ADVERTISEMENT

ಹಾಸನ: ಅರಣ್ಯ ಅಧಿಸೂಚನೆ ಪುನರ್‌ ಜಾರಿಗೆ ಗ್ರಾಮಸ್ಥರ ವಿರೋಧ

ಮಾಜಿ ಶಾಸಕರ ನೇತೃತ್ವದಲ್ಲಿ ಗ್ರಾಮಸ್ಥರ ಪ್ರತಿಭಟನೆ: ಪ್ರಸ್ತಾವ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 5:57 IST
Last Updated 16 ಡಿಸೆಂಬರ್ 2025, 5:57 IST
ಸಕಲೇಶಪುರ ತಾಲ್ಲೂಕಿನ 8 ಗ್ರಾಮಗಳ ಜನರು ಮಾಜಿ ಶಾಸಕರಾದ ಎಚ್‌.ಎಂ.ವಿಶ್ವನಾಥ್‌, ಎಚ್‌.ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ಸೋಮವಾರ ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು 
ಸಕಲೇಶಪುರ ತಾಲ್ಲೂಕಿನ 8 ಗ್ರಾಮಗಳ ಜನರು ಮಾಜಿ ಶಾಸಕರಾದ ಎಚ್‌.ಎಂ.ವಿಶ್ವನಾಥ್‌, ಎಚ್‌.ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ಸೋಮವಾರ ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು    

ಹಾಸನ: ಶತಮಾನಗಳ ಹಿಂದೆ ಕೈಬಿಡಲಾದ ಸಕಲೇಶಪುರ ತಾಲ್ಲೂಕಿನ ಮೂರ್ಕಣ್ಣು ಗುಡ್ಡ ಪ್ರದೇಶದ ಅರಣ್ಯ ಅಧಿಸೂಚನೆಯನ್ನು ಪುನಃ ಜಾರಿಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ನೂರಾರು ಗ್ರಾಮಸ್ಥರು ಮಾಜಿ ಶಾಸಕರಾದ ಎಚ್.ಎಂ. ವಿಶ್ವನಾಥ್ ಮತ್ತು ಎಚ್.ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮಾತನಾಡಿ, 1920ರಲ್ಲಿ ಮೈಸೂರು ಅರಣ್ಯ ನಿಯಂತ್ರಣ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಮೂರ್ಕಣ್ಣು ಗುಡ್ಡ ಅರಣ್ಯ ಪ್ರದೇಶವನ್ನು ಕಾಯ್ದಿರಿಸುವ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಈ ಪ್ರದೇಶ ಮರಗಳಿಲ್ಲದ ಹುಲ್ಲುಗಾವಲು ಬಯಲು ಪ್ರದೇಶವಾಗಿದ್ದು, ಅರಣ್ಯ ಸಂರಕ್ಷಣೆಗೆ ಅಸಮರ್ಪಕವಾಗಿದೆ. ಜೊತೆಗೆ ಗ್ರಾಮಸ್ಥರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂಬ ಕಾರಣದಿಂದ, ಅರಣ್ಯ ಸಂರಕ್ಷಣಾಧಿಕಾರಿಗಳ ಶಿಫಾರಸಿನ ಮೇರೆಗೆ ಸರ್ಕಾರವು 1924ರ ಜನವರಿಯಲ್ಲಿ ಈ ಪ್ರಸ್ತಾವವನ್ನು ಸಂಪೂರ್ಣ ಕೈಬಿಟ್ಟಿತ್ತು ಎಂಬುದು ದಾಖಲೆಗಳಿಂದ ತಿಳಿದುಬರುತ್ತದೆ ಎಂದು ಹೇಳಿದರು.

ಆದರೆ, ಅಂದು ಸರ್ಕಾರದಿಂದಲೇ ರದ್ದುಗೊಳಿಸಲಾದ ಈ ಪ್ರಸ್ತಾವವನ್ನು ಸುಮಾರು 100 ವರ್ಷಗಳ ನಂತರ, ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 17ರ ಅಡಿಯಲ್ಲಿ ಮತ್ತೆ ಜಾರಿಗೊಳಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದ್ದು, ಗ್ರಾಮಸ್ಥರು ವಿರೋಧಿಸಿದ್ದಾರೆ. ಶತಮಾನದ ನಂತರ ಇಂತಹ ಕ್ರಮ ಕೈಗೊಳ್ಳುವುದು ಕಾನೂನಿನ ಮೂಲತತ್ವಗಳಿಗೆ ವಿರುದ್ಧವಾಗಿದೆ. ಸಂಪೂರ್ಣವಾಗಿ ಅಸಮಂಜಸ ಹಾಗೂ ಅನ್ಯಾಯಕರ ಎಂದು ದೂರಿದರು.

ADVERTISEMENT

ಕೃಷಿ, ತೋಟಗಾರಿಕೆ ಮಾಡುತ್ತ ಬದುಕುತ್ತಿರುವ ಭೂಮಿಯನ್ನು ನಮಗೇ ಬಿಟ್ಟು ಕೊಡಬೇಕು. ಜಿಲ್ಲಾಧಿಕಾರಿಗೆ ಮನವಿ ಕೊಟ್ಟ ಮೇಲೆ ಅರಣ್ಯ, ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.

ಬೆಳೆಗಾರರ ಸಂಘದ ಉಪಾಧ್ಯಕ್ಷ ಹಾನುಬಾಳು ಭಾಸ್ಕರ್, ಚಂದ್ರೇಗೌಡ, ರಾಜು, ಹರೀಶ್ ಹಾನ್ಯಾಳು, ಎಚ್.ಪಿ. ಮೋಹನ್, ಅನಿಲ್, ಮಂಜುನಾಥ್,  ಅಣ್ಣೆಗೌಡ, ವಿಕ್ರಂ ತೋಟದಗದ್ದೆ ಭಾಗವಹಿಸಿದರು.

Highlights - 1924ರ ಜನವರಿಯಲ್ಲಿ ಪ್ರಸ್ತಾವ ಕೈಬಿಟ್ಟಿದ್ದ ಅಂದಿನ ಸರ್ಕಾರ 100 ವರ್ಷಗಳ ನಂತರ ಪ್ರಸ್ತಾವ ಮರು ಜಾರಿಗೆ ಮುಂದಾದ ಸರ್ಕಾರ ಕೃಷಿ, ತೋಟಗಾರಿಕೆ ಮಾಡುತ್ತಿರುವ ಭೂಮಿಯನ್ನು ಬಿಟ್ಟುಕೊಡಲು ಆಗ್ರಹ

Quote - ಶತಮಾನಗಳಿಂದ ಭೂಮಿಯನ್ನು ಉಳುಮೆ ಮಾಡಿಕೊಂಡು ಬರುತ್ತಿರುವ ಕಾಫಿ ಬೆಳೆಗಾರರು ರೈತರನ್ನು ಸಂಕಷ್ಟಕ್ಕೆ ದೂಡುವ ಇಂತಹ ಕ್ರಮ ಖಂಡನೀಯ. ಮನವಿಗೆ ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು. ಎಚ್.ಕೆ. ಕುಮಾರಸ್ವಾಮಿ ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.