ಹಾಸನ: ಲೇಖನಿ ಧರ್ಮಾಂಧತೆಯ ಮೇರೆ ಮೀರಿದ ತಲ್ಲಣಗಳ ಹೊಳವಾಗಬೇಕು. ಲೇಖಕರಿಗೆ ಲೇಖನಿ ಅಡವಿಡುವ ಪರಿಸ್ಥಿತಿ ಬರಬಾರದು. ಬಂದರೆ ಸಮಾಜ ನಿಂತ ನೀರಾಗಿ ಬಿಡುತ್ತದೆ ಎಂದು ಹಿರಿಯ ಸಾಹಿತಿ ಬಾನು ಮುಷ್ತಾಕ್ ಅಭಿಪ್ರಾಯಪಟ್ಟರು.
ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಹಾಸನ ತಾಲ್ಲೂಕು ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಗಳ ಆಶ್ರಯದಲ್ಲಿ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಾಸನ ದಸರಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಇತ್ತೀಚೆಗೆ ದಸರಾ ನಾಡಹಬ್ಬದ ವೈಶಿಷ್ಟ್ಯ ಕಳೆದುಕೊಳ್ಳುತ್ತಿದೆ. ಇದು ಕೇವಲ ಸರ್ಕಾರದ ಉತ್ಸವವಾಗದೇ ಜನರ ಹಬ್ಬವಾಗಬೇಕು. ಸಮಷ್ಟಿ ಸ್ವರೂಪ ಪಡೆಯಬೇಕು. ಸಹಜ, ಪ್ರಾಕೃತಿಕ ನಿಯಮಗಳನ್ನು ಮೀರುವುದೇ ನಿಜವಾದ ಜೀವನಶೈಲಿಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನಿಜವಾದ ಸಾಹಿತ್ಯ ಕೈಂಕರ್ಯ ಮಾಡುತ್ತಿದೆ. ಹೊಸ ಆಲೋಚನೆಗಳೊಂದಿಗೆ ಉದಿಸಿದ ಈ ಸಂಸ್ಥೆ ಜಿಲ್ಲೆಯಲ್ಲದೇ ಈಗಾಗಲೇ ರಾಜ್ಯದಾದ್ಯಂತ ವ್ಯಾಪಿಸಿ ಕಾರ್ಯೋನ್ಮುಖ ಆಗಿರುವುದು ಅಭಿನಂದನೀಯ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ, ‘ಕಾವ್ಯ ಎಂದರೆ ಹೀಗೇ ಇರಬೇಕೆಂದು ಪಂಪ ಪೂರ್ವಯುಗದಿಂದ ಇಲ್ಲಿವರೆಗೂ ನಿಖರ ವ್ಯಾಖ್ಯಾನ ಸಿಕ್ಕಿಲ್ಲ. ಆದರೆ ಕನ್ನಡ ಕಾವ್ಯ ಪರಂಪರೆ ಅಗಾಧವಾಗಿದೆ. ಕವಿಗಳಿಗೆ ಕಾವ್ಯೇತಿಹಾಸದ ಪರಿಕಲ್ಪನೆ, ಜ್ಞಾನ ಅಗತ್ಯ. ಹಿರಿಯರ ಕವಿತೆಗಳನ್ನು ಓದಿದಾಗ ಕಾವ್ಯದ ಜಾಡು ಅರಿವಾಗುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷೆ ಕೆ.ಸಿ. ಗೀತಾ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಗೈಡ್ ಆಯುಕ್ತೆ ಜಯಾ ರಮೇಶ್, ಅರಸೀಕೆರೆ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್. ಮಂಜುನಾಥ್ ಪಂಡಿತ್ ಸೇರಿದಂತೆ ಹಲವರು ಮಾತನಾಡಿದರು. ಸಾಹಿತಿ ಶೈಲಜಾ ಹಾಸನ, ಬಿ.ಎಂ. ಭಾರತಿ ಹಾದಿಗೆ, ವಾಣಿ ಮಹೇಶ್, ಮಾರುತಿ ಕೆ.ಬಿ. ದೊಡ್ಡಕೋಡಿಹಳ್ಳಿ, ವಾಸು ಸಮುದ್ರವಳ್ಳಿ, ಎಚ್.ಎಸ್. ಬಸವರಾಜ್, ಆರ್.ಜಿ. ಗಿರೀಶ್, ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
‘ಕವಿಗೋಷ್ಠಿಗಳಲ್ಲೂ ರಾಜಕೀಯ‘
‘ಧರ್ಮಾಂಧತೆ ಕೋಮುದಳ್ಳುರಿಯ ಪ್ರಸಕ್ತ ಉಸಿರುಗಟ್ಟುವ ವಾತಾವರಣದಲ್ಲಿ ನಾವಿದ್ದೇವೆ. ನಿಜವಾದ ಬರಹಗಾರನನ್ನು ಯಾರೂ ಗುರುತಿಸುವುದಿಲ್ಲ’ ಎಂದು ಕವಿ ಚಿನ್ನೇನಹಳ್ಳಿ ಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಆಶಯ ನುಡಿಗಳನ್ನಾಡಿದ ಅವರು ‘ಮೈಸೂರು ದಸರಾ ಕವಿಗೋಷ್ಠಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಂತಹ ಕವಿಗೋಷ್ಠಿಗಳಲ್ಲಿ ರಾಜಕೀಯ ಧಾರ್ಮಿಕ ಹಿನ್ನೆಲೆಯಲ್ಲಿ ಇಂದು ಕವಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಆದ್ದರಿಂದಲೇ ಕವಿಗೋಷ್ಠಿಗಳು ಮೌಲ್ಯಗಳನ್ನು ಕಳೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಒಳಗಾಗುತ್ತಿವೆ’ ಎಂದರು.
‘ನಾನು ಮೂರು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ರಾಜಕಾರಣ ಮಾಡದಿರುವುದರಿಂದ ಇದುವರೆಗೂ ನನಗೆ ಅಂತಹ ಅವಕಾಶಗಳು ಬಂದಿಲ್ಲ. ಆದರೆ ಕವಿಗಳಾದ ನಮಗೆ ಅವಕಾಶಗಳು ಸಿಗದೇ ಹೋದರೂ ಆರಕ್ಕೇರದೇ ಮೂರಕ್ಕಿಳಿಯದೇ ನಮ್ಮ ಬರವಣಿಗೆ ಸಮಾಜಮುಖಿಯಾಗಿ ಸಾಗಬೇಕು’ ಎಂದರು.
ಹಲವರಿಂದ ಕವನ ವಾಚನ
ನಂತರ ನಡೆದ ಹಾಸನ ದಸರಾ ಕವಿಗೋಷ್ಠಿಯಲ್ಲಿ ಸಕಲೇಶಪುರದ ನಾಗರಾಜ್ ದೊಡ್ಡಮನಿ ಚಿನ್ನೇನಹಳ್ಳಿ ಸ್ವಾಮಿ ರಾಜೇಶ್ವರಿ ಹುಲ್ಲೇನಹಳ್ಳಿ ಲಲಿತಾ ಎಸ್. ರೇಖಾಪ್ರಕಾಶ್ ಚಂದ್ರಕಲಾ ಆಲೂರು ಹೇಮರಾಗ ಎಚ್.ಬಿ.ಚೂಡಾಮಣಿ ಅಮೃತ್ ಅರಸೀಕೆರೆ ಸಿ.ಎನ್. ನೀಲಾವತಿ ಚೇತನ್ ಕೊಟ್ಟೂರು ಪಲ್ಲವಿ ಬೇಲೂರು ಡಾ. ಕೆ.ಟಿ. ರಕ್ಷಾ ಮಲ್ಲೇಶ್ ಜಿ.ಹಾಸನ ಸೈಫುಲ್ಲಾ ಡಿ.ಎಂ. ಜಯಶಂಕರ್ ಬೆಳಗುಂಬ ಧರ್ಮ ಕೆರಲೂರು ಜಯಾರಮೇಶ್ ಪದ್ಮಾವತಿ ವೆಂಕಟೇಶ್ ಭಾರತಿ ಎಚ್.ಎನ್. ರುಮಾನಾ ಜಬೀರ್ ಎ.ಎಚ್.ಬೋರೇಗೌಡ ಬಿ.ವಿ.ವೇದಶ್ರೀ ನಿಶಿತ್ ಕೆ.ಸಿ.ಗೀತಾ ರಾಣಿ ಚರಾಶ್ರೀ ಸಾವಿತ್ರಿ ಬಿ. ಗೌಡ ಗಿರೀಶ್ ಚನ್ನರಾಯಪಟ್ಟಣ ಸಂಧ್ಯಾ ಆಲೂರು ಪಾರ್ವತಿ ಆಲೂರು ಕವನ ವಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.