ADVERTISEMENT

ಹಾಸನ | ಕ್ರೀಡೆಯಿಂದ ಆತ್ಮವಿಶ್ವಾಸ, ಗೌರವ ಹೆಚ್ಚಳ: ಸಂಸದ ಶ್ರೇಯಸ್

ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:51 IST
Last Updated 20 ನವೆಂಬರ್ 2025, 4:51 IST
ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಬಾಲಕ–ಬಾಲಕಿಯರ ಕ್ರೀಡಾಕೂಟವನ್ನು ಸಂಸದ ಶ್ರೇಯಸ್ ಪಟೇಲ್‌ ಉದ್ಘಾಟಿಸಿದರು.
ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಬಾಲಕ–ಬಾಲಕಿಯರ ಕ್ರೀಡಾಕೂಟವನ್ನು ಸಂಸದ ಶ್ರೇಯಸ್ ಪಟೇಲ್‌ ಉದ್ಘಾಟಿಸಿದರು.   

ಹಾಸನ: ಕ್ರೀಡೆ ಎನ್ನುವುದು ಕೇವಲ ಮಾನಸಿಕ, ದೈಹಿಕ ಆರೋಗ್ಯಕ್ಕೆ ಸೀಮಿತವಾಗಿಲ್ಲ. ಆತ್ಮವಿಶ್ವಾಸ ಮತ್ತು ಗೌರವ ಹೆಚ್ಚಳವಾಗುತ್ತದೆ. ಈ ನಿಟ್ಟಿನಲ್ಲಿ ಕ್ರೀಡೆಗೆ ಹೆಚ್ಚು ಒತ್ತು ನೀಡುವಂತೆ ಸಂಸದ ಶ್ರೇಯಸ್ ಪಟೇಲ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಬುಧವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ 14 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ ಮತ್ತು 14 /17 ವಯೋಮಿತಿ ಬಾಲಕ ಮತ್ತು ಬಾಲಕಿಯರ ವಿಭಾಗ ಹಾಗೂ ರಾಜ್ಯಮಟ್ಟದ ಹಾಕಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಜಿಲ್ಲೆಗೆ ಇದು ಐತಿಹಾಸಿಕ ದಿನ. ಈ ಕ್ರೀಡಾಕೂಟ ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವುದು ನಮ್ಮ ಅದೃಷ್ಟ. ರಾಜ್ಯದ ಮೂಲೆ ಮೂಲೆಯಿಂದ ನಮ್ಮ ಜಿಲ್ಲೆಗೆ ಮಕ್ಕಳು ಬಂದಿರುವುದು ಸಂತಸವಾಗುತ್ತಿದೆ ಎಂದರು.

ADVERTISEMENT

ಆಟದಲ್ಲಿ ಗೆಲುವು– ಸೋಲು ಎನ್ನುವುದು ಸಾಮಾನ್ಯ. ಸೋತರೆ ಕುಗ್ಗದೇ ಮುನ್ನುಗ್ಗುವ ಕೆಲಸ ಮಾಡಿ. ಕ್ರೀಡೆಯಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳ ಹಾದಿಯಲ್ಲಿ ಮಕ್ಕಳು ಸಾಗಿ ಉತ್ತಮವಾದ ಸರ್ಕಾರಿ ಹುದ್ದೆಗಳನ್ನೂ ಅಲಂಕರಿಸಿ ಎಂದ ಅವರು, ಮನೆಯಲ್ಲಿ ತಂದೆ– ತಾಯಿಗೆ ಎಷ್ಟು ಗೌರವ ಕೊಡುತ್ತಿರೋ, ಅಷ್ಟೇ ಗೌರವವನ್ನು ಶಿಕ್ಷಕರಿಗೂ ಕೊಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಮಾತನಾಡಿದರು. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಲರಾಮ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ರಾಜ್ಯದ ವಿವಿಧ ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರು, ತೀರ್ಪುಗಾರರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.

8 ವರ್ಷದ ನಂತರ ರಾಜ್ಯಮಟ್ಟದ ಕ್ರೀಡಾಕೂಟ

ನಮ್ಮ ಜಿಲ್ಲೆಯಲ್ಲಿ 8 ವರ್ಷದ ನಂತರ ರಾಜ್ಯಮಟ್ಟದ ಕ್ರೀಡಾಕೂಟವನ್ನು ಉತ್ತಮವಾಗಿ ಆಯೋಜಿಸಲಾಗಿದೆ ಇದು ನಮಗೆ ಬಹಳ ಸಂತೋಷದ ಸಂಗತಿ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಸ್ವರೂಪ್ ಪ್ರಕಾಶ್ ಹೇಳಿದರು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಮಕ್ಕಳು ಕ್ರೀಡಾಕೂಟಕ್ಕೆ ಬಂದಿದ್ದಾರೆ. ಕ್ರೀಡೆ ಮುಗಿಯುವವರೆಗೂ ಎಲ್ಲರನ್ನು ಆಯಾ ಜಿಲ್ಲೆಯ ದೈಹಿಕ ಶಿಕ್ಷಕರು ಜೋಪಾನವಾಗಿ ನೋಡಿಕೊಳ್ಳಿ. ಎಲ್ಲ ಮಕ್ಕಳು ಉತ್ತಮವಾಗಿ ಆಟವಾಡಿ ಎಂದು ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.