ADVERTISEMENT

ಹಾಸನಾಂಬೆ ದೇವಿಯ ಹಿರಿಯ ಸಹೋದರಿ ಕೆಂಚಾಂಬಿಕೆ ದೇವಿಯ ಚಿಕ್ಕ ಜಾತ್ರೆ 26ಕ್ಕೆ

ಎಂ.ಪಿ.ಹರೀಶ್
Published 24 ಅಕ್ಟೋಬರ್ 2025, 4:23 IST
Last Updated 24 ಅಕ್ಟೋಬರ್ 2025, 4:23 IST
 ಕೆಂಚಾಂಬಿಕೆ ದೇವಸ್ಥಾನ 
 ಕೆಂಚಾಂಬಿಕೆ ದೇವಸ್ಥಾನ    

ಆಲೂರು: ಹಾಸನಾಂಬ ದೇವಿ ಜಾತ್ರೆ ಮುಗಿದ ನಂತರ, ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶಕ್ತಿದೇವತೆ ಹಾಸನಾಂಬೆ ದೇವಿಯ ಹಿರಿಯ ಸಹೋದರಿ ಕೆಂಚಾಂಬಿಕೆ ದೇವಿಯ ಚಿಕ್ಕ ಜಾತ್ರೆ ಅ. 26ರಂದು ನಡೆಯಲಿದೆ.

ಶನಿವಾರ ಸಂಜೆ ಮೂಲ ದೇವಸ್ಥಾನದಲ್ಲಿ ಸಪ್ತಮಾತೃಕಾ ಅಲಂಕಾರ, ಉದ್ವಾರ್ಚನೆ ಸುಗ್ಗಿ ಕಾರ್ಯಕ್ರಮ ನಡೆಯುತ್ತದೆ. ಭಾನುವಾರ ಬೆಳಿಗ್ಗೆ 9.30 ಗಂಟೆಗೆ ದೇವಸ್ಥಾನದ ಬಳಿ ಜಾತ್ರೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ. ಮಧ್ಯಾಹ್ನ 2.30 ಕ್ಕೆ ಸರಿಯಾಗಿ ಕೆಂಡೋತ್ಸವ ನೆರವೇರಲಿದೆ. ದೇವಸ್ಥಾನದ ಮುಂಭಾಗ ಬಲಿಅನ್ನ ಹಾಕಲಾಗುವುದು. ಮಹಾ ಮಂಗಳಾರತಿ ಬಳಿಕ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಸಪ್ತಮಾತೃಕೆಯರಲ್ಲಿ ಹಿರಿಯ ಸಹೋದರಿ ಕೆಂಚಾಂಬಿಕೆ ದೇವಿ ಹಾಸನಾಂಬೆ ದೇವಸ್ಥಾನದಲ್ಲಿ ನಡೆಯುವ ಕಟ್ಟುಪಾಡುಗಳಿಗೆ ಇವರು ಸೇರಿರುತ್ತಾರೆ.

ಜಾತ್ರೆ ಸಂದರ್ಭದಲ್ಲಿ ಹಾಸನಾಂಬ ದೇವಿ ದೇವಸ್ಥಾನದ ಅರ್ಚಕರು ಬಂದು ಉತ್ಸವದಲ್ಲಿ ಭಾಗವಹಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ವಿಶೇಷವೆಂದರೆ ಜಾತ್ರೆ ದಿನದಂದು ಮಹಾ ಮಂಗಳಾರತಿ ನಂತರ ಪ್ರತಿಯೊಬ್ಬ ಭಕ್ತರಿಗೂ ದೇವಿ ಪಾದವನ್ನು ಮುಟ್ಟಿ ನಮಸ್ಕರಿಸಲು ರಾತ್ರಿ 10 ರವರೆಗೆ ಅವಕಾಶವಿದೆ. ರಾತ್ರಿ 10 ರ ನಂತರ ದೇವಾಲಯದ ಹೊರ ವಲಯದಲ್ಲಿ ಯಾರೂ ತಿರುಗಾಡುವಂತಿಲ್ಲ. ತಿರುಗಾಡಿದರೆ ಅಮ್ಮನವರ ಶಾಪಕ್ಕೆ ತುತ್ತಾಗುತ್ತಾರೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದು ಬಂದಿದೆ.

ADVERTISEMENT

ಜಾತ್ರೆ ನಂತರ ಅ. 27 ರಿಂದ ನ. 1 ರ ವರೆಗೆ ಒಂದು ವಾರ ದೇವಸ್ಥಾನದ ಬಾಗಿಲು ತೆರೆಯುವುದಿಲ್ಲ. ನ. 2ರಂದು ಬಾಗಿಲು ತೆರೆಯಲಿದೆ.

ಕಾಡಾನೆ ಹಾವಳಿ ಪ್ರದೇಶದಲ್ಲಿ ಕೆಂಚಾಂಬಿಕೆ ದೇವಿ ದೇವಸ್ಥಾನ ಇರುವುದರಿಂದ ಭಕ್ತರು ತಿರುಗಾಡಲು ಭಯಭೀತರಾಗಿದ್ದಾರೆ. ದೇವಸ್ಥಾನದ ವಲಯದಲ್ಲಿ ಕಾಡಾನೆಗಳಿದ್ದರೆ ಸೂಕ್ತ ರಕ್ಷಣೆಯೊಂದಿಗೆ ಭಕ್ತರಿಗೆ ಮುಂಜಾಗ್ರತೆಯಾಗಿ ಅರಣ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತ ಆಗಾಗ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಲು ಸಜ್ಜಾಗಿದೆ.

‘ಪ್ರಸಕ್ತ ವರ್ಷದಲ್ಲಿ ಹಾಸನಾಂಬೆ ದೇವಿ ಜಾತ್ರೆ ಸಂದರ್ಭದಲ್ಲಿ ಜಿಲ್ಲಾಡಳಿತ ವಿಶೇಷ ಪ್ಯಾಕೇಜ್ ಮೂಲಕ ತಾಲ್ಲೂಕಿನ ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ವ್ಯವಸ್ಥೆ ಕಲ್ಪಿಸಿದ್ದು ಸಂತಸವಾಗಿದೆ. ಭಕ್ತರಿಗೆ ಹಾಸನದಲ್ಲಿ ವರ್ಷಕ್ಕೊಮ್ಮೆ ಹಾಸನಾಂಬೆ ದೇವಿ ದರ್ಶನ ಮಾಡಲು ಮಾತ್ರ ಅವಕಾಶವಿದೆ. ಆದರೆ ಕೆಂಚಾಂಬಿಕೆ ದೇವಿ ಜಾತ್ರೆ ಸಂದರ್ಭದಲ್ಲಿ ದೇವಿಯ ಪಾದ ಮುಟ್ಟಿ ನಮಸ್ಕರಿಸಲು ಪ್ರತಿಯೊಬ್ಬ ಭಕ್ತರಿಗೆ ಇಲ್ಲಿ ಅವಕಾಶವಿದೆ. ಪ್ರವಾಸೋದ್ಯಮ ಇಲಾಖೆ ಇಂತಹ ಐತಿಹಾಸಿಕ ದೇವಾಲಯಗಳನ್ನು ಗಮನಹರಿಸಿ ಪ್ರವಾಸಿಗರ ಆಕರ್ಷಣೆಗೆ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು’ ಎಂದು ಕೆಂಚಾಂಬಿಕೆ ದೇವಿ ದೇವಸ್ಥಾನದ  ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಚ್. ಡಿ. ರಘು ಮನವಿ ಮಾಡಿದ್ದಾರೆ.

ಕೆಂಚಾಂಬಿಕೆ ದೇವರ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಾತ್ರೆ ಸಂದರ್ಭದಲ್ಲಿ ಸುಮಾರು 20 ಸಾವಿರ ಭಕ್ತರನ್ನು ನಿರೀಕ್ಷಿಸಲಾಗಿದ್ದು ಭಕ್ತರು ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮನವಿ ಮಾಡಲಾಗಿದೆ.
– ಮಲ್ಲಿಕಾರ್ಜುನ, ತಹಶೀಲ್ದಾರ್ ಆಲೂರು

ದೇವಸ್ಥಾನದ ಐತಿಹಾಸಿಕ ಹಿನ್ನೆಲೆ

ಸಪ್ತಮಾತೃಕೆಯರಾದ ಬ್ರಾಹ್ಮೀ(ಕೆಂಚಾಂಬಿಕೆ) ಕೆ. ಹೊಸಕೋಟೆಯಲ್ಲಿ ಮಾಹೇಶ್ವರಿ ಕೋಮಾರಿ ವೈಷ್ಣವಿ ಹಾಸನಾಂಬ ದೇವಸ್ಥಾನದಲ್ಲಿ ಮತ್ತು ವಾರಾಹಿ ಇಂದ್ರಾಣಿ ಚಾಮುಂಡಿ ದೇವಿಯರು ದೇವಿಗೆರೆಯಲ್ಲಿ ನೆಲೆಸಿದ್ದಾರೆ. ಈ ಸಹೋದರಿಯರು ಸುಮಾರು 1200 ವರ್ಷಗಳ ಹಿಂದೆ ವಾಯು ವಿಹಾರಕ್ಕೆಂದು ಇಂದಿನ ಕಾಶಿ ಕ್ಷೇತ್ರವಾದ ವಾರಣಾಸಿಯಿಂದ ದಕ್ಷಿಣದ ಕಡೆಗೆ ಹೊರಟರು ಎಂದು ಪುರಾಣ ಹೇಳುತ್ತದೆ.

ದಾರಿಯಲ್ಲಿ ರಕ್ತಬೀಜಾಸುರ ಎಂಬ ರಾಕ್ಷಸ ಇವರನ್ನು ಅಡ್ಡಗಟ್ಟುತ್ತಾನೆ. ಆಗ ಋಷಿ–ಮುನಿಗಳು ಸಹೋದರಿಯರಿಗೆ ಹೇಳುತ್ತಾರೆ. ‘ಇವನು ಮಹಿಷಾಸುರನ ತಮ್ಮ. ಇವನ ಒಂದು ತೊಟ್ಟು ರಕ್ತ ಭೂಮಿಗೆ ಬಿದ್ದರೆ ಸಾವಿರ ಜನ ರಾಕ್ಷಸರು ಹುಟ್ಟುತ್ತಾರೆ. ಇವನ ಸಂಹಾರ ಮಾಡಬೇಕು’ ಎಂದು ಹೇಳುತ್ತಾರೆ. ಆಗ ಕೆಂಚಾಂಬಿಕೆ ತನ್ನ ನಾಲಿಗೆಯನ್ನು ಭೂ ಮಂಡಲಕ್ಕೆ ಹಾಸಿಕೊಂಡು ರಕ್ತಬೀಜಾಸುರನನ್ನು ಸಂಹಾರ ಮಾಡಿ ರಕ್ತ್ತ ಕುಡಿದು ಹುತ್ತದ ರೂಪದಲ್ಲಿ ನೆಲೆಸುತ್ತಾಳೆ.

ಉಳಿದ ಸಹೋದರಿಯರು ಮುಂದೆ ಸಾಗುವಾಗ ಸಿಂಹಾಸನಪುರಿ ಚನ್ನಪಟ್ಟಣ ಪಾಳೇಗಾರ ಕೃಷ್ಣಪ್ಪನಾಯಕ ಎಂಬ ಅರಸನು ಕಾರ್ಯನಿಮಿತ್ತ ಪ್ರಯಾಣಕ್ಕೆ ಹೊರಟಾಗ ಮೊಲವೊಂದು ಅಡ್ಡ ಬಂತು. ಇದನ್ನು ಅಪಶಕುನ ಎಂದು ಭಾವಿಸುತ್ತಾನೆ. ಆಗ ಪ್ರತ್ಯಕ್ಷಳಾದ ಆದಿಶಕ್ತಿಯರು ಇಲ್ಲಿ ದೇಗುಲ ನಿರ್ಮಾಣ ಮಾಡು. ನಾವು ಮೂವರು ಸಹೋದರಿಯರು ಹುತ್ತದ ರೂಪದಲ್ಲಿ ಹಾಸನಾಂಬೆಯಾಗಿ ಇಲ್ಲಿ ನೆಲೆಸುತ್ತೇವೆ ಎಂದರಂತೆ. ದೇವಿಕೆರೆಯಲ್ಲಿ ವಾರಾಹಿ ಇಂದ್ರಾಣಿ ಚಾಮುಂಡಿ ನೆಲೆಸಿದರು ಎಂದು ಇತಿಹಾಸ ಹೇಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.