ADVERTISEMENT

ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ | ಡಿಕೆಶಿಗೆ ಜ್ಞಾನೋದಯವಾಗಿದೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 18:56 IST
Last Updated 26 ಫೆಬ್ರುವರಿ 2026, 18:56 IST
   

ಅರಕಲಗೂಡು (ಹಾಸನ):‘ಗ್ಯಾರಂಟಿಗಳಿಗೆ ಖರ್ಚು ಮಾಡಿದ ಹಣವನ್ನು ರಾಜ್ಯ ಸರ್ಕಾರವು ಶಾಲೆ–ಆಸ್ಪತ್ರೆಗಳಿಗೆ ವಿನಿಯೋಗಿಸಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು. ಈಗ ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ. ಅವಧಿ ಮುಗಿದ ಔಷಧಿ ವಿತರಿಸಲಾಗುತ್ತಿದೆ’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

‘ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ’ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತಾಲ್ಲೂಕಿನ ಕೊಡಕಹಳ್ಳಿಯಲ್ಲಿ ಗುರುವಾರ ಸುದ್ದಿಗಾರರಿಗೆ ‍‍ಪ್ರತಿಕ್ರಿಯಿಸಿ, ‘ಅವರಿಗೆ ತಡವಾಗಿ ಜ್ಞಾನೋದಯವಾಗಿದೆ. ಇದೇ ಮಾತನ್ನು ಆರ್‌.ವಿ. ದೇಶಪಾಂಡೆ ಹಾಗೂ ಬಸವರಾಜ ರಾಯರೆಡ್ಡಿ ಮೊದಲೇ ಹೇಳಿದ್ದರು’ ಎಂದರು.

‘ರಾಜ್ಯದ ಜನರ ಬಗ್ಗೆ ಭಯಭಕ್ತಿ ಇದ್ದರೆ, ದೇವರಾಜ ಅರಸು ಜೊತೆಗೆ ಹೋಲಿಸುವುದನ್ನು ಬಿಟ್ಟು, ಮುಂದಿನ ಎರಡು ವರ್ಷಗಳಾದರೂ ಸರಿಯಾದ ಆಡಳಿತ ನೀಡಲಿ. ಸರ್ಕಾರದ ಕಾರ್ಯವೈಖರಿ ನೋಡಿದರೆ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಇದೆಯೇ ಎಂದು ಅನುಮಾನವಾಗುತ್ತದೆ. ಜಿ.ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂಬ ಮಾತುಗಳು ಕೇಳಿಬರುತ್ತಿವೆ. ಕುರ್ಚಿ ಉಳಿಸಿಕೊಳ್ಳಲು ದಿನಕ್ಕೊಬ್ಬರ ಹೆಸರನ್ನು ಎಳೆದು ತರಲಾಗುತ್ತಿದೆ’ ಎಂದು ಟೀಕಿಸಿದರು.

ADVERTISEMENT

ಗುಂಡ್ಲುಪೇಟೆಯಲ್ಲಿ ಮಾತನಾಡಿದ ಅವರು‌, ‘ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ತಲುಪಿದ್ದಾರೆ. ‌ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ತಿಂಗಳಾಂತ್ಯಕ್ಕೆ ಹಣ ಬಿಡುಗಡೆಯಾಗುತ್ತಿತ್ತು. ಯಾವ ಗುತ್ತಿಗೆದಾರರೂ ಕಮಿಷನ್ ಆರೋಪ ಮಾಡಿರಲಿಲ್ಲ, ಹಣ ಬಿಡುಗಡೆ ವಿಳಂಬವಾಗುತ್ತಿದೆ ಎಂದೂ ಟೀಕಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರು ಕಾಮಗಾರಿಗಳಿಗೆ ಹಣ ಹೊಂದಿಸಲು ಹೆಂಡತಿ, ಮಕ್ಕಳ ಆಭರಣ ಅಡವಿಡುವ ಪರಿಸ್ಥಿತಿಗೆ ಬಂದಿದ್ದಾರೆ’ ಎಂದರು.