ADVERTISEMENT

ಹಾಸನಾಂಬೆ ದರ್ಶನ ಸುಸೂತ್ರ, ಪುನೀತರಾದ ಭಕ್ತರು

ಸಂಜೆ ಹೆಚ್ಚಾದ ಜನದಟ್ಟಣೆ, ವೃದ್ಧರು, ಅಂಗವಿಕಲರಿಗೆ ನೇರ ದರ್ಶನ, ಪ್ರಸಾದ ವಿತರಣೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 14:04 IST
Last Updated 19 ಅಕ್ಟೋಬರ್ 2019, 14:04 IST
ಸರದಿ ಸಾಲಿನಲ್ಲಿ ನಿಂತಿರುವ ಭಕ್ತರು
ಸರದಿ ಸಾಲಿನಲ್ಲಿ ನಿಂತಿರುವ ಭಕ್ತರು   

ಹಾಸನ: ಹಾಸನದ ಶಕ್ತಿ ದೇವತೆ ದರ್ಶನವನ್ನು ಶನಿವಾರ ಸಹಸ್ರಾರು ಭಕ್ತರು ಪಡೆದರು. ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಜಿಲ್ಲಾಡಳಿತ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.

ನಸುಕಿನ 5 ರಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ದರ್ಶನ ಪಡೆದು ಪುನೀತರಾದರು. ಕ್ರಮೇಣ ಸರತಿ ಸಾಲು ಬೆಳೆಯಿತು. ಮಧ್ಯಾಹ್ನ 1 ರಿಂದ 3 ರವರೆಗೆ ನೈವೇದ್ಯ ಸಮಯದಲ್ಲಿ ದರ್ಶನಕ್ಕೆ ಅವಕಾಶ ಇಲ್ಲದ ಕಾರಣ ಸರತಿ ಸಾಲು ಮುಂದೆ ಸಾಗದೆ ಜನದಟ್ಟಣೆ ಹೆಚ್ಚಾಯಿತು.

ಶನಿವಾರ ಹೈಕೋರ್ಟ್‌ ನ್ಯಾಯಾಧೀಶ ನಟರಾಜನ್‌, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸ್ವರೂಪ್‌ ಹಾಗೂ ಹಲವರು ಹಾಸನಾಂಬೆ, ದರ್ಬಾರ್‌ ಗಣಪತಿ ಹಾಗೂ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದರು.

ADVERTISEMENT

ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ತುಮಕೂರು ಸೇರಿದಂತೆ ನಾನಾ ಭಾಗಗಳಿಂದ ಬಂದಿದ್ದ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಮೊದಲ ಬಾರಿಗೆ ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ತೊಂದರೆ ಆಗದಂತೆ ವಿಶ್ರಾಂತಿ ಪಡೆಯಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹಿರಿಯರು, ಮಹಿಳೆಯರು, ಮಕ್ಕಳು ವಿಶ್ರಾಂತಿ ಪಡೆದು ದರ್ಶನ ಪಡೆದರು. ಹಿರಿಯ ನಾಗರಿಕರು, ಅಂಗವಿಕಲರಿಗೆ ನೇರ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ ಸೌಟ್ಸ್‌ ಆ್ಯಂಡ್‌ ಗೈಡ್ಸ್‌ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಬರುವ ಭಕ್ತರಿಗೆ ಕುಡಿಯುವ ನೀರು ಒದಗಿಸುವ ಹಾಗೂ ವಯೋವೃದ್ಧರನ್ನು ಗರ್ಭಗುಡಿಗೆ ಕರೆದೊಯ್ಯುವ ಕಾರ್ಯ ನಿರ್ವಹಿಸುತ್ತಿದ್ದಾರೆ.

ದೇವಾಲಯ ವತಿಯಿಂದ ಸ್ವಯಂ ಸೇವಕರು, ಪೊಲೀಸ್‌, ಕಂದಾಯ ಇಲಾಖೆ ಸಿಬ್ಬಂದಿಗೆ ಚನ್ನಕೇಶವ ದೇವಸ್ಥಾನದಲ್ಲಿ ಪ್ರಸಾದ್ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ದೊಣ್ಣೆಯಲ್ಲಿ ಪ್ರಸಾದ ವಿತರಿಸಲಾಯಿತು. ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡ ಅಭಿಮಾನಿಗಳು ಪುಲಾವ್, ಮೊಸರನ್ನ ವಿತರಿಸಿದರು.

ಭಕ್ತರ ಸಂಖ್ಯೆ ಹೆಚ್ಚುತ್ತಿದ್ದಂತೆ ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ವಾಹನಗಳ ನಿಲುಗಡೆಗೆ ನಗರಸಭೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ವಾಹನಗಳು ನಿಲ್ಲಿಸಲು ಜಾಗ ಇಲ್ಲದೆ ರಸ್ತೆ ಬದಿ ನಿಲ್ಲಿಸುತ್ತಿರುವುದರಿಂದ ಟ್ರಾಫಿಕ್‌ ಸಮಸ್ಯೆ ಆಗಿದೆ.

ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಶಿಫಾರಸ್ಸು ಪತ್ರ ತರುವವರಿಗೆ ಪಾಸ್ ವಿತರಿಸಲು ಪ್ರವಾಸಿ ಮಂದಿರದಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ದಿನ ಸಾಕಷ್ಟು ಶಿಫಾರಸು ಪತ್ರಗಳು ಬರುತ್ತಿದೆ. ರಜೆ ದಿನಗಳಲ್ಲಿ ಪತ್ರಗಳ ಸಂಖ್ಯೆ ನೂರಕ್ಕೂ ಹೆಚ್ಚು ಎನ್ನುತ್ತಾರೆ ಕಂದಾಯ ಇಲಾಖೆ ಸಿಬ್ಬಂದಿ.

‘ಮೂರು ವರ್ಷದಿಂದ ಕಷ್ಟಪಟ್ಟು ದೇವಿ ದರ್ಶನ ಪಡೆಯುತ್ತಿದ್ದೇನೆ. ಈ ವರ್ಷ ನೇರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸಂತಸ ಉಂಟು ಮಾಡಿದೆ. ತಾಯಿಯನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಂಡೆ. ಪ್ರತಿಬಾರಿಯೂ ದರ್ಶನಕ್ಕೆ ಸಾಕಷ್ಟು ತೊಂದರೆ ಆಗುತ್ತಿತ್ತು. ಈ ಬಾರಿ ಗರ್ಭಗುಡಿಗೆ ಕರೆದೊಯ್ಯಲು ಸ್ವಯಂ ಸೇವಕರನ್ನು ನೇಮಕ ಮಾಡಿರುವುದು ಸಂತೋಷವಾಗಿದೆ’ ಎಂದು ಅಂಗವಿಕಲರಾದ ಮಂಜುಳಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.