ADVERTISEMENT

ಹಾಸನ | ನಗದಿನೊಂದಿಗೆ ಕಾರು ಕದ್ದೊಯ್ದ ಕಳ್ಳರು

₹4.50 ಲಕ್ಷ ನಗದು, ಚೆಕ್‌, ಎಟಿಎಂ, ಜಮೀನಿನ ದಾಖಲೆಗಳ ಕಳವು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 2:55 IST
Last Updated 26 ಸೆಪ್ಟೆಂಬರ್ 2025, 2:55 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಹಾಸನ: ಬೇಲೂರು ತಾಲ್ಲೂಕಿನ ಮೇದೂರು ಗ್ರಾಮದಲ್ಲಿ ಮನೆಯ ಹಿಂಬಾಗಿಲ ಬೀಗ ಮುರಿದು ನಗದು, ವಿವಿಧ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿರುವ ಕಳ್ಳರು, ಮನೆಯ ಹೊರಗೆ ನಿಲ್ಲಿಸಿದ್ದ ಇನ್ನೋವಾ ಕಾರು ಹಾಗೂ ಅದರಲ್ಲಿದ್ದ ₹4.50 ದೋಚಿದ್ದಾರೆ.

ಟಿಎಪಿಸಿಎಂಎಸ್ ಚುನಾವಣೆ ಇದ್ದುದರಿಂದ ಗ್ರಾಮದ ಸ್ವಾಮೀಗೌಡ ಅವರು ಸೆ.24ರಂದು ಬೆಳಿಗ್ಗೆಯೇ ಮನೆಯಿಂದ ಹೊರಟು ಬೇಲೂರಿನ ಅಂಬೇಡ್ಕರ್ ವೃತ್ತದಲ್ಲಿರುವ ಕಚೇರಿಗೆ ಬಂದು ಇಡೀ ದಿನ ಚುನಾವಣಾ ಪ್ರಚಾರ ಮಾಡಿದ್ದು, ಇನ್ನೋವಾ ಕಾರಿನಲ್ಲಿ ರಾತ್ರಿ 11.30ರ ಸುಮಾರಿಗೆ ಮನೆಗೆ ಬಂದು ಮನೆಯ ಮುಂದೆ ಕಾರು ನಿಲ್ಲಿಸಿದ್ದರು.

ಸೈಟಿನ ವ್ಯವಹಾರಕ್ಕೆಂದು ಇಟ್ಟುಕೊಂಡಿದ್ದ ₹ 4.50 ಲಕ್ಷ ಅನ್ನು ಕಾರಿನ ಒಳಗಡೆ ಬ್ಯಾಗ್‌ನಲ್ಲಿಟ್ಟು ಕಾರು ಲಾಕ್ ಮಾಡಿ ಮನೆಯ ಒಳಗೆ ಹೋಗಿದ್ದರು. ಬಟ್ಟೆ ಬದಲಿಸಿ ಪ್ಯಾಂಟ್ ಜೇಬಿನಲ್ಲಿದ್ದ ₹ 70 ಸಾವಿರ, ಸ್ಯಾಮ್ ಸಂಗ್ ಕಂಪನಿಯ 2 ಮೊಬೈಲ್, ಅದೇ ಕಂಪನಿಯ ವಾಚ್‌ ಅನ್ನು ಸೋಫಾ ಮೇಲಿಟ್ಟು ಮನೆಯ ಮೊದಲನೇ ಮಹಡಿಯಲ್ಲಿರುವ ರೂಂನಲ್ಲಿ ಮಲಗಿದ್ದರು. ಕೆಳಗಿನ ರೂಮಲ್ಲಿ ತಂದೆ ಪುಟ್ಟೇಗೌಡ, ತಾಯಿ ಗಿಡ್ಡಮ್ಮ, ಚಿಕ್ಕಮ್ಮ ಸಣ್ಣಮ್ಮ ಮಲಗಿದ್ದರು.

ADVERTISEMENT

ಮಧ್ಯರಾತ್ರಿ 2.18 ರ ಸಮಯದಲ್ಲಿ ಸ್ವಾಮೀಗೌಡ ಅವರ ತಂದೆ ಫೋನ್‌ ಮಾಡಿ, ನಾವು ಮಲಗಿದ್ದ ಕೋಣೆಯ ಬಾಗಿಲು ಲಾಕ್‌ ಆಗಿದೆ ಎಂದು ಹೇಳಿದ್ದಾರೆ. ತಕ್ಷಣ ಕೆಳಗೆ ಬಂದು ನೋಡಿದಾಗ ಮನೆಯ ಹಿಂದಿನ ಬಾಗಿಲ ಲಾಕ್ ಮುರಿದಿದ್ದು, ಬಾಗಿಲು ತೆರೆದಿತ್ತು. ಮನೆಯನ್ನು ಪರಿಶೀಲಿಸಿ ನೋಡಿದಾಗ ಕಳ್ಳರು ಮನೆಯ ಹಿಂಬದಿಯಲ್ಲಿ ಬಟ್ಟೆ ಒಣಗಿಸಲು ಕಟ್ಟಿದ್ದ ಹಗ್ಗ ಕತ್ತರಿಸಿ, ಬಾಗಿಲು ಮುರಿದು ಮನೆಯ ಒಳಗೆ ಬಂದಿದ್ದಾರೆ.

ಸೋಫಾದ ಮೇಲಿಟ್ಟಿದ್ದ ₹ 70 ಸಾವಿರ, 2 ಮೊಬೈಲ್, ₹ 25 ಸಾವಿರ ಬೆಲೆಯ ವಾಚ್ ಅನ್ನು ಕದ್ದಿರುವ ಕಳ್ಳರು, ಅಲ್ಲಿಯೇ ಇದ್ದ ಕಾರಿನ ಕೀಯನ್ನು ತೆಗೆದುಕೊಂಡಿದ್ದು, ಅದನ್ನು ಬಳಸಿ ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರು, ಅದರಲ್ಲಿಟ್ಟಿದ್ದ ₹ 4.50 ಲಕ್ಷ ನಗದು, ವಿವಿಧ ಬ್ಯಾಂಕುಗಳು ಎಟಿಎಂ, ಚೆಕ್‌ ಹಾಗೂ ಜಮೀನಿನ ದಾಖಲೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಮನೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಮಧ್ಯರಾತ್ರಿ 1 ರಿಂದ 2.10ರ ನಡುವೆ ಸುಮಾರು 4-5 ಜನ ಕಳ್ಳರು ಮನೆಯ ಬಾಗಿಲು ಮುರಿದು ಕಳವು ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ಈ ಸಂಬಂಧ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 ಸಿಂಧಿ ಹಸು ಕಳವು

ಹಾಸನ: ಬೇಲೂರು ತಾಲ್ಲೂಕಿನ ಶಿವನೇನಹಳ್ಳಿ ಗ್ರಾಮದ ದಿಲೀಪ್ ಎಂಬುವರು ಸಾಕಿದ್ದ 2 ಸಿಂಧಿ ಹಸುಗಳನ್ನು ಕಳವು ಮಾಡಲಾಗಿದೆ.

ದಿಲೀಪ್‌ 3 ಸಿಂಧಿ ಹಸುಗಳನ್ನು ಸಾಕಿಕೊಂಡಿದ್ದರು. ಇವುಗಳಲ್ಲಿ ಶೆಡ್‍ನಲ್ಲಿ ಕಟ್ಟಿದ್ದ ₹ 1.5 ಲಕ್ಷ ಮೌಲ್ಯದ ಎರಡು ಸಿಂಧಿ ಹಸುಗಳನ್ನು ಸೆ.17ರಂದು ಕಳ್ಳರು ಹೊತ್ತೊಯ್ದಿದ್ದಾರೆ. ಈ ಸಂಬಂಧ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಡಿಕ್ಕಿ: ಬೈಕ್‌ನಲ್ಲಿದ್ದ ದಂಪತಿ ಸಾವು

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ರಸ್ತೆ ಗೌರಿಕೊಪ್ಪಲಿನ ಬಳಿ ಬೈಕ್‌ಗೆ ಬಸ್ ಡಿಕ್ಕಿ ಹೊಡೆದು ಕಲಸಿಂದ ಗ್ರಾಮದ ಗವಿಗೌಡ ಮತ್ತು ಅವರ ಹೆಂಡತಿ ರೂಪಾ ಮೃತಪಟ್ಟಿದ್ದಾರೆ.

ಚನ್ನರಾಯಪಟ್ಟಣಕ್ಕೆ ಬಂದಿದ್ದ ದಂಪತಿ ಚನ್ನರಾಯಪಟ್ಟಣದಿಂದ ಊರಿಗೆ ಹೋಗಲು ಮಧ್ಯಾಹ್ನ ಬಾಗೂರು ರೋಡ್ ಗೌರಿಕೊಪ್ಪಲು ಹತ್ತಿರ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಬಾಗೂರು ಕಡೆಯಿಂದ ಚನ್ನರಾಯಪಟ್ಟಣ ಕಡೆಗೆ ಬರುತ್ತಿದ್ದ ಬಸ್‌ ಡಿಕ್ಕಿ ಹೊಡೆದಿದೆ.

ತೀವ್ರ ಗಾಯಗೊಂಡಿದ್ದ ದಂಪತಿಯನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಿಯೇ ಇಬ್ಬರು ಮೃತಪಟ್ಟಿದ್ದಾಗ ವೈದ್ಯರು ತಿಳಿಸಿದರು. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.