ADVERTISEMENT

ಹಾಸನ: 'ಅಕ್ಷರ ಬರೆಯಲು ಬಾರದವರ ಕಿತ್ತು ಹಾಕಿ'

ಪತ್ರಕರ್ತರ ಸಂಘಕ್ಕೆ ಹೊಸ ಸದಸ್ಯತ್ವ ಕೊಡಬೇಡಿ: ಪರಿಷತ್‌ ಸದಸ್ಯ ಶಿವಕುಮಾರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:31 IST
Last Updated 1 ಡಿಸೆಂಬರ್ 2025, 5:31 IST
ಹಾಸನದ ಪವನಪುತ್ರ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಸದಸ್ಯ ಕೆ. ಶಿವಕುಮಾರ್ ಉದ್ಘಾಟಿಸಿದರು.
ಹಾಸನದ ಪವನಪುತ್ರ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಸದಸ್ಯ ಕೆ. ಶಿವಕುಮಾರ್ ಉದ್ಘಾಟಿಸಿದರು.   

ಹಾಸನ: ಸಂಘದಲ್ಲಿ ಸುಮಾರು 10 ಸಾವಿರ ಸದಸ್ಯರಿದ್ದಾರೆ. ಇದೇ ಹೆಚ್ಚಾಯಿತು. ಮುಂದೆ ಹೊಸ ಸದಸ್ಯತ್ವ ಕೊಡಬೇಡಿ. ಇದೇನು ರಾಜಕೀಯ ಪಕ್ಷ ಅಲ್ಲ. ಅಕ್ಷರ ಬರೆಯಲು ಬರದವರನ್ನು ಕಿತ್ತುಹಾಕಿ. ಸಂಘಕ್ಕೆ ಕೆಟ್ಟ ಹೆಸರು ತರುವವರನ್ನು ಹೊರಹಾಕಿ. ನಾವು ಗೌರವದಿಂದ ನಡೆದರೆ ಸಮಾಜದಿಂದ ನಮಗೆ ಅಷ್ಟೇ ಗೌರವ ಸಿಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಹೇಳಿದರು.

ನಗರದ ಕೈಗಾರಿಕಾ ಪ್ರದೇಶದ ಪವನಪುತ್ರ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಾದ್ಯಂತ ಪತ್ರಕರ್ತರ ಸಮಸ್ಯೆಗಳು ಸಾಕಷ್ಟಿವೆ. ಅವುಗಳ ನಿವಾರಣೆಗೆ ಒಗ್ಗಟ್ಟು, ವಿಶ್ವಾಸ ಕಾಯ್ದುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಪತ್ರಕರ್ತರ ಸಂಘಗಳೂ ಟ್ರೇಡ್ ಯೂನಿಯನ್‍ಗಳಂತೆ ಆಗಲಿವೆ ಎಂದು ಸಲಹೆ ನೀಡಿದರು.‌

ADVERTISEMENT

‌ಗ್ರಾಮೀಣ ಪತ್ರಕರ್ತರಿಗೆ ಬಸ್‍ಪಾಸ್, ಪಿಂಚಣಿ ಇತ್ಯಾದಿ ಸೌಲಭ್ಯ ರಾಜ್ಯದೆಲ್ಲೆಡೆ ಇದೆ. ಈ ಬಗ್ಗೆ ಅಧಿವೇಶನದಲ್ಲಿ ಮಾತನಾಡಲು ಅವಕಾಶ ಕೇಳಿದ್ದೇನೆ. ಸಿಕ್ಕರೆ ಖಂಡಿತಾ ಸರ್ಕಾರದ ಗಮನಕ್ಕೆ ತರುವೆ ಎಂದು ಭರವಸೆ ನೀಡಿದರು.

ರಾಜ್ಯ ಸಂಘ ಏನೇ ತೀರ್ಮಾನ ಕೈಗೊಂಡರೂ ಜಿಲ್ಲಾ ಘಟಕಗಳು ಅದನ್ನು ಪಾಲಿಸಬೇಕು. ಒಗ್ಗೂಡಿ ನಡೆಯಿರಿ. ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಇಲ್ಲವಾದರೆ ಎಲ್ಲವೂ ಹಾಗೆಯೇ ಉಳಿಯಲಿವೆ ಎಂದರು.

ಎಲ್ಲ ಪತ್ರಕರ್ತರು ಒಂದು ಸ್ವಂತ ಸೂರು ಹೊಂದಿಸಿಕೊಳ್ಳಿ. ಮಕ್ಕಳನ್ನು ಚೆನ್ನಾಗಿ ಓದಿಸಿ ಎಂದು ಸಲಹೆ ನೀಡಿದ ಅವರು, ಸಂಘಟನೆ ಸಾಧ್ಯವಾಗಬೇಕಾದರೆ ಪತ್ರಕರ್ತರ ಚುನಾವಣೆಗಳು, ಅವಿರೋಧವಾಗಿ ಆಯ್ಕೆಯಾಗಬೇಕು. ಅಧ್ವಾನ ಆಗುವುದು ಬೇಡ ಎಂದು ಕಿವಿ ಮಾತು ಹೇಳಿದರು.

ಹಾಗೆಯೇ 20-30 ವರ್ಷ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರನ್ನು ಗೌರವ ಸದಸ್ಯರನ್ನಾಗಿ ಮಾಡಿ ಅವರಿಗೂ ಗೌರವ ಕೊಡುವ ಕೆಲಸ ಸಂಘದಿಂದ ಆಗಲಿ ಎಂದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಬಿ.ಮದನಗೌಡ ಆಶಯ ನುಡಿಗಳನ್ನು ಆಡಿದರು. ನೂತನ ಅಧ್ಯಕ್ಷರು, ಪದಾಧಿಕಾರಿಗಳಿಗೆ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಪ್ರಮಾಣ ವಚನ ಬೋಧಿಸಿದರು. ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಮಾತನಾಡಿದರು. ಜಿಲ್ಲಾ ಘಟಕದ ನೂತನ ಅಧ್ಯಕ್ಷ ಜೆ.ಆರ್.ಕೆಂಚೇಗೌಡ ಮಾತನಾಡಿದರು. ಉಪಾಧ್ಯಕ್ಷರಾದ ಮತ್ತಿಕೆರೆ ಜಯರಾಮ್, ಅಜ್ಜಮಾಡು ರಮೇಶ್ ಕುಟ್ಟಪ್ಪ, ಕಾರ್ಯದರ್ಶಿಗಳಾದ ಸೋಮಶೇಖರ ಕೆರಗೋಡು, ಪುಂಡಲೀಕ ಭೀ ಬಾಳೋಜಿ, ನಿಂಗಪ್ಪ ಚಾವಡಿ, ಖಜಾಂಚಿ ವಾಸುದೇವ ಹೊಳ್ಳ, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಎನ್.ನಂಜುಂಡೇಗೌಡ, ಜಿ.ಪ್ರಕಾಶ್, ಕಾರ್ಯದರ್ಶಿಗಳಾದ ಬಿ.ಆರ್.ಬೊಮ್ಮೇಗೌಡ, ಕೆ.ಎಂ.ಹರೀಶ್, ಕುಶ್ವಂತ್, ಖಚಾಂಚಿ ಪ್ರಕಾಶ್ ಬೆಳವಾಡಿ, ಮಾಜಿ ಅಧ್ಯಕ್ಷರಾದ ರವಿ ನಾಕಲಗೂಡು, ಬಿ.ಆರ್.ಉದಯಕುಮಾರ್, ಬಾಳ್ಳುಗೋಪಾಲ್, ಚೌಡುವಳ್ಳಿ ಜಗದೀಶ್, ಉದಯರವಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.

ರಾಜ್ಯ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರವಿಕುಮಾರ್ ಎನ್. ಟೆಲೆಕ್ಸ್ ಹಾಗೂ ಡಿ.ಜಿ.ರಾಜ್‍ಗೋಪಾಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆಪಿಎಸ್ ಪ್ರಮೋದ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.