
ಹಾಸನ: ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ನಗರದ ಎಪಿಎಂಸಿ ಆವರಣದಲ್ಲಿ ಆರಂಭಿಸಲಾಗಿರುವ ರಾಗಿ ಖರೀದಿ ಕೇಂದ್ರಕ್ಕೆ ಗುರುವಾರ ಶಾಸಕ ಸ್ವರೂಪ್ ಪ್ರಕಾಶ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಭತ್ತ ಹಾಗೂ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯೊಂದಿಗೆ ಖರೀದಿ ಮಾಡುವ ಉದ್ದೇಶದಿಂದ ಖರೀದಿ ಕೇಂದ್ರವನ್ನು ತೆರೆಯಲಾಗಿದೆ. ಸರ್ಕಾರದ ವತಿಯಿಂದ ರಾಗಿ ಪ್ರತಿ ಕ್ವಿಂಟಲ್ ರಾಗಿಗೆ ₹4,886 ಹಾಗೂ ಭತ್ತಕ್ಕೆ ₹2,369 ಕನಿಷ್ಠ ಬೆಲೆ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
ಹಾಸನ ತಾಲ್ಲೂಕಿನಲ್ಲಿ ಈಗಾಗಲೇ 1,225 ರೈತರು ನೋಂದಣಿ ಮಾಡಿಕೊಂಡಿದ್ದು, ಸುಮಾರು 32,641 ಕ್ವಿಂಟಲ್ ಖರೀದಿ ಗುರಿ ಹೊಂದಲಾಗಿದೆ. ಇನ್ನೂ ನೋಂದಣಿ ಮಾಡಿಸದ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ತಾವು ಬೆಳೆದ ಭತ್ತ ಮತ್ತು ರಾಗಿಯನ್ನು ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಬೇಕು ಎಂದು ಮನವಿ ಮಾಡಿದರು.
ಒಬ್ಬ ರೈತರಿಂದ ಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ ಐದು ಎಕರೆವರೆಗೆ 50 ಕ್ವಿಂಟಲ್ ಖರೀದಿ ಮಾಡಲಾಗುವುದು. ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ನೇರವಾಗಿ ಖರೀದಿಸುವ ಧಾನ್ಯಗಳನ್ನು ಸರ್ಕಾರದ ಅನ್ನಭಾಗ್ಯ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ. ಇದರಿಂದ ರೈತರಿಗೆ ನೇರ ಲಾಭವಾಗಲಿದ್ದು, ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರೈತರು ತಮ್ಮ ಫ್ರೂಟ್ ಐಡಿ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ನಕಲಿನೊಂದಿಗೆ ಸಂಬಂಧಪಟ್ಟ ನೋಂದಣಿ ಅಥವಾ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಸಬೇಕು. ನೋಂದಾಯಿತ ರೈತರಿಂದ ಮಾತ್ರ ರಾಗಿ, ಭತ್ತ ಹಾಗೂ ಕಿರು ಸಿರಿಧಾನ್ಯಗಳನ್ನು ಖರೀದಿಸಲಾಗುತ್ತದೆ ಎಂದರು.
ನೋಂದಣಿ ಬಳಿಕ ಕಂಪ್ಯೂಟರ್ ರಶೀದಿ ಪಡೆಯುವುದು ಕಡ್ಡಾಯ. ಧಾನ್ಯ ಮಾರಾಟ ಮಾಡಿದ ತಕ್ಷಣ ಕಂಪ್ಯೂಟರ್ ಬಿಲ್ ಪಡೆಯಬೇಕು ಎಂದು ಸೂಚಿಸಲಾಗಿದೆ.
ಯಾವುದೇ ಮಧ್ಯವರ್ತಿಗಳ ಮೂಲಕ ಧಾನ್ಯ ಮಾರಾಟ ಮಾಡಬಾರದು ಹಾಗೂ ತಮ್ಮ ದಾಖಲೆಗಳನ್ನು ಇತರರಿಗೆ ನೀಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತದೆ. ಕಳಪೆ ಗುಣಮಟ್ಟದ ಧಾನ್ಯಗಳನ್ನು ಸ್ವೀಕರಿಸಲಾಗುವುದಿಲ್ಲ. ಸಾರ್ವಜನಿಕ ವಿತರಣೆ ವ್ಯವಸ್ಥೆಗೆಉತ್ತಮ ಗುಣಮಟ್ಟದ ಧಾನ್ಯ ಒದಗಿಸುವಂತೆ ರೈತರಿಗೆ ಮನವಿ ಮಾಡಿದರು.
ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಎಪಿಎಂಸಿ ಮಾರುಕಟ್ಟೆಯ ಮಧು, ದೇವರಾಜು, ರಾಗಿ ಸಾಮಣ್ಣ, ಆನಂದ್ ಇದ್ದರು.
ರೈತರು ನೋಂದಣಿ ಮಾಡಿಸಿ ರಾಗಿ ಮಾರಾಟ ಮಾಡಿ ಮಾರಾಟ ಮಾಡಿದ ತಕ್ಷಣ ತಪ್ಪದೇ ಬಿಲ್ ಪಡೆಯಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.