆ. ಜಿಲ್ಲಾ ಕಾರ್ಮಿಕ ಇಲಾಖೆ ಮಕ್ಕಳ ಸುರಕ್ಷತೆಗೆ ಪ್ರಾಥಮಿಕ ಆದ್ಯತೆ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಇತರ ತಪಾಸಣೆಗಳನ್ನು ನಡೆಸಿ ಬಾಲಕಾರ್ಮಿಕತೆಯ ಸಂಪೂರ್ಣ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.