ADVERTISEMENT

ರಾಜಾಜಿನಗರ | ಮದ್ಯದ ಅಂಗಡಿಗೆ ವಿರೋಧ: ಗ್ರಾಮಸ್ಥರು, ಮಹಿಳೆಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 1:57 IST
Last Updated 19 ಸೆಪ್ಟೆಂಬರ್ 2025, 1:57 IST
ಹಾಸನದ ರಾಜಾಜಿನಗರದಲ್ಲಿ ಗುರುವಾರ ಮಹಿಳೆಯರು ಪ್ರತಿಭಟನೆ ನಡೆಸಿದರು
ಹಾಸನದ ರಾಜಾಜಿನಗರದಲ್ಲಿ ಗುರುವಾರ ಮಹಿಳೆಯರು ಪ್ರತಿಭಟನೆ ನಡೆಸಿದರು   

ಹಾಸನ: ಇಲ್ಲಿನ ರಾಜಾಜಿನಗರದಲ್ಲಿ ನೂತನವಾಗಿ ತೆರೆಯಲಾಗುತ್ತಿರುವ ಮದ್ಯದ ಅಂಗಡಿಯ ವಿರುದ್ಧ ಸುತ್ತಲಿನ ಗ್ರಾಮಸ್ಥರು, ಮಹಿಳೆಯರು ಹಾಗೂ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮಹಿಳೆಯರು, ನಗರದ ಚಿಕ್ಕ ಹೊನ್ನೇನಹಳ್ಳಿ ವ್ಯಾಪ್ತಿಗೆ ಸೇರಿದ ರಾಜಾಜಿನಗರ ಬಡಾವಣೆ ವೃತ್ತದಲ್ಲಿ ನೂತನ ಮದ್ಯದ ಅಂಗಡಿ ತೆರೆಯಲು ಉದ್ದೇಶಿಸಲಾಗಿದ್ದು, ನಮ್ಮ ತೀವ್ರ ವಿರೋಧವಿದೆ ಎಂದರು.

ಈ ಬಡಾವಣೆಯಲ್ಲಿ ಈಗಾಗಲೇ ನೂರಾರು ಮನೆಗಳು ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಣಲಿದೆ. ಬಡಾವಣೆಗೆ ಹೊಂದಿಕೊಂಡ ವೃತ್ತದಿಂದ ದೊಡ್ಡ ಕೊಂಡಗುಳ, ಯಡಿಯೂರು, ದಾಸರಕೊಪ್ಪಲು, ಹರಳಹಳ್ಳಿ ಹಾಗೂ ಹಾಸನ ನಗರದ ಕಡೆಗೆ ಹೋಗುವ ಐದು ಸಂಪರ್ಕ ರಸ್ತೆಯ ಮಾರ್ಗಗಳಿದ್ದು, ನಿತ್ಯ ಸಾವಿರಾರು ವಾಹನಗಳು, ಸಾರ್ವಜನಿಕರು, ವಿದ್ಯಾರ್ಥಿಗಳು, ವಯೋವೃದ್ದರು ಓಡಾಡುತ್ತಾರೆ ಎಂದು ಹೇಳಿದರು.

ADVERTISEMENT

ಈ ವೃತ್ತಕ್ಕೆ ಹೊಂದಿಕೊಂಡಂತೆ ಶಾಲೆಯೂ ಇದ್ದು, ಕೇಂದ್ರ ಸರ್ಕಾರದ ಎಂಸಿಎಫ್ (ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ) ಸಿಬ್ಬಂದಿ, ವಿಜ್ಞಾನಿಗಳು, ಅಧಿಕಾರಿಗಳ ನೂರಾರು ವಸತಿ ಗೃಹಗಳು ಇವೆ. ಈ ಬಡಾವಣೆಗೆ ಹೊಂದಿಕೊಂಡಿರುವ ಇತರ ಬಡಾವಣೆಗಳಲ್ಲಿಯೂ ನಿವೃತ್ತ ಸರ್ಕಾರಿ ನೌಕರರು, ಅರೆ ಸರ್ಕಾರಿ ನೌಕರರು ಸೇರಿದಂತೆ ನಾಗರಿಕರು ವಾಸವಾಗಿದ್ದು, ಇಲ್ಲಿ ಮದ್ಯದ ಅಂಗಡಿ ಬೇಡ ಎಂದು ಮನವಿ ಮಾಡಿದರು.

ಮದ್ಯದ ಅಂಗಡಿ ತೆರೆದರೆ ಬಡಾವಣೆಯ ಸುತ್ತಲಿನ ಗ್ರಾಮಗಳ ನಿವಾಸಿಗಳಿಗೆ ತೊಂದರೆ ಆಗಲಿದ್ದು, ಬಡಾವಣೆ ಹಾಗೂ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಲಿದ್ದು, ಅನುಮತಿ ನೀಡಬಾರದು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಸಂಘದ ಪದಾಧಿಕಾರಿಗಳಾದ ಬಸವರಾಜು, ಲಿಂಗರಾಜು, ಧರ್ಮರಾಜು, ಟಿ.ಕೆ. ಮಂಜುನಾಥ, ಬೀರೇಗೌಡ, ಜಯಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.