ADVERTISEMENT

ಹಾಸನಾಂಬ ದರ್ಶನಕ್ಕೆ ನಿರೀಕ್ಷೆ ಮಿರಿ ಬರುತ್ತಿರುವ ಭಕ್ತಸಾಗರ:ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 1:48 IST
Last Updated 15 ಅಕ್ಟೋಬರ್ 2025, 1:48 IST
ಗಣ್ಯರ ಸಾಲಿನಲ್ಲಿ ಮಂಗಳವಾರ ಹೆಚ್ಚಿನ ಭಕ್ತರು ಸೇರಿದ್ದರು.
ಗಣ್ಯರ ಸಾಲಿನಲ್ಲಿ ಮಂಗಳವಾರ ಹೆಚ್ಚಿನ ಭಕ್ತರು ಸೇರಿದ್ದರು.   

ಹಾಸನ: ಹಾಸನಾಂಬ ದೇವಿ ಸಾರ್ವಜನಿಕ ದರ್ಶನಕ್ಕೆ ಮಂಗಳವಾರ ಐದನೇ ದಿನವಾಗಿದ್ದು, ಶುಕ್ರವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆ 5 ಗಂಟೆಯವರೆಗೆ 6,40,700 ಜನರು ದೇವಿಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ದೇಗುಲದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಂಗಳವಾರ ಬೆಳಿಗ್ಗೆಯಿಂದ‌ ಮಧ್ಯಾಹ್ನದವರೆಗೆ 1,22,600 ಭಕ್ತರು ದರ್ಶನ ಪಡೆದಿದ್ದಾರೆ. ಮೊದಲ ದಿನ ಐದೂವರೆ ಕಿ.ಮೀ. ಮಾರನೇ ದಿನ ಒಂದು ಕಿ.ಮೀ., ಮೂರನೇ ದಿನ ಮತ್ತೊಂದು ಕಿ.ಮೀ. ಸೇರಿದಂತೆ ಏಳೂವರೆ ಕಿ.ಮೀ. ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದೇವೆ. ಆದರೂ ಸಾಲುತ್ತಿಲ್ಲ. ಅದನ್ನು ಮೀರಿ ಜನ ಬಂದಿದ್ದಾರೆ. ಸೋಮವಾರ 1,10,1000 ಜನರನ್ನು ನಿರೀಕ್ಷೆ ಮಾಡಿದ್ದೇವು. ಆದರೆ 2,29,000 ಜನರು ದರ್ಶನ ಮಾಡಿದ್ದಾರೆ. ಬುಧವಾರ ಬೆಳಿಗ್ಗೆ 5 ಗಂಟೆಯವರೆಗೆ ಒಂದೂವರೆ ಲಕ್ಷ ಜನ ದರ್ಶನ ಮಾಡುವ ಸಾಧ್ಯತೆ ಇದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ, ವಾಡಿಕೆಗಿಂತ ಹೆಚ್ಚು ಜನ ಬಂದಿದ್ದಾರೆ’ ಎಂದು ತಿಳಿಸಿದರು.

‘ಸ್ವಚ್ಛತೆ, ಕುಡಿಯುವ ನೀರು, ಪ್ರಸಾದ, ಮಜ್ಜಿಗೆ ವ್ಯವಸ್ಥೆ ಮಾಡಿದ್ದೇವೆ. ಸೋಮವಾರ ನಿನ್ನೆ ಮೂರೂವರೆ ಗಂಟೆಯಲ್ಲಿ ದರ್ಶನ ಆಗಿದೆ. ಮಂಗಳವಾರ ದೇವಿ ದರ್ಶನಕ್ಕೆ 4 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಬರುವವರು ಮಾನಸಿಕವಾಗಿ ಸಿದ್ಧರಾಗಿ ಬರಬೇಕು. ಬರುವವರ ಸಂಖ್ಯೆ ದ್ವಿಗುಣವಾಗಿದೆ. ದರ್ಶನ ಸುಗಮವಾಗಿ ನಡೆದಿದೆ. ಜಿಲ್ಲಾಡಳಿತ ಹಗಲು-ರಾತ್ರಿ ಕೆಲಸ ಮಾಡುತ್ತಿದೆ. ಅರ್ಚಕರಿಗೆ ಮನವಿ ಮಾಡಿ ಸೋಮವಾರ ರಾತ್ರಿ 3 ರಿಂದ 5 ಗಂಟೆಯವರೆಗೆ ಗರ್ಭಗುಡಿ ಬಾಗಿಲು ಮುಚ್ಚದೇ ದರ್ಶನ ಮಾಡಿಸಿದ್ದೇವೆ. ಮಂಗಳವಾರ ಬೆಳಿಗ್ಗೆ 5 ಗಂಟೆಯವರೆಗೆ ದರ್ಶನ ಕಲ್ಪಿಸಿದ್ದೆವು. ಜನ ಸಂತೋಷದಿಂದ ದರ್ಶನ ಪಡೆಯುತ್ತಿದ್ದಾರೆ. ನಮ್ಮ ದೇವಿ ನಮಗೆ ವಾಪಸ್ ಬಂದಿದ್ದಾಳೆ ಎಂದು ಸಂತಸ ಪಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT
ಅಂಗವಿಕಲರು ವೃದ್ಧರನ್ನು ಗಾಲಿ ಕುರ್ಚಿಯಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

‘ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ರೈತರು, ದುಡಿಯವ ವರ್ಗದವರು ದೇವಿ ದರ್ಶನಕ್ಕೆ ಬರುತ್ತಿದ್ದಾರೆ. ಮುಂದಿನ ಎಂಟು ದಿನ ಹಾಸನಾಂಬೆ ದರ್ಶನ ಇರಲಿದ್ದು, ಹಿಂದಿನ ವರ್ಷಕ್ಕಿಂತ ಶೇ 50 ರಿಂದ ಶೇ100 ರಷ್ಟು ಹೆಚ್ಚಿನ ಜನ ಬರುವ ನಿರೀಕ್ಷೆ ಇದೆ. ದೇವಾಲಯಕ್ಕೆ ಎಷ್ಟೇ ಜನ ಬಂದರೂ ಎಲ್ಲರಿಗೂ ದೇವರ ದರ್ಶನಕ್ಕೆ ಸಕಲ ಸಿದ್ಧತೆ ಮಾಡುವುದು ನಮ್ಮ ಜವಾಬ್ದಾರಿ’ ಎಂದರು.

ಸ್ಕೌಟ್ ಮತ್ತು ಗೈಡ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ ಹಾಸನಾಂಬ ದರ್ಶನ ಪಡೆದರು.

‘ಮಂಗಳವಾರ ಬೆಳಿಗ್ಗೆ 5 ಗಂಟೆಯವರೆಗೆ ₹1ಸಾವಿರ ಹಾಗೂ ₹ 300 ವಿಶೇಷ ದರ್ಶನದ ಟಿಕೆಟ್, ಲಾಡು ಪ್ರಸಾದ ಮಾರಾಟದಿಂದ ₹ 4,21,73,760 ಬಂದಿದೆ. ಕಳೆದ ವರ್ಷಕ್ಕಿಂತ ₹ 1 ಕೋಟಿ ಹೆಚ್ಚಿಗೆ ಬಂದಿದೆ. ಮಂಗಳವಾರ ಮಧ್ಯಾಹ್ನದವರೆಗೆ ₹ 1 ಸಾವಿರ ಬೆಲೆಯ 3,600 ಟಿಕೆಟ್, ₹ 300 ದರದ 6ಸಾವಿರ ಟಿಕೆಟ್‌ ಮಾರಾಟ ಆಗಿವೆ’ ಎಂದು ತಿಳಿಸಿದರು.

ಹೆಚ್ಚಿದ ಭಕ್ತರ ಸಂಖ್ಯೆ:

ನಗರದ ಹಾಸನಾಂಬ ದೇಗುಲದ ಸುತ್ತಲಿನ ಪ್ರದೇಶಗಳಲ್ಲಿ ಎಲ್ಲಿ ನೋಡಿದರೂ ಜನರ ಸರದಿ ಸಾಲು ಕಾಣುತ್ತಿತ್ತು. ₹1 ಸಾವಿರ, ₹300 ದರದ ಟಿಕೆಟ್‌ ಪಡೆದವರೂ ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆಯಬೇಕಾಯಿತು.

ಮಾರುಕಟ್ಟೆ ಬಳಿ ಇರುವ ₹300 ದರದ ಟಿಕೆಟ್ ಸರದಿ.

ಇನ್ನು ಧರ್ಮದರ್ಶನದ ಸಾಲು ದೇಗುಲದಿಂದ ಎರಡು ಕಿ.ಮೀ. ದೂರದವರೆಗೆ ಸಾಗಿತ್ತು. ಸಂತೇಪೇಟೆ ಸರ್ಕಲ್‌ನಿಂದ ಆರಂಭವಾಗಿದ್ದ ಸಾಲಿನಲ್ಲಿ ತೆರಳಿದ ಜನರು, 5 ಗಂಟೆಯಲ್ಲಿ ದರ್ಶನ ಪಡೆದರು.

ಶಿಷ್ಟಾಚಾರ ನಿಯಮದಡಿ ಮಾಜಿ ಸಚಿವ ಗೋಪಾಲಯ್ಯ, ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಎಚ್.ಕೆ. ಸುರೇಶ್, ವಿನಯ್ ಗುರೂಜಿ, ನಯನಾ ಮೋಟಮ್ಮ, ಛಲವಾದಿ ನಾರಾಯಣಸ್ವಾಮಿ, ಪಿಜಿಆರ್ ಸಿಂಧ್ಯಾ, ಪ್ರಥಮ್, ಚಿತ್ರ ನಟ ವಸಿಷ್ಠ ಸಿಂಹ, ಹರಿಪ್ರಿಯಾ, ಸೇರಿದಂತೆ ಇತರ ಗಣ್ಯರು ಇಂದು ಹಾಸನಾಂಬಾ ದೇವಿ ದರ್ಶನ ಪಡೆದರು.

ಚಿತ್ರ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿ ಮಗುವಿನೊಂದಿಗೆ ಹಾಸನಾಂಬೆ ದರ್ಶನ ಪಡೆದರು.

ಟಿಕೆಟ್ ಪ್ರಸಾದ ವಿನಿಯೋಗದಿಂದ ₹ 4.21 ಕೋಟಿ ಆದಾಯ ಬಂದಿದೆ. ಆದಾಯ ದೊಡ್ಡ ವಿಚಾರವಲ್ಲ. ಆದಾಯ ಬರಲಿ ಬಿಡಲಿ. ಬಂದ ಜನಕ್ಕೆ ಉತ್ತಮ ಸೌಕರ್ಯ ಒದಗಿಸುವುದಷ್ಟೆ ನಮ್ಮ ಗುರಿ
ಕೃಷ್ಣ ಬೈರೇಗೌಡ ಜಿಲ್ಲಾ ಉಸ್ತುವಾರಿ ಸಚಿವ
ಸರದಿಯಲ್ಲಿ ತೆರಳುತ್ತಿದ್ದ ಭಕ್ತರನ್ನು ಭೇಟಿ ಮಾಡಿದ ಸಚಿವ ಕೃಷ್ಣ ಬೈರೇಗೌಡ ವ್ಯವಸ್ಥೆಯ ಕುರಿತು ಮಾಹಿತಿ ಪಡೆದರು.
ಈ ಬಾರಿಯ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದ್ದು. ರಾಜ್ಯದಲ್ಲಿ ಹಿಂದುಳಿದ ದಲಿತ ಹಾಗೂ ಎಲ್ಲಾ ಸಮಾಜದವರು ಸುಭಿಕ್ಷವಾಗಿ ನೆಮ್ಮದಿಯಿಂದ ಬಾಳಲಿ ಎಂದು ಪ್ರಾರ್ಥಿಸಿದ್ದೇನೆ
ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
ರೇವಣ್ಣ ವಿಷಯ ಬೆಳೆಸಲ್ಲ
ಮಾಜಿ ಸಚಿವ ಎಚ್.ಡಿ‌.ರೇವಣ್ಣ ಅವರ ಎಸ್ಕಾರ್ಟ್ ವಾಹನದಿಂದ ನಮಗೆ ಸಂವಹನ ಇತ್ತು. ನಾವು ಪ್ರವಾಸಿ ಮಂದಿರಕ್ಕೆ ಕರೆದುಕೊಂಡು ಬನ್ನಿ ಎಂದು ಹೇಳಿದ್ದೇವು. ಆದರೆ ಅವರು ಬರಲಿಲ್ಲ. ಅದು ಅವರವರ ಧರ್ಮ. ಎಲ್ಲರೂ ಹೋಗುವಾಗ ನಾವು ಅಲ್ಲಿಯೇ ಹೋಗಬೇಕು ಎನ್ನುವುದು ಧರ್ಮ. ನಾನು ಅದರ ಬಗ್ಗೆ ಹೆಚ್ಚಿಗೆ ಮಾತನಾಡಲ್ಲ ಬೆಳೆಸಲ್ಲ ಎಂದು ಕೃಷ್ಣ ಬೈರೇಗೌಡ ಹೇಳಿದರು. ಅವರಿಗೆ ಹಾಸನಾಂಬ ಮೇಲೆ ವಿಶೇಷ ಭಾವನೆ ಪ್ರತೀತಿ ಇಟ್ಟುಕೊಂಡು ಬಂದಿದ್ದಾರೆ. ಬಂದು ಪೂಜೆ ಮಾಡಿಕೊಂಡು ಹೋಗಿದ್ದಾರೆ ಹೋಗಲಿ ಬಿಡಿ. ಇದು ದೊಡ್ಡ ವಿಷಯ ಅಲ್ಲ. ಅದನ್ನು ದೊಡ್ಡದು ಮಾಡಲು ಹೋಗಲ್ಲ ಎಂದರು.

ಸಮೀಕ್ಷೆ ಹೆಸರಿನಲ್ಲಿ ಸಮಾಜ ಒಡೆಯುವ ಯತ್ನ: ಯತ್ನಾಳ

ರಾಜ್ಯದಲ್ಲಿ ಸಮೀಕ್ಷೆ ನೆಪದಲ್ಲಿ ಸಮಾಜವನ್ನು ಒಡೆಯಲು ಸಿದ್ದರಾಮಯ್ಯ ಸರ್ಕಾರ ಹೊರಟಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲಿಂಗಾಯತ ವೀರಶೈವ ಧರ್ಮದ ಆ ಪಕ್ಷದ ಈಶ್ವರ್ ಖಂಡ್ರೆ ಎಂ.ಬಿ ಪಾಟೀಲ್ ಶ್ಯಾಮನೂರು ಶಿವಶಂಕರಪ್ಪ ತಮ್ಮ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಹೊರಟಿದ್ದಾರೆಯೇ ಹೊರತು ಸಮಾಜದ ಉಳಿಸಲಿಕ್ಕಾಗಿ ಅಲ್ಲ ಎಂದು ಟೀಕಿಸಿದರು.

ಇದೇ ರೀತಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ 2028 ರಲ್ಲಿ ರಾಜ್ಯದ ಜನ ತಕ್ಕ ಉತ್ತರ ನೀಡಲಿದ್ದಾರೆ. ನೂರಕ್ಕೆ ನೂರರಷ್ಟು ಹಿಂದೂ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು. ಇತ್ತೀಚೆಗೆ ಮಂಡ್ಯ ಜಿಲ್ಲೆಗೆ ತೆರಳಿದಾಗ ಅಲ್ಲಿನ ಜನರು ಪುಷ್ಪಾರ್ಚನೆ ಮೂಲಕ ನನ್ನನ್ನು ಸ್ವಾಗತಿಸಿದ್ದಾರೆ.

ಮುಂದಿನ ಮುಖ್ಯಮಂತ್ರಿ ನೀವೇ ಎಂದು ಘೋಷಣೆ ಕೂಗಿದ್ದಾರೆ. ಮುಖ್ಯಮಂತ್ರಿ ಆಯ್ಕೆಗೆ ಜನಾಭಿಪ್ರಾಯವೇ ಮುಖ್ಯ. ರಾಷ್ಟ್ರದಲ್ಲಿ ಮೋದಿ ಅವರ ಮೇಲಿನ ಜನರ ವಿಶ್ವಾಸವೇ ಅವರನ್ನು ಇಂದೂ ಪ್ರಧಾನಿ ಹುದ್ದೆಯನ್ನು ಅಲಂಕರಿಸುವಂತೆ ಮಾಡಿದೆ. ರಾಜ್ಯದಲ್ಲೂ ಅದೇ ರೀತಿ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದರು.

ಆರ್‌ಎಸ್‌ಎಸ್‌ ನಿಷೇಧ ಸರಿಯಲ್ಲ: ಗೋಪಾಲಯ್ಯ

ಹಾಸನ: ಇತಿಹಾಸ ಇರುವ ಆರ್‌ಎಸ್‌ಎಸ್ ನಿಷೇಧ ಮಾಡುವುದು ಸಮಂಜಸವಲ್ಲ. ಈ ದೇಶ ಮತ್ತು ರಾಜ್ಯ ಉಳಿಯಬೇಕೆಂದರೆ ಆರ್‌ಎಸ್‌ಎಸ್ ಇರಲೇಬೇಕು ಎಂದು ಶಾಸಕ ಕೆ. ಗೋಪಾಲಯ್ಯ ತಿಳಿಸಿದರು. ಹಾಸನಾಂಬೆ ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿ ದೇವಿಯ ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆರ್‌ಎಸ್‌ಎಸ್‌ ದೇಶಪ್ರೇಮ ಸೇವಾ ಮನೋಭಾವ ಮತ್ತು ಶಿಸ್ತಿನ ಆಧಾರದ ಮೇಲೆ ನಿರ್ಮಿತವಾಗಿದೆ. ನಾವು ಈ ರಾಜ್ಯದಲ್ಲೇ ಹುಟ್ಟಿ ಬೆಳೆದವರು. ರಾಷ್ಟ್ರದ ಹಿತವನ್ನು ಕಾಪಾಡುವ ಕೆಲಸ ಮಾಡುತ್ತಿದ್ದೇವೆ. ಆರ್‌ಎಸ್‌ಎಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದರು.

ನಾನು ಜಿಲ್ಲೆಯಲ್ಲಿ ಉಸ್ತುವಾರಿ ಸಚಿವನಾಗಿದ್ದ ಸಮಯದಲ್ಲಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಇಂದು ಹಾಸನಾಂಬೆ ದೇವಿ ಹಾಗೂ ಸಿದ್ದೇಶ್ವರ ದೇವರ ದರ್ಶನ ಮಾಡಿಕೊಂಡಿದ್ದೇನೆ. ಪ್ರತಿ ವರ್ಷ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ. ಬೇರೆ ರಾಜ್ಯಗಳಿಂದಲೂ ಜನರು ದರ್ಶನಕ್ಕಾಗಿ ಬರುತ್ತಿದ್ದಾರೆ. ಇದು ಪುಣ್ಯ ಸ್ಥಳವಾಗಿದ್ದು ಪ್ರತಿಯೊಬ್ಬರೂ ನೋಡುವಂಥ ಕ್ಷೇತ್ರ. ರಾಜ್ಯದ ಜನತೆಗೆ ಒಳ್ಳೆಯ ಮಳೆ ಬೆಳೆ ಮತ್ತು ಶಾಂತಿಯ ಜೀವನಕ್ಕಾಗಿ ಹಾಸನಾಂಬ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.