ADVERTISEMENT

ಹಾಸನ | ವಿಭಜಿಸುವ ಸಮಾವೇಶಗಳ ಅಗತ್ಯವಿಲ್ಲ: ಚ್.ಎಲ್. ಮಲ್ಲೇಶಗೌಡ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 4:37 IST
Last Updated 2 ಫೆಬ್ರುವರಿ 2026, 4:37 IST
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ನಡೆದ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಎಚ್‌.ಎಲ್‌. ಮಲ್ಲೇಶಗೌಡ ಉದ್ಘಾಟಿಸಿದರು
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ನಡೆದ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಎಚ್‌.ಎಲ್‌. ಮಲ್ಲೇಶಗೌಡ ಉದ್ಘಾಟಿಸಿದರು   

ಹಾಸನ: ಇಂದಿನ ಸಮಾಜಕ್ಕೆ ಅಹಿಂದ ಅಥವಾ ಹಿಂದೂ ಸಮಾವೇಶಗಳ ಅವಶ್ಯಕತೆ ಇಲ್ಲ. ಜನರನ್ನು ವಿಭಜಿಸುವ ಯಾವುದೇ ಸಮಾವೇಶಗಳಿಗೂ ಅರ್ಥವಿಲ್ಲ. ಭೂಮಿಯನ್ನು ಉಳಿಸಿ, ಕಾಪಾಡಿ, ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಒಪ್ಪಿಸುವ ಚಿಂತನೆಯ ಸಮಾವೇಶಗಳು ಮಾತ್ರ ಹೆಚ್ಚಾಗಿ ನಡೆಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್. ಮಲ್ಲೇಶಗೌಡ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಪಿಯು ಕಾಲೇಜುಗಳ ಕನ್ನಡ ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕಗಳ ಆಶ್ರಯದಲ್ಲಿ ಭಾನುವಾರ ನಡೆದ ‘ನೆಲದನಿಗೆ ಹಸಿರು ಕೌದಿ (ಕೃಷಿ, ಅರಣ್ಯ, ರೈತರ ಆಶಾಕಿರಣ)’ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಕೆ.ಎಸ್. ಹರಶಿವಮೂರ್ತಿ ಮತ್ತು ನಿವೃತ್ತ ಉನ್ನತ ಅರಣ್ಯಾಧಿಕಾರಿ ಎಚ್.ಜಿ. ಶಿವಾನಂದಮೂರ್ತಿ ಅವರ ಸಂಯುಕ್ತ ಲೇಖನಿಯಿಂದ ರೂಪುಗೊಂಡ ಈ ಕೃತಿ ಅಪಾರ ಅಧ್ಯಯನ, ಬದುಕಿನ ಅನುಭವ ಹಾಗೂ ವೈಜ್ಞಾನಿಕ ದೃಷ್ಟಿಕೋನ ಒಳಗೊಂಡಿದೆ. ಕೃಷಿ, ಅರಣ್ಯ ಮತ್ತು ರೈತರ ಬದುಕಿನ ನಡುವಿನ ಆಳವಾದ ಸಂಬಂಧವನ್ನು ರಾಷ್ಟ್ರೀಯ ಅಂಕಿ ಅಂಶಗಳ ಮೂಲಕ ವಿಶ್ಲೇಷಿಸಿರುವುದು ಕೃತಿಯ ವಿಶೇಷತೆ ಎಂದು ಹೇಳಿದರು.

ADVERTISEMENT

‘ನೆಲದವ್ವ’ ಎಂಬ ಪದ ಭಾವನಾತ್ಮಕವಾದರೂ ವೈಜ್ಞಾನಿಕ ಸತ್ಯವನ್ನೇ ಪ್ರತಿಬಿಂಬಿಸುತ್ತದೆ. ಭೂಮಿಗೆ ಹೊದಿಸಬೇಕಾದದ್ದು ಹಸಿರು ಕೌದಿ, ಕಾಂಕ್ರೀಟ್ ಅಲ್ಲ ಎಂಬ ಸಂದೇಶ ಈ ಕೃತಿಯಲ್ಲಿ ಅಡಗಿದೆ ಎಂದು ತಿಳಿಸಿದರು.

‘ಆಧುನಿಕತೆಯ ಹೆಸರಿನಲ್ಲಿ ಭೂಮಿಯನ್ನು ಕ್ರೂರವಾಗಿ ಶೋಷಿಸಲಾಗುತ್ತಿದೆ. ಸಹಸ್ರಾರು ವರ್ಷಗಳಲ್ಲಿ ಉಳಿದುಕೊಂಡು ಬಂದ ಭೂಮಿಯ ಸ್ವಚ್ಛತೆ ಮತ್ತು ಸ್ವಸ್ಥತೆಯನ್ನು 5–6 ದಶಕಗಳಲ್ಲಿ ನಾವು ಹಾಳು ಮಾಡಿದ್ದೇವೆ. ಇಂತಹ ಸಂದರ್ಭದಲ್ಲಿ ರಾಜಕೀಯ, ಜಾತಿ ಅಥವಾ ಧರ್ಮದ ಸಮಾವೇಶಗಳಿಗಿಂತ ಭೂಮಿಯನ್ನು ಹೇಗೆ ಉಳಿಸಬೇಕು, ಕೃಷಿಯನ್ನು ಹೇಗೆ ರಕ್ಷಿಸಬೇಕು? ಆಹಾರ ಸಂಕಷ್ಟವನ್ನು ಹೇಗೆ ತಪ್ಪಿಸಬೇಕು ಎಂಬ ಚಿಂತನೆಯೇ ಮುಖ್ಯ. ಈ ಕೃತಿ ಸಮಸ್ಯೆಗಳ ಜೊತೆಗೆ ಪರಿಹಾರಗಳನ್ನೂ ನೀಡುವ ಮೂಲಕ ಸಮಾಜದ ಕಣ್ಣು ತೆರೆಸುತ್ತದೆ’ ಎಂದು ಹೇಳಿದರು.

ಸಾಹಿತಿಗಳಾದ ತಿರುಪತಿಹಳ್ಳಿ ಶಿವಶಂಕರಪ್ಪ, ಜಿಲ್ಲಾ ಪದವಿಪೂರ್ವ ಪ್ರಾಂಶುಪಾಲರ ವೇದಿಕೆ ಅಧ್ಯಕ್ಷ ಎನ್.ವಿ. ಗಿರೀಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಗೌರವಾಧ್ಯಕ್ಷ ಉಮೇಶ್ ಹೊಸಹಳ್ಳಿ, ನಿವೃತ್ತ ಪ್ರಧಾನ ಮುಖ್ಯ ಅರಣ್ಯಾಧಿಕಾರಿ ಎಚ್.ಜಿ. ಶಿವಾನಂದಮೂರ್ತಿ, ಸಾಹಿತಿ ಡಾ. ಕೆ.ಎಸ್. ಹರಶಿವಮೂರ್ತಿ, ಸುರೇಶ್ ಉಪಸ್ಥಿತರಿದ್ದರು.

ಕೃಷಿ ಅರಣ್ಯ ಮತ್ತು ರೈತರ ಬದುಕಿನ ಸಂಬಂಧವನ್ನು ಸರಳ ಭಾಷೆಯಲ್ಲಿ ವಿವರಿಸಿರುವುದು ಈ ಕೃತಿಯ ವೈಶಿಷ್ಟ್ಯ. ಪೌರಾಣಿಕ ವೈಜ್ಞಾನಿಕ ಮತ್ತು ಸಮಕಾಲೀನ ದೃಷ್ಟಿಕೋನ ಒಟ್ಟುಗೂಡಿಸಿ ಸಮಾಜಕ್ಕೆ ಎಚ್ಚರಿಕೆ ಸಂದೇಶ ನೀಡಲಾಗಿದೆ
ಎಚ್.ಪಿ. ಮೋಹನ್ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಭಾಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.