ADVERTISEMENT

ಹಾಸನ: ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸಲು ಆಗ್ರಹ

ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 7:30 IST
Last Updated 3 ಜನವರಿ 2026, 7:30 IST
ಬಾಂಗ್ಲಾ ಅಕ್ರಮ ವಲಸಿಗರನ್ನು ಬಾಂಗ್ಲಾ ದೇಶಕ್ಕೆ ವಾಪಸ್ ಕಳುಹಿಸಲು ಆಗ್ರಹಿಸಿ ಚನ್ನರಾಯಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಶುಕ್ರವಾರ ಪ್ರತಿಭಟನೆ ನಡೆಸಿತು
ಬಾಂಗ್ಲಾ ಅಕ್ರಮ ವಲಸಿಗರನ್ನು ಬಾಂಗ್ಲಾ ದೇಶಕ್ಕೆ ವಾಪಸ್ ಕಳುಹಿಸಲು ಆಗ್ರಹಿಸಿ ಚನ್ನರಾಯಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಶುಕ್ರವಾರ ಪ್ರತಿಭಟನೆ ನಡೆಸಿತು   

ಚನ್ನರಾಯಪಟ್ಟಣ: ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ವಾಪಸ್ ಕಳುಹಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಘೋಷಣೆ ಕೂಗಿದರು.

ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್ ಮಾತನಾಡಿ, ‘ಬಾಂಗ್ಲಾದೇಶದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸಲಾಗುತ್ತಿದೆ. ಮತಾಂಧ ಶಕ್ತಿಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿವೆ. 1971ರಲ್ಲಿ ಬಾಂಗ್ಲಾ ದೇಶದ ಉದಯಕ್ಕೆ ಭಾರತ ಸಹಕಾರ ನೀಡಿತು. ಆದರೆ ಇತ್ತೀಚೆಗೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಬಾಂಗ್ಲಾ ದೇಶದಲ್ಲಿ ಹಿಂದೂಗಳನ್ನು ಹತ್ಯೆ ಮಾಡಲಾಗುತ್ತಿದೆ. ಅಲ್ಲಿ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟುವ ಮೂಲಕ ಹಿಂದೂಗಳಿಗೆ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡ ನಂಜುಂಡ ಮೈಮ್ ಮಾತನಾಡಿ, ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸೆಯನ್ನು ಕೂಡಲೇ ನಿಲ್ಲಿಸಬೇಕು ಎಂದರು.

ADVERTISEMENT

ಜಿಲ್ಲಾ ಬಿಜೆಪಿ ಪ್ರಧಾನ ಕಾಯದರ್ಶಿ ಗಿರೀಶ್ ಮಾತನಾಡಿ, ‘ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪಕ್ಷಭೇದ ಮರೆತು ಖಂಡಿಸಬೇಕು ಎಂದರು.

ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿದ್ಯಾಪ್ರಸಾದ್, ಮುಖಂಡ ರವಿ, ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್, ಹಿಂದೂ ಪರ ಸಂಘಟನೆಗಳ ಮುಖಂಡರಾದ ಜಗದೀಶ್, ಆನಂದ್, ಹರ್ಷವರ್ಧನ್ ನೇತೃತ್ವ ವಹಿಸಿದ್ದರು. ತಹಶೀಲ್ದಾರ್ ಜಿ.ಎಸ್. ಶಂಕರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ವಾಪಸ್ ಕಳುಹಿಸಲು ಕ್ರಮವಹಿಸಿ

‘ಬಾಂಗ್ಲಾ ಅಕ್ರಮ ವಲಸಿಗರು ಕರ್ನಾಟಕದಲ್ಲಿ ನೆಲೆಸಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅವರನ್ನು ಓಲೈಸುವ ಕೆಲಸವಾಗುತ್ತಿದೆ. ಅಕ್ರಮವಾಗಿ ನೆಲೆಸಿರುವರನ್ನು ಬಾಂಗ್ಲಾ ದೇಶಕ್ಕೆ ವಾಪಸ್ ಕಳಿಸಬೇಕು. ಈ ದೇಶದಲ್ಲಿ ಇರುವ ಅರ್ಹತೆ ಅವರಿಗಿಲ್ಲ. ನಮ್ಮ ವಿರುದ್ದ ಷಡ್ಯಂತ್ರ ನಡೆಸುತ್ತಿರುವ ಬಾಂಗ್ಲಾ ದೇಶಕ್ಕೆ ತಕ್ಕ ಉತ್ತರ ನೀಡಬೇಕು. ಅಕ್ರಮ ವಲಸಿಗರನ್ನು ಗುರುತಿಸಿ ಕೂಡಲೇ ವಾಪಸ್ ಕಳುಹಿಸಲು ಕ್ರಮವಹಿಸಬೇಕು’ ಎಂದು ಬಿಜೆಪಿ ಮುಖಂಡ ಸಿ.ಆರ್. ಚಿದಾನಂದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.