ADVERTISEMENT

ಕಾವೇರಿ ನೀರು ವಿವಾದ: ಸರ್ಕಾರದ ಕ್ರಮ ನೋಡಿ ಪ್ರತಿಕ್ರಿಯೆ– ಎಚ್‌.ಡಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2023, 14:46 IST
Last Updated 26 ಸೆಪ್ಟೆಂಬರ್ 2023, 14:46 IST
ಎಚ್‌.ಡಿ ದೇವೇಗೌಡ
ಎಚ್‌.ಡಿ ದೇವೇಗೌಡ    

ಹಾಸನ: ‘ನಿತ್ಯ 3 ಸಾವಿರ ಕ್ಯುಸೆಕ್‌ ನೀರು ನೀಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ. ನೀರು ಒದಗಿಸಲು ನಮ್ಮಿಂದ ಆಗುವುದಿಲ್ಲ. ಇನ್ನೂ ಸರ್ಕಾರದ ನಿಲುವು ಸ್ಪಷ್ಟವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನನ್ನ ಅಭಿಪ್ರಾಯ ಕೊಡುವುದು ಸೂಕ್ತವಲ್ಲ’ ಎಂದು ರಾಜ್ಯಸಭಾ ಸದಸ್ಯ ಎಚ್‌.ಡಿ. ದೇವೇಗೌಡ ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸರ್ಕಾರದ ನಿಲುವು ಬಂದ ಮೇಲೆ ನನ್ನ ಅಭಿಪ್ರಾಯ ಹೇಳುತ್ತೇನೆ. ಸರ್ಕಾರದ ತೀರ್ಮಾನಕ್ಕೆ ನಾನು ಮತ್ತು ಎಚ್‌.ಡಿ.ಕುಮಾರಸ್ವಾಮಿ ಸಹಕರಿಸಬೇಕಾಗುತ್ತದೆ’ ಎಂದರು.

‘ಕುಮಾರಸ್ವಾಮಿ ಜಲಾಶಯಕ್ಕೆ ಭೇಟಿ ನೀಡಿ, ಅಲ್ಲಿ ನೀರು ಎಷ್ಟಿದೆ ಎಂಬ ವಿವರ ಪಡೆದು ಬಂದ ನಂತರ, ಅದನ್ನು ಆಧರಿಸಿ ನಾಲ್ಕು ದಿನಗಳ ಹಿಂದೆಯೇ ವಿವರವಾಗಿ ಪ್ರಧಾನಿಗೆ ಪತ್ರ ಬರೆದಿದ್ದೇನೆ. ನಿಷ್ಪಕ್ಷಪಾತವಾಗಿ ಎರಡೂ ರಾಜ್ಯಗಳ ಸ್ಥಿತಿಯನ್ನು ಪ್ರಾಧಿಕಾರ ಪರಿಶೀಲಿಸಲಿ’ ಎಂದರು.

ADVERTISEMENT

‘ಎರಡು ರಾಜ್ಯಗಳ ಜಲಾಶಯಗಳ ಸ್ಥಿತಿಗತಿ ಹಾಗೂ ಬರ ಪರಿಸ್ಥಿತಿಯನ್ನು ಅವಲೋಕಿಸಿ, ತೀರ್ಮಾನ ಕೈಗೊಳ್ಳುವ ಅವಶ್ಯಕತೆ ಇದೆ. ಈ ಸಂಬಂಧ ಒಂದು ತಂಡವನ್ನು ಕಳುಹಿಸಿ ವಾಸ್ತವ ಸ್ಥಿತಿ ಅರಿಯಬೇಕು’ ಎಂದರು.

‘ಕಾವೇರಿ ವಿಷಯದಲ್ಲಿ ತಮಿಳುನಾಡಿನಲ್ಲಿ ಇರುವ ಐಕ್ಯತೆ, ನಮ್ಮಲ್ಲಿ ಇಲ್ಲ ಎಂದು ಹಲವಾರು ಬಾರಿ ಹೇಳಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.