ADVERTISEMENT

ಹಾಸನದಲ್ಲಿ ಮುಗಿಯದ ವನ್ಯಜೀವಿ–ಮಾನವ ಸಂಘರ್ಷ: ಸಿಹಿ–ಕಹಿಗಳನ್ನು ನೀಡಿದ ವರ್ಷವಿದು

ಚಿದಂಬರಪ್ರಸಾದ್
Published 29 ಡಿಸೆಂಬರ್ 2025, 6:44 IST
Last Updated 29 ಡಿಸೆಂಬರ್ 2025, 6:44 IST
ಬೇಲೂರು ತಾಲ್ಲೂಕಿನಲ್ಲಿರುವ ಕಾಡಾನೆ ಸ್ಥಳಾಂತರಿಸುವಂತೆ ಆಗ್ರಹಿಸಿ ಬಿಕ್ಕೋಡು ಗ್ರಾಮದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಲಾಯಿತು
ಬೇಲೂರು ತಾಲ್ಲೂಕಿನಲ್ಲಿರುವ ಕಾಡಾನೆ ಸ್ಥಳಾಂತರಿಸುವಂತೆ ಆಗ್ರಹಿಸಿ ಬಿಕ್ಕೋಡು ಗ್ರಾಮದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಲಾಯಿತು   

ಹಾಸನ: ಹಳೆಯ ವರ್ಷಕ್ಕೆ ವಿದಾಯ ಹೇಳುವ ಸಮಯ ಹತ್ತಿರ ಬಂದಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮವೂ ಮೂಡಿದೆ. ಈ ಹೊತ್ತಿನಲ್ಲಿ ವರ್ಷದ ಹಿನ್ನೋಟದತ್ತ ಮೆಲುಕು ಹಾಕಿದರೆ, ಜಿಲ್ಲೆಯ ಮಟ್ಟಿಗೆ ಸಿಹಿ–ಕಹಿಗಳನ್ನು ನೀಡಿದ ವರ್ಷವಿದು.

ಕಾಡಾನೆ ದಾಳಿ–ಮುಂದುವರಿದ ಸಾವು: 2025 ರ ಆರಂಭದಿಂದಲೇ ಕಾಡಾನೆ ದಾಳಿ ಆರಂಭವಾಗಿದ್ದು, ಈ ವರ್ಷದಲ್ಲಿ 6 ಜನ ಮೃತಪಟ್ಟರು. ವಿದ್ಯುತ್‌ ಆಘಾತದಿಂದ ಆನೆಗಳು–ಮರಿಗಳು ಮೃತಪಟ್ಟರು.

ಜನವರಿ 22 ರಂದು ಆಲೂರು ತಾಲ್ಲೂಕಿನ ಅಡಿಬೈಲು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಪುಟ್ಟಯ್ಯ (78) ಸ್ಥಳದಲ್ಲಿಯೇ ಮೃತಪಟ್ಟಿದ್ದರು. ದಿನಸಿ ತರಲು ಮಗ್ಗೆ ಗ್ರಾಮಕ್ಕೆ ಹೋಗಿ ವಾಪಸ್ಸಾಗುವಾಗ ದುರ್ಘಟನೆ ನಡೆದಿತ್ತು.

ADVERTISEMENT

ಫೆಬ್ರುವರಿ 13 ರಂದು ಬೇಲೂರು ತಾಲ್ಲೂಕಿನ ಬೆಳ್ಳಾವರ ಗ್ರಾಮದಲ್ಲಿ ದ್ಯಾವಮ್ಮ(62) ಎಂಬುವವರ ಶವ ಪತ್ತೆಯಾಗಿದ್ದು, ಕಾಡಾನೆ ದಾಳಿಯೇ ಕಾರಣ ಎಂದು ಆರೋಪಿಸಿದ ಗ್ರಾಮಸ್ಥರು, ಶವ ತೆಗೆಯದೇ ಅರಣ್ಯ ಸಚಿವರು, ಜಿಲ್ಲಾಧಿಕಾರಿ ಬರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

ಮಾರ್ಚ್‌ 14 ರಂದು ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ‌ಸುಶೀಲಮ್ಮ (65) ಮೃತಪಟ್ಟಿದ್ದರು. ಏಪ್ರಿಲ್‌ 25 ರಂದು ಸಕಲೇಶಪುರ ತಾಲ್ಲೂಕಿನ ಬೈಕೆರೆ ಗ್ರಾಮದ ಕಾಫಿ ತೋಟದಲ್ಲಿ ತೋಟದ ಮಾಲೀಕ ಷಣ್ಮುಖ (36) ಕಾಡಾನೆ ದಾಳಿಯಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮೇ 25 ರಂದು ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಅಂಕಿಹಳ್ಳಿ ಗ್ರಾಮದಲ್ಲಿ ಚಂದ್ರಮ್ಮ (45) ಸಾವನ್ನಪ್ಪಿದ್ದರು.

ಮೇ 5 ರಂದು ಹೆತ್ತೂರು ಸಮೀಪದ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮದಲ್ಲಿ ಕಾಡೆಮ್ಮೆ ದಾಳಿಯಿಂದ ಕೃಷಿಕ ತಿಮ್ಮಪ್ಪ (70) ಮೃತಪಟ್ಟಿದ್ದರು.

ಹೆಜ್ಜೇನು ದಾಳಿ: ಇನ್ನು ಹೆಜ್ಜೇನು ದಾಳಿಯೂ ವಿಪರೀತವಾಗಿದ್ದು, ಹಲವಾರು ಜನರು ಮೃತಪಟ್ಟಿದ್ದು, ಅನೇಕರಿಗೆ ಗಾಯಗಳಾಗಿದ್ದವು. ಫೆಬ್ರುವರಿ 7 ರಂದು ಹಾಸನ: ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಹೆಜ್ಜೇನು ದಾಳಿಯಿಂದ ರೈತ ಜಗದೀಶ್, ಜುಲೈ 15 ರಂದು ನುಗ್ಗೇಹಳ್ಳಿ ಹೋಬಳಿಯ ಬಾಣನಕೆರೆ ಗ್ರಾಮದ ಬಿ.ಕೆ. ಚರಣ್ (30), ನ.12 ರಂದು ಅರಕಲಗೂಡು ತಾಲ್ಲೂಕಿನ ಚಿಕ್ಕಮಗ್ಗೆ ಜವರಯ್ಯ (72), ಡಿ.5 ರಂದು ಆಲೂರು ತಾಲ್ಲೂಕಿನ ಕಸಬಾ ತೊಗರನಹಳ್ಳಿ ಗ್ರಾಮದಲ್ಲಿ ಹೆಜ್ಜೇನು ದಾಳಿಯಿಂದ ರುದ್ರಶೆಟ್ಟಿ(59) ಮೃತಪಟ್ಟಿದ್ದರು.

ಮಾರ್ಚ್‌ 21 ಸಕಲೇಶಪುರದ ಚಂಪಕನಗರ ಬಡಾವಣೆಯ ರಸ್ತೆಯಲ್ಲಿ ಹೋಗುತ್ತಿದ್ದ 9 ಜನರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಶಿಕ್ಷಕಿಯೊಬ್ಬರ ಸ್ಥಿತಿ ಗಂಭೀರವಾಗಿತ್ತು. ಕಾಡಾನೆ ದಾಳಿಯಿಂದ ಗಾಯ: ಜನವರಿ 27 ಬೇಲೂರು ತಾಲ್ಲೂಕಿನಲ್ಲಿ ಕಾಡಾನೆ ದಾಳಿಯಿಂದ ಗರ್ಭಿಣಿ ಸೇರಿ ನಾಲ್ವರು ಗಾಯಗೊಂಡಿದ್ದರು.

ಮಾರ್ಚ್‌ 21 ರಂದು ಬೇಲೂರು ತಾಲ್ಲೂಕಿನ ನಂದಗೊಂಡನಹಳ್ಳಿಯ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಅವರ ಮೇಲೆ, ಮಾರ್ಚ್‌ 29 ರಂದು ಹೆತ್ತೂರು ಸಮೀಪದ ಯಡಕುಮೇರಿ ಗ್ರಾಮದಲ್ಲಿ ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಹರೀಶ್‌ ಎಂಬುವವರ ಮೇಲೆ, ಆಗಸ್ಟ್‌ 6 ರಂದು ಅರಕಲಗೂಡು ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಕಮಲಮ್ಮ ಎಂಬುವವರ ಮೇಲೆ ಕಾಡಾನೆಗಳು ದಾಳಿ ನಡೆಸಿದ್ದವು.

ಆನೆಗಳ ಸಾವು: ವಿದ್ಯುತ್ ಆಘಾತ, ಕಾಳಗದಿಂದ ಹಲವು ಆನೆಗಳು ಮೃತಪಟ್ಟಿರುವ ಘಟನೆಗಳು ನಡೆದಿದ್ದವು. ಜನವರಿ 31 ರಂದು ‌ಸಕಲೇಶಪುರ ತಾಲ್ಲೂಕಿನ ಹಾನುಬಾಳು ಹೋಬಳಿ ದೇವಾಲದಕೆರೆ ಸಮೀಪ ಮರಗುಂದ ಗ್ರಾಮದಲ್ಲಿ ಸುಮಾರು 35 ವರ್ಷದ ಕಾಡಾನೆ ಶವ ಪತ್ತೆಯಾಗಿತ್ತು.

ಮಾರ್ಚ್‌ 15 ರಂದು ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿ ನೆಲಬಳ್ಳಿ ಗ್ರಾಮದಲ್ಲಿ ಎರಡು ದಂತಗಳನ್ನು ಹೊಂದಿದ್ದ 25 ವರ್ಷದ ಗಂಡಾನೆ ಮೃತಪಟ್ಟಿತ್ತು. ಅದೇ ದಿನ ಅರಕಲಗೂಡು ತಾಲ್ಲೂಕಿನ ಸಂತೆಮರೂರು ಗ್ರಾಮದ ಕೆರೆ ಏರಿ ಮೇಲೆ ಚಿರತೆಯ ಕಳೇಬರ ಪತ್ತೆಯಾಗಿತ್ತು.

ಮೇ 10 ರಂದು ಸಕಲೇಶಪುರ ತಾಲ್ಲೂಕಿನ ಸುಳ್ಳಕ್ಕಿ-ಶಾಂತಪುರ ಗ್ರಾಮದ ಬಳಿ 18-20 ವರ್ಷದ ಆನೆಯೊಂದು ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದು, ಜೂನ್‌ 15 ರಂದು ಸಕಲೇಶಪುರ ತಾಲ್ಲೂಕಿನ ಗುಡ್ಡಬೆಟ್ಟ ಗ್ರಾಮದ ಬಳಿಯ ಎಬಿಸಿ ಎಸ್ಟೇಟ್‌ನಲ್ಲಿ ಕಾಡಾನೆ ಹಾಗೂ ಮರಿಯಾನೆ ವಿದ್ಯುತ್‌ ಆಘಾತದಿಂದ ಮೃತಪಟ್ಟವು.

ಜೂನ್‌ 16 ರಂದು ಬೇಲೂರು ತಾಲ್ಲೂಕಿನ ಶಿರಗೂರು ಗ್ರಾಮದ ಜಾಕ್ನಳ್ಳಿ ಎಸ್ಟೇಟ್‌ನಲ್ಲಿ ಮೃತ ಮರಿಯಾನೆಯನ್ನು ತಾಯಿ ಆನೆ ಎಳೆದೊಯ್ದ ದೃಶ್ಯ ಕಂಡು ಬಂದಿತ್ತು.

ನವೆಂಬರ್‌ 9 ರಂದು ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಜಗಬೋರನಹಳ್ಳಿಯಲ್ಲಿ ಕಾಡಾನೆಗಳಾದ ‘ಕ್ಯಾಪ್ಟನ್’ ಹಾಗೂ ‘ಭೀಮ’ನ ನಡುವಿನ ಕಾಳಗದಲ್ಲಿ ಭೀಮ ದಂತ ಕಳೆದುಕೊಂಡಿತ್ತು.

ಮುರಿದು ಬಿದ್ದ ಭೀಮನ ದಂತ
ಆಲೂರು ತಾಲ್ಲೂಕು ಹಳ್ಳಿಯೂರು ಕಾಫಿ ತೋಟದಲ್ಲಿ ಸೆರೆ ಹಿಡಿದ ಕಾಡಾನೆಯನ್ನು ಸಾಕಾನೆಗಳು ಎಳೆದು ತಂದವು. 
ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್‌ ರೆಡ್ಡಿ ಅವರು ಹಾಸನದಲ್ಲಿ ಬೂಕರ್‌ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್‌ ಅವರಿಗೆ ದಸರಾ ಉದ್ಘಾಟನೆಯ ಅಧಿಕೃತ ಆಹ್ವಾನ ನೀಡಿದ ಸಂದರ್ಭ.
ಹಾಸನದಲ್ಲಿ ನಡೆದ ಸರ್ಕಾರಿ ಸೇವೆ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರತ್ತ ಕೈಬೀಸಿದರು.
ಹಾಸನಾಂಬ ಜಾತ್ರೆಯ ಹುಂಡಿಯ ಎಣಿಕೆ ನಂತರ ನೋಟುಗಳ ಕಂತೆಗಳನ್ನು ಜೋಡಿಸಿ ಇಡಲಾಗಿತ್ತು. 
ಹಾಸನಾಂಬೆಯ ಧರ್ಮದರ್ಶನದ ಸರದಿ ಸಾಲು

ಮೂರು ಬಾರಿ ಜಿಲ್ಲೆಗೆ ಬಂದ ಮುಖ್ಯಮಂತ್ರಿ ಹಾಸನ ಜಿಲ್ಲೆಯಲ್ಲಿ ನೆಲೆ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಕಾಂಗ್ರೆಸ್‌ ಮೂರು ಬಾರಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಜುಲೈ 26 ರಂದು ಅರಸೀಕೆರೆಗೆ ಬಂದಿದ್ದ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಕ್ಟೋಬರ್‌ 15 ರಂದು ಹಾಸನಾಂಬೆಯ ದರ್ಶನ ಪಡೆದಿದ್ದರು. ಡಿಸೆಂಬರ್ 6 ರಂದು ನಡೆದ ಸರ್ಕಾರಿ ಸೇವೆಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಾನು ಮುಷ್ತಾಕ್‌ಗೆ ಬುಕರ್‌ ಗರಿ ಕಥೆಗಾರ್ತಿ ಬಾನು ಮುಷ್ತಾಕ್‌ ಅವರ ಸಣ್ಣ ಕಥೆಗಳ ಸಂಕಲನ ‘ಹಾರ್ಟ್‌ ಲ್ಯಾಂಪ್‌’ಗೆ ‘ಅಂತರರಾಷ್ಟ್ರೀಯ ಬುಕರ್‌ ಪ್ರಶಸ್ತಿ’ ಒಲಿದ ಕ್ಷಣ. ಮೇ 20ರಂದು ಲಂಡನ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಇದು ಕನ್ನಡಕ್ಕೆ ಬಂದ ಮೊದಲ ‘ಅಂತರರಾಷ್ಟ್ರೀಯ ಬುಕರ್‌ ಪ್ರಶಸ್ತಿ’. ಅಲ್ಲದೇ ಕಥಾ ಸಂಕಲನವೊಂದಕ್ಕೆ ಈ ಗೌರವ ಲಭಿಸಿದ್ದ ಇದೇ ಇದೇ ಮೊದಲು. ಪ್ರಶಸ್ತಿಯೊಂದಿಗೆ ತವರಿಗೆ ಬಂದ ಬಾನು ಮುಷ್ತಾಕ್‌ ಅವರಿಗೆ ಹಾಸನದಲ್ಲಿ ಅಭೂತಪೂರ್ವ ನಾಗರಿಕರ ಸನ್ಮಾನ ಆಯೋಜಿಸಲಾಗಿತ್ತು. ತಮ್ಮ ಮನದಾಳದ ಮಾತುಗಳನ್ನು ಅಂದು ವೇದಿಕೆಯಲ್ಲಿ ಬಾನು ಮುಷ್ತಾಕ್‌ ಹಂಚಿಕೊಂಡಿದ್ದರು.

ದಾಖಲೆ ಬರೆದ ಹಾಸನಾಂಬ ಜಾತ್ರೆ ಈ ವರ್ಷ ನಡೆದ ಹಾಸನಾಂಬ ದೇವಿಯ ದರ್ಶನೋತ್ಸವ ಜನರ ಜಾತ್ರೆಯಾಗಿ ಪರಿವರ್ತನೆಯಾಗಿದ್ದು ಹೊಸ ದಾಖಲೆ ಬರೆಯಿತು. 26 ಲಕ್ಷ ಜನ ದರ್ಶನ ಪಡೆದಿದ್ದು ₹25.59 ಕೋಟಿ ಆದಾಯ ಸಂಗ್ರಹವಾಗಿತ್ತು.  ದೇಗುಲದಲ್ಲಿಯೇ ಠಿಕಾಣಿ ಹೂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರ ಹೊಸ ರೂಪುರೇಷೆ ಫಲ ನೀಡಿದ್ದು ಭಕ್ತರು ಸಂತಸದಿಂದ ದರ್ಶನ ಪಡೆದರು. ಈ ಬಾರಿ ಗಣ್ಯರು ಅತಿ ಗಣ್ಯರು ಅವರ ಬೆಂಬಲಿಗರಿಗೆ ನೀಡಲಾಗುತ್ತಿದ್ದ ವಿಐಪಿ ಪಾಸ್ ಸಂಸ್ಕೃತಿಗೆ ಕಡಿವಾಣ ಹಾಕಲಾಗಿತ್ತು.

ಮರೆಯಲಾಗದ ದುರಂತ ಸೆ.12 ರಂದು ರಾತ್ರಿ ಹಾಸನ ತಾಲ್ಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಗಳೂ ಸೇರಿ 10 ಜನ ಮೃತಪಟ್ಟಿದ್ದರು. ರಾತ್ರಿ ಸಾಗುತ್ತಿದ್ದ ಗಣೇಶ ವಿಸರ್ಜನಾ ಮೆರವಣಿಗೆಯ ಮೇಲೆ ವೇಗವಾಗಿ ಬಂದ ಕ್ಯಾಂಟರ್‌ ಹರಿದು 9 ಜನರು ಮೃತಪಟ್ಟಿದ್ದರು. ಇದರಲ್ಲಿ ಐವರು ವಿದ್ಯಾರ್ಥಿಗಳಿದ್ದರು. ನಂತರ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.