ಹಾಸನದ ಹಾಸನಾಂಬ ದೇಗುಲದ ಗರ್ಭಗುಡಿಯಲ್ಲಿ ಶುಕ್ರವಾರ ಪೂಜೆ ಸಲ್ಲಿಸಲಾಯಿತು.
ಹಾಸನ: ಸಾರ್ವಜನಿಕರ ದರ್ಶನದ ಮೊದಲ ದಿನವಾದ ಶುಕ್ರವಾರ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಮಳೆಯ ನಡುವೆಯೂ ಅಪಾರ ಸಂಖ್ಯೆಯ ಜನರು ದೇವಿಯ ದರ್ಶನಕ್ಕೆ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ದೇಗುಲದ ಎದುರು ನಿಂತು ಪರಿಸ್ಥಿತಿಯನ್ನು ಅವಲೋಕಿಸಿದರು.
ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಕೊಡೆ ಹಿಡಿದು ದೇವಸ್ಥಾನದ ಬಳಿ ಪರಿಸ್ಥಿತಿ ಅವಲೋಕಿಸಿದರು. ಸ್ವತಃ ಸಚಿವರೇ ಧರ್ಮದರ್ಶನದ ಸರದಿ ಸಾಲನ್ನು ಕೆಲಕಾಲ ನಿಯಂತ್ರಿಸಿದ್ದು ಎಲ್ಲರ ಗಮನ ಸೆಳೆಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಐಪಿ, ವಿವಿಐಪಿ ಪಾಸ್ ರದ್ದು ಮಾಡಿರುವುದರಿಂದ ಜನರಿಗೆ ಅನುಕೂಲ ಆಗಿದೆ. ದೂರದ ರಾಯಚೂರು, ಕೊಪ್ಪಳದಿಂದ ಬಂದಿರುವ ಭಕ್ತರನ್ನ ಮಾತನಾಡಿಸಿದ್ದು, ಕೆಲವರಿಗೆ ಒಂದೂವರೆ ಗಂಟೆಯಲ್ಲಿ ದರ್ಶನ ಆಗಿದೆ. ನಮ್ಮಂತಹ ಜನಪ್ರತಿನಿಧಿಗಳಿಗೆ ಇದಕ್ಕಿಂತ ಸಂತಸದ ವಿಷಯ ಮತ್ತೇನಿದೆ ಎಂದರು.
ಯಾರೋ ಕೆಲವರ ಅನುಕೂಲಕ್ಕೆ ಹೆಚ್ಚಿನ ಜನರಿಗೆ ಅನಾನುಕೂಲ ಆಗಬಾರದು. ಬೆಳಿಗ್ಗೆಯಿಂದ ಈಗಾಗಲೇ ಸಾವಿರಾರು ಮಂದಿ ದರ್ಶನ ಮಾಡಿದ್ದಾರೆ. ವಿವಿಐಪಿ ಪಾಸ್ ವ್ಯವಸ್ಥೆ ಇದ್ದಿದ್ದರೆ ಇಷ್ಟು ಸುಲಲಿತ ದರ್ಶನ ವ್ಯವಸ್ಥೆ ಆಗುತ್ತಿತ್ತೆ ಎಂದು ಪ್ರಶ್ನಿಸಿದರು.
ಯಾರೋ ಶೇ 10ರಷ್ಟು ಜನರಿಗೆ ಬೇಸರ ಆಗಿರಬಹುದು. ಆದರೆ ಶೇ 90ರಷ್ಟು ಮಂದಿಗೆ ಸಂತಸವಾಗಿದೆ. ನಾಳೆಯಿಂದಲೂ ಹೀಗೆಯೇ ವ್ಯವಸ್ಥೆ ಇರಲಿದ್ದು, 2–3 ದಿನ ನೋಡಬೇಕು. ಯಾರಿಗೂ ಸಮಸ್ಯೆ ಆಗದಂತೆ ದರ್ಶನ ಆಗುತ್ತಿದೆ. ಈಗ ಆಗಿರುವ ವ್ಯವಸ್ಥೆ ಬಗ್ಗೆ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ದೇಶದ ಬೇರೆ ಬೇರೆ ಕಡೆ ಆಗಿರುವ ಘಟನೆ ನೆನಪಿಸಿಕೊಂಡು ಲಕ್ಷಾಂತರ ಜನರು ಸೇರುವ ಕಡೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು. ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ವಹಿಸುತ್ತೇವೆ. ಇದೇ ಜಿಲ್ಲಾಡಳಿತದ ಪ್ರಥಮ ಆದ್ಯತೆ ಎಂದರು.
ಗಣ್ಯರ ವಾಹನಗಳಿಗೆ ಪ್ರವೇಶವಿಲ್ಲ: ಈ ಬಾರಿ ಶಿಷ್ಟಾಚಾರ ಪಾಲನೆ ಸಂಬಂಧ ಕಟ್ಟುನಿಟ್ಟಿನ ನಿಯಮ ಪಾಲಿಸಲಾಗುತ್ತಿದ್ದು, ಹಾಲಿ ಹಾಗೂ ಮಾಜಿ ಶಾಸಕರು, ಸಚಿವರು ಹಾಗೂ ಅವರ ಕುಟುಂಬ ಸದಸ್ಯರಿಗೆ ಜಿಲ್ಲಾಡಳಿತದಿಂದಲೇ ವಾಹನ ವ್ಯವಸ್ಥೆ ಮಾಡಲಾಗಿದೆ.
ನಗರದ ಪ್ರವಾಸಿ ಮಂದಿರಕ್ಕೆ ತಮ್ಮದೇ ವಾಹನದಲ್ಲಿ ಬರುವ ಗಣ್ಯರನ್ನು, ಜಿಲ್ಲಾಡಳಿತದ ಶಿಷ್ಟಾಚಾರ ವಾಹನದಲ್ಲಿ ಕರೆ ತರಲಾಗುತ್ತಿದೆ. ಇಂದು ಶಾಸಕ ಎ.ಮಂಜು ಹಾಗೂ ಕುಟುಂಬದವರು ಶಿಷ್ಟಾಚಾರ ವಾಹನದಲ್ಲಿ ಬಂದು, ದೇವಿಯ ದರ್ಶನ ಪಡೆದರು.
ಒಳ್ಳೆಯ ವ್ಯವಸ್ಥೆ: ಎ. ಮಂಜು
ಕುಟುಂಬ ಸಮೇತನಾಗಿ ದೇವಿ ದರ್ಶನ ಪಡೆದಿದ್ದೇನೆ. ವಿಶೇಷವಾಗಿ ಒಳ್ಳೆಯ ವಾತಾವರಣ ಸೃಷ್ಟಿ ಮಾಡಲಾಗಿದ್ದು ಇದೇ ರೀತಿ ಕೊನೆಯವರೆಗೂ ನಡೆಯಬೇಕು. ನಾನು ಸಚಿವನಾಗಿದ್ದಾಗ ಜಾತ್ರಾ ಮಹೋತ್ಸವದ ಕೆಲಸ ಮಾಡಿದ್ದು ಈ ಬಾರಿ ವಿಭಿನ್ನವಾಗಿ ಜಿಲ್ಲಾಡಳಿತ ಆಯೋಜನೆ ಮಾಡಿದೆ ಎಂದು ಶಾಸಕ ಎ. ಮಂಜು ಹರ್ಷ ವ್ಯಕ್ತಪಡಿಸಿದರು. ಹಾಸನಾಂಬ ದೇವಿ ರಾಜ್ಯ ದೇಶದ ಜನತೆಗೆ ಒಳ್ಳೆಯದು ಮಾಡಲಿ ಎಂದು ಹಾರೈಸುತ್ತೇನೆ. ದೇವರು ಅದೇ ಭಕ್ತಿನೂ ಅದೇ ಬರುವವರು ಅವರೇ ಆದರೆ ಬರುವುದರಲ್ಲಿ ಬದಲಾವಣೆ ಮಾಡಿದ್ದಾರೆ. ಸಾಮಾನ್ಯ ಜನರಿಗೆ ದೇವಿ ದರ್ಶನಕ್ಕೆ ಒಳ್ಳೆಯ ವ್ಯವಸ್ಥೆ ಮಾಡಲಾಗಿದೆ. ಇದೇ ವ್ಯವಸ್ಥೆ ಮುಂದುವರೆದರೆ ಹೆಚ್ಚು ಅನುಕೂಲವಾಗಲಿದೆ. ಯಾವುದೇ ಒತ್ತಡಕ್ಕೆ ಮಣಿಯಬಾರದು. ನಾವು ರಾಜಕಾರಣಿಗಳು ಬಾಗಿಲು ಹಾಕಿಕೊಂಡು ಪೂಜೆ ಮಾಡಬಾರದು. ಒಂದು ಬಾರಿ ಬಂದು ಹೋದರೆ ಸಾಕು ಭಕ್ತರ ದರ್ಶನಕ್ಕೆ ಸಹಕಾರ ಕೊಡಬೇಕು ಎಂದು ಹೇಳಿದರು.
ವ್ಯವಸ್ಥಿತ ದರ್ಶನಕ್ಕೆ ಅವಕಾಶ
ಹಾಸನಾಂಬ ದರ್ಶನ ಪಡೆಯಲು ಜಿಲ್ಲೆ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಜನರು ಬರುತ್ತಾರೆ. ಅವರೆಲ್ಲರಿಗೂ ತಾಯಿ ಒಳ್ಳೆಯದನ್ನು ಮಾಡಲಿ. ರೈತರು ಗ್ರಾಮೀಣ ಜನರಿಗೆ ಒಳ್ಳೆಯದಾಗಲಿ ಕಾಲಕಾಲಕ್ಕೆ ಮಳೆಯಾಗಿ ಬೆಳೆ ಉತ್ತಮವಾಗಿ ಬೆಳೆಯಲಿ. ಅನುಕೂಲವಾದ ವಾತಾವರಣ ಆ ತಾಯಿ ಕರುಣಿಸಲಿ ಎಂದು ಪ್ರಾರ್ಥಿಸಿರುವುದಾಗಿ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಹೇಳಿದರು. ಈ ಬಾರಿಯ ಜಾತ್ರಾ ಮಹೋತ್ಸವ ವ್ಯವಸ್ಥಿತವಾಗಿ ಶಿಸ್ತಾಗಿ ನಡೆಯುತ್ತಿದೆ. ಇದೇ ರೀತಿ ಮುಂದುವರೆಯಲಿ. 13 ದಿನ ತಾಯಿ ದರ್ಶನ ಇರಲಿದ್ದು ಅದಕ್ಕೆ ಎಲ್ಲ ರೀತಿಯ ಅವಕಾಶ ಮಾಡಿಕೊಟ್ಟಿದ್ದಾರೆ. ಅದನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಎಚ್.ಡಿ. ದೇವೇಗೌಡರು ಚೆನ್ನಾಗಿದ್ದಾರೆ. ಇನ್ನು 2–3 ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.